ಪೋರ್ಟ್ ಲೂಯಿಸ್, ಮಾ. 11-ಎರಡು ದಿನಗಳ ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಾರಿಷಸ್ ಗೆ ಆಗಮಿಸಿದ್ದಾರೆ. ದ್ವೀಪ ರಾಷ್ಟ್ರದ ರಾಷ್ಟ್ರೀಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಭಾಗವಹಿಸಲಿದ್ದಾರೆ ಮತ್ತು ದೇಶದ ಉನ್ನತ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ.
ಮಾರಿಷಸ್ ಪ್ರಧಾನಿ ನವೀನ್ ರಾಮ್ ಗೂಲಮ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅವರ ಭೇಟಿಯ ಸಂದರ್ಭ ದಲ್ಲಿ, ಸಾಮರ್ಥ್ಯ ವರ್ಧನೆ, ವ್ಯಾಪಾರ ಮತ್ತು ಗಡಿಯಾಚೆಗಿನ ಆರ್ಥಿಕ ಅಪರಾಧಗಳನ್ನು ನಿಭಾಯಿಸುವ ಕ್ಷೇತ್ರಗಳಲ್ಲಿ ಸಹಕಾರವನ್ನು ಒದಗಿಸುವ ಹಲವಾರು ಒಪ್ಪಂದಗಳಿಗೆ ಉಭಯ ದೇಶಗಳು ಸಹಿ ಹಾಕಲಿವೆ.
ಮಾರಿಷಸ್‌ಗೆ ತೆರಳುವ ಮೊದಲು, ಮೋದಿ ಸೋಮವಾರ ತಮ್ಮ ಭೇಟಿಯು ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಹೊಸ ಮತ್ತು ಪ್ರಕಾಶಮಾನವಾದ ಅಧ್ಯಾಯವನ್ನು ತೆರೆಯುತ್ತದೆ ಎಂದು ಹೇಳಿದ್ದರು.
ಮೋದಿ ಅವರು ಮಾರಿಷಸ್ ಅಧ್ಯಕ್ಷರನ್ನು ಭೇಟಿ ಮಾಡಲಿದ್ದಾರೆ, ಪ್ರಧಾನಿಯನ್ನು ಭೇಟಿ ಮಾಡಲಿದ್ದಾರೆ ಮತ್ತು ದ್ವೀಪ ರಾಷ್ಟ್ರದ ಹಿರಿಯ ಗಣ್ಯರು ಮತ್ತು ರಾಜಕೀಯ ಪಕ್ಷಗಳ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ.ಅವರು ಭಾರತೀಯ ಸಮುದಾಯದ ಸದಸ್ಯರೊಂದಿಗೆ ಸಂವಾದ ನಡೆಸಲಿದ್ದಾರೆ ಮತ್ತು ಭಾರತದ ಅನುದಾನದ ನೆರವಿನೊಂದಿಗೆ ನಿರ್ಮಿಸಲಾದ ನಾಗರಿಕ ಸೇವಾ ಕಾಲೇಜು ಮತ್ತು ಪ್ರದೇಶ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ.