Thursday, January 9, 2025
Homeರಾಜ್ಯಮೂರನೇ ದಿನಕ್ಕೆ ಕಾಲಿಟ್ಟಿ ಆಶಾ ಕಾರ್ಯಕರ್ತೆಯ ಅನಿರ್ಧಿಷ್ಟಾವಧಿ ಧರಣಿ

ಮೂರನೇ ದಿನಕ್ಕೆ ಕಾಲಿಟ್ಟಿ ಆಶಾ ಕಾರ್ಯಕರ್ತೆಯ ಅನಿರ್ಧಿಷ್ಟಾವಧಿ ಧರಣಿ

ಬೆಂಗಳೂರು,ಜ.9- ಕನಿಷ್ಠ ವೇತನ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅಹೋರಾತ್ರಿ ಅನಿರ್ಧಿಷ್ಟಾವಧಿ ಧರಣಿ ಸಚಿವರ ಭರವಸೆ ಹೊರತಾಗಿ ಮೂರನೇ ದಿನಕ್ಕೆ ಕಾಲಿಟ್ಟಿದೆ. ಕನಿಷ್ಟ ವೇತನ 15 ಸಾವಿರ ರೂ. ನಿಗದಿ ಮಾಡಬೇಕು ಎಂಬ ಪ್ರಮುಖ ಬೇಡಿಕೆಯನ್ನು ಮುಂದಿಟ್ಟುಕೊಂಡು ಆಶಾ ಕಾರ್ಯಕರ್ತರು ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಕೊರೆವ ಚಳಿಯನ್ನೂ ಲೆಕ್ಕಿಸದೆ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಅನಿರ್ಧಿಷ್ಟಾವಧಿ ಧರಣಿ ಕೈಬಿಟ್ಟು ಆರೋಗ್ಯ ಸೇವೆಗಳತ್ತ ಮರಳುವಂತೆ ಸಚಿವ ದಿನೇಶ್‌ಗುಂಡೂರಾವ್‌ ಮನವಿ ಮಾಡಿದರು. ಆದರೆ ಇದಕ್ಕೆ ಆಶಾಕಾರ್ಯಕರ್ತರು ಒಪ್ಪಲಿಲ್ಲ.

ಕನಿಷ್ಟ ವೇತನವನ್ನು 15 ಸಾವಿರ ರೂ.ಗಳಿಗೆ ನಿಗದಿ ಮಾಡಲೇಬೇಕು ಎಂದು ಪಟ್ಟು ಹಿಡಿದರು. ಈ ವೇಳೆ ಮಾತನಾಡಿದ ದಿನೇಶ್‌ಗುಂಡೂರಾವ್‌, ಆಶಾಕಾರ್ಯಕರ್ತರಿಗೆ ಪ್ರಸ್ತುತ ನೀಡಲಾಗುತ್ತಿರುವ 8 ಸಾವಿರ ರೂ. ಖಚಿತ ಗೌರವ ಧನದ ಬದಲಾಗಿ 9,500 ರೂ.ಗಳನ್ನು ಮುಂಗಡವಾಗಿ ನೀಡಲು ಸರ್ಕಾರ ಸಿದ್ಧವಿದೆ. ಗೌರವಧನ ಹೆಚ್ಚಳದ ಬೇಡಿಕೆಯನ್ನು ಮುಂದಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಗಣಿಸಲಿದ್ದಾರೆ ಎಂದು ಹೇಳಿದರು.

ಕನಿಷ್ಟ ವೇತನ 15 ಸಾವಿರ ರೂ. ನಿಗದಿ ಮಾಡಬೇಕು ಎಂಬ ಬೇಡಿಕೆ ಕೇಂದ್ರಸರ್ಕಾರದ ಮೇಲೆ ಅವಲಂಬಿತವಾಗಿದೆ. ಪ್ರಸ್ತುತ ವ್ಯವಸ್ಥೆಯಲ್ಲಿ ಆರ್‌ಸಿಎಚ್‌ ಪೋರ್ಟಲ್‌ನಲ್ಲಿ ಆಶಾ ಕಾರ್ಯಕರ್ತರ ಕಾರ್ಯಚಟುವಟಿಕೆಗಳ ಆಧಾರದ ಮೇಲೆ ಪ್ರೋತ್ಸಾಹ ಧನ ನೀಡಲಾಗುತ್ತದೆ. ಇದನ್ನು ಮಾಸಿಕ ವೇತನ ರೂಪದಲ್ಲಿ ನಿಗದಿಪಡಿಸಿ ಪಾವತಿ ಮಾಡುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟಸಾಧ್ಯ.
ಸರಾಸರಿ 9,500 ರೂ.ಗಳನ್ನು ಮುಂಗಡವಾಗಿ ನೀಡಲು ರಾಜ್ಯಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು. ಆದರೆ ಇದಕ್ಕೆ ಆಶಾ ಕಾರ್ಯಕರ್ತರು ಸ್ಪಂದಿಸಲಿಲ್ಲ. ಕನಿಷ್ಟ ವೇತನವನ್ನು ನಿಗದಿ ಮಾಡಲೇಬೇಕು ಎಂದು ಪಟ್ಟು ಹಿಡಿದರು.


ರಾಜ್ಯಸರ್ಕಾರದ ತನ್ನ ವ್ಯಾಪ್ತಿಯಲ್ಲಿರುವ ಭರವಸೆಗಳನ್ನು ಮನವರಿಕೆ ಮಾಡಿಕೊಟ್ಟರೆ ಇದನ್ನು ಮೀರಿ ಪ್ರತಿಭಟನೆ ಮುಂದುವರೆಸುವುದನ್ನು ನಿಮಲ್ಲಿಯೇ ಚರ್ಚೆ ಮಾಡಿ ಸೂಕ್ತ ನಿರ್ಧಾರ ತೆಗೆದುಕೊಳ್ಳಿ ಎಂದು ಸಚಿವರು ತಿಳಿಹೇಳಿದರು. ಆದರೆ ಕಾರ್ಯಕರ್ತರು ಅದಕ್ಕೆ ಜಗ್ಗದೇ ಇದ್ದಾಗ ಮನವಿ ಪತ್ರ ಪಡೆದು ದಿನೇಶ್‌ಗುಂಡೂರಾವ್‌ ನಿರ್ಗಮಿಸಿದರು.

ಕೊರೆವ ಚಳಿಯಲ್ಲಿ ಫ್ರೀಡಂಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಹಲವು ಮಹಿಳೆಯರು ಚಿಕ್ಕ ಮಕ್ಕಳೊಂದಿಗೆ ಅಲ್ಲಿಯೇ ಮಲಗಿದ್ದುದು ಮನಕಲಕುವಂತಿತ್ತು.
ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್‌‍ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರ ವೇತನ ಹೆಚ್ಚಳದ ಬಗ್ಗೆ ಭರವಸೆ ನೀಡಿತ್ತು. ಆದರೆ ಚುನಾವಣೆ ಬಳಿಕ ಸರ್ಕಾರ ರಚನೆಯಾದ ನಂತರ ಪಂಚಖಾತ್ರಿ ಯೋಜನೆಗೆ ಜೋತುಬಿದ್ದು ಉಳಿದೆಲ್ಲಾ ಭರವಸೆಗಳನ್ನು ಕಡೆಗಣಿಸಲಾಗುತ್ತಿದೆ. ಹೀಗಾಗಿ ಆಶಾ ಕಾರ್ಯಕರ್ತರು ಧರಣಿ ಮಾರ್ಗ ಹಿಡಿದಿದ್ದಾರೆ.

RELATED ARTICLES

Latest News