Friday, July 4, 2025
Homeರಾಜ್ಯಆಷಾಡ ಶುಕ್ರವಾರ : ರಾಜಕೀಯ ಹಾಗೂ ಸಿನಿಮಾ ಮಂದಿ ಸೇರಿದಂತೆ ಚಾಮುಂಡಿ ದರ್ಶನಕ್ಕೆ ಹರಿದುಬಂದ ಭಕ್ತಸಾಗರ

ಆಷಾಡ ಶುಕ್ರವಾರ : ರಾಜಕೀಯ ಹಾಗೂ ಸಿನಿಮಾ ಮಂದಿ ಸೇರಿದಂತೆ ಚಾಮುಂಡಿ ದರ್ಶನಕ್ಕೆ ಹರಿದುಬಂದ ಭಕ್ತಸಾಗರ

Ashada Friday Puja at Chamundi Hill Temple

ಮೈಸೂರು,ಜು.4- ಎರಡನೇ ಆಷಾಡ ಶುಕ್ರವಾರ ಹಿನ್ನೆಲೆಯಲ್ಲಿ ನಾಡಿನ ಅಧಿದೇವತೆ ಚಾಮುಂಡೇಶ್ವರಿ ದರ್ಶನಕ್ಕೆ ಇಂದು ಭಕ್ತಸಾಗರವೇ ಹರಿದುಬಂದಿತ್ತು. ಇಂದು ಬೆಳಗ್ಗೆ 3.30ರಿಂದಲೇ ದೇವಿಗೆ ವಿವಿಧ ಅಭಿಷೇಕ, ಅರ್ಚನೆ, ಮಹಾಮಂಗಳಾರತಿ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. 6 ಗಂಟೆಯ ನಂತರ ಸಾರ್ವಜನಿಕರ ದರ್ಶನಕ್ಕೆ ಅನುಕೂಲ ಮಾಡಿಕೊಡಲಾಗಿದ್ದು, ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.

ಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸಿದ ಚಾಮುಂಡೇಶ್ವರಿ ಇಂದು ದೇವಿಗೆ ಲಕ್ಷ್ಮೀ ಅಲಂಕಾರ ಮಾಡಲಾಗಿತ್ತು. ಇಡೀ ದೇವಾಲಯವನ್ನೇ ತೋತಾಪುರಿ ಮಾವಿನಕಾಯಿ, ಮಸುಕಿನ ಜೋಳ ಸೇರಿದಂತೆ ವಿವಿಧ ಬಗೆಯ ಫಲಪುಷ್ಪಗಳಿಂದ ಅಲಂಕಾರಗೊಳಿಸಿದ್ದು ಕಣ್ಣು ಕೋರೈಸುವಂತಿತ್ತು.
ಹರಕೆ ಹೊತ್ತ ಭಕ್ತಾದಿಗಳು ಮುಂಜಾನೆಯಿಂದಲೇ ಬೆಟ್ಟದ ಮೆಟ್ಟಿಲುಗಳನ್ನು ಏರಿ ದೇವಿಯ ದರ್ಶನ ಪಡೆದು ಪುನೀತರಾದರು.

ಬೆಳಿಗ್ಗೆ 5 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮಾತ್ರ ಮೆಟ್ಟಿಲು ಮೂಲಕ ಸಾಗಲು ಅವಕಾಶ ಕಲ್ಪಿಸಲಾಗಿತ್ತು. ಇಂದು ಬೆಳಗಿನ ಜಾವ 4 ಗಂಟೆಯಿಂದಲೇ ಬೆಟ್ಟದ ಮೆಟ್ಟಿಲುಗಳ ಮುಂದೆ ಜನರು ಸಾಲುಗಟ್ಟಿ ನಿಂತಿದ್ದರು. ಗೇಟ್ ತೆಗೆಯುತ್ತಿದ್ದಂತೆ ಉತ್ಸಾಹದಿಂದ ಮೆಟ್ಟಿಲುಗಳನ್ನು ಹತ್ತಿ ದೇವಿಯ ದರ್ಶನ ಪಡೆದಿದ್ದಾರೆ.

ಉಳಿದ ಆಷಾಡ ಶುಕ್ರವಾರಗಳಲ್ಲಿ ಮೆಟ್ಟಿಲು ಹತ್ತಿ ಬರುವ ಭಕ್ತರಿಗೆ ಧರ್ಮದರ್ಶನದ ಸರತಿ ಸಾಲಿನಲ್ಲಿ ನಿಂತು ದರ್ಶನ ಮಾಡಬಹುದಾಗಿದೆ. ನಾಡದೇವಿಯ ಸುಗಮ ದರ್ಶನಕ್ಕಾಗಿ ಲಲಿತ ಮಹಲ್ ಪ್ಯಾಲೇಸ್ ಆವರಣದಿಂದ ಉಚಿತ ಬಸ್ ಸೇವೆ ಕಲ್ಪಿಸಲಾಗಿತ್ತು.

ಗಣ್ಯರ ಭೇಟಿ :
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕ ಎಚ್.ಡಿ.ರೇವಣ್ಣ, ಜಿ.ಟಿ.ಹರೀಶ್‌ ಗೌಡ ಸೇರಿದಂತೆ ಹಲವು ಜನಪ್ರತಿನಿಧಿಗಳು ಕುಟುಂಬ ಸಮೇತ ದೇವಿಯ ದರ್ಶನ ಪಡೆದರು.

ದೇವಿ ದರ್ಶನ ಪಡೆದ ನಟ ದರ್ಶನ್ :
ಸ್ಯಾಂಡಲ್‌ವುಡ್ ನಟರಾದ ದರ್ಶನ್, ಡಾಲಿ ಧನಂಜಯ ಸೇರಿದಂತೆ ಅನೇಕ ಕಲಾವಿದರು ಕುಟುಂಬ ಸಮೇತರಾಗಿ ದೇಗುಲಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು. ಜನಸಮೂಹವನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು.

RELATED ARTICLES

Latest News