ಬೆಂಗಳೂರು ಮೇ 29- ವಾಲ್ಮೀಕಿ ಅಭಿವೃದ್ಧಿ ನಿಗಮದ ನಿರ್ದೇಶಕ ಚಂದ್ರಶೇಖರನ್ ಪಿ. ಆತಹತ್ಯೆ ಪ್ರಕರಣದಲ್ಲಿ ಹಲವು ಅನುಮಾನಗಳು ವ್ಯಕ್ತವಾಗುತ್ತಿದ್ದು, ಅಧಿಕಾರಿಗಳ ದೂರವಾಣಿ ಕರೆಗಳ ವಿವರವನ್ನು ತನಿಖೆಗೆ ಒಳಪಡಿಸಬೇಕೆಂದು ಮಾಜಿ ಸಚಿವ ಅಶ್ವತ್ಥ ನಾರಾಯಣ ರಾಜ್ಯಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಂದ್ರಶೇಖರನ್ ಬರೆದಿರುವ ಡೆತ್‌ನೋಟ್‌ನಲ್ಲಿ ಕೆಲವು ಆಘಾತಕಾರಿ ಅಂಶಗಳು ಹೊರಬಿದ್ದಿವೆ. ನಿಗಮದ ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೂ ಬಾರದೆ 87 ಕೋಟಿ ಹಣವನ್ನು ವರ್ಗಾವಣೆ ಮಾಡಲಾಗಿತ್ತೆಂಬ ಆರೋಪ ಕೇಳಿಬಂದಿದೆ. ಅಧಿಕಾರಿಗಳ ಪಾತ್ರದ ಬಗ್ಗೆ ಅವರ ದೂರವಾಣಿ ಕರೆಗಳ ವಿವರಗಳನ್ನು ತನಿಖೆ ನಡೆಸಿದಾಗ ಮಾತ್ರ ಸತ್ಯಾಂಶ ಹೊರಬರುತ್ತದೆ ಎಂದು ಒತ್ತಾಯಿಸಿದರು.
ಪ್ರಕರಣದ ಕುರಿತಂತೆ ಸರ್ಕಾರ ಈವರೆಗೂ ಯಾರ ವಿರುದ್ಧವೂ ಎಫ್‌ಐಆರ್ ಅನ್ನೇ ದಾಖಲಿಸಿಲ್ಲ. ಅದಕ್ಕೂ ಮೊದಲೇ ಸಿಐಡಿ ತನಿಖೆಗೆ ಆದೇಶಿಸಿದೆ. ಇದು ಸರ್ಕಾರದ ಮೂಗಿನಡಿಯೇ ನಡೆಯುವುದರಿಂದ ನಿಷ್ಪಕ್ಷಪಾತ ತನಿಖೆ ನಡೆಯಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಯಾವುದೇ ಒಂದು ಖಾತೆಯನ್ನು ತೆರೆಯಬೇಕಾದರೆ ಹಣಕಾಸು ಇಲಾಖೆಯ ಅನುಮತಿ ಇರಬೇಕು. ಇಲ್ಲಿ ಅವಕಾಶವನ್ನೇ ಕೊಡದಿದ್ದಾಗ ಹೇಗೆ ಖಾತೆಯನ್ನು ತೆರೆಯಲಾಯಿತು? ಅಷ್ಟು ದೊಡ್ಡ ಮೊತ್ತದ ಹಣ ಎಂಡಿಯವರಿಗೆ ಗೊತ್ತಿಲ್ಲದಂತೆ ವರ್ಗಾವಣೆಯಾಗಿದೆ ಎಂದರೆ ಸಚಿವ ನಾಗೇಂದ್ರ ಅವರ ಗಮನಕ್ಕೆ ಹೋಗಿಲ್ಲವೇ? ಇಲಾಖೆಯಲ್ಲಿ ನಡೆಯುವ ವ್ಯವಹಾರಗಳು ಅವರಿಗೆ ಗೊತ್ತಿಲ್ಲವೆಂದರೆ ಇನ್ನು ಹೇಗೆ ನಿರ್ವಹಣೆ ಮಾಡುತ್ತಾರೆ? ಎಂದು ತರಾಟೆಗೆ ತೆಗೆದುಕೊಂಡರು.
ಖಾತೆಯನ್ನು ಹೇಗೆ ತೆರೆದರು ಎಂಬುದನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹೇಳಬೇಕು. ಇಲ್ಲಿ ನೇರವಾಗಿ ಅವರ ಮೇಲೆಯೇ ಆರೋಪ ಇರುವುದರಿಂದ ತಕ್ಷಣವೇ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಮೃತ ಚಂದ್ರಶೇಖರನ್ ಅವರ ನಿವಾಸಕ್ಕೆ ನಮ ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರು ನಾಳೆ ಭೇಟಿ ನೀಡಿ ಸಾಂತ್ವನ ಹೇಳಲಿದ್ದಾರೆ ಎಂದು ತಿಳಿಸಿದರು.ಬಿಜೆಪಿ ಸರ್ಕಾರವನ್ನು ಶೇ.40 ಕಮಿಷನ್ ಸರ್ಕಾರ ಎನ್ನುತ್ತಿದ್ದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣಜಿತ್ ಸಿಂಗ್ ಸುರ್ಜೇವಾಲ ಈಗ ಎಲ್ಲಿಗೆ ಹೋಗಿದ್ದಾರೆ? ಅವರ ಸರ್ಕಾರದಲ್ಲಿ ನಡೆಯುತ್ತಿರುವ ಅವಾಂತರಗಳು ಅವರ ಗಮನಕ್ಕೆ ಬಂದಿಲ್ಲವೇ? ಅವರದೇನಿದ್ದರೂ ತಿಂಗಳಿಗೊಮೆ ವಸೂಲಿ ಮಾಡುವುದಷ್ಟೇ ಕೆಲಸ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಪ್ರತೀ ಇಲಾಖೆಯಲ್ಲೂ ಕಮಿಷನ್ ಕೊಡದೇ ಯಾವ ಕೆಲಸಗಳೂ ನಡೆಯುತ್ತಿಲ್ಲ. ಎಲ್ಲರೂ ವಸೂಲಿಗೆ ಇಳಿದಿದ್ದಾರೆ. ಈ ಎಲ್ಲಾ ವಿಚಾರ ಗೊತ್ತಿದ್ದರೂ ಮುಖ್ಯಮಂತ್ರಿ ಅಸಹಾಯಕ ಸ್ಥಿತಿಗೆ ಬಂದಿದ್ದಾರೆಂದು ಅಶ್ವತ್ಥ ನಾರಾಯಣ ಕುಹಕವಾಡಿದರು.ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹಾಳು ಮಾಡಿದ ಕೀರ್ತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ. ನಾನಾ ಆಯೋಗವನ್ನು ಸಹ ರದ್ದು ಮಾಡಿತು. ಈಗಾಗಲೇ ಎರಡು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಿವೆ. ಕಾಂಗ್ರೆಸ್ ಶಿಕ್ಷಣ ವಿರೋಧಿ ಎಂದು ಕಿಡಿಕಾರಿದರು.
ವಾಗ್ದಾಳಿ :
ಕೇಂದ್ರ ಗೃಹಸಚಿವ ಅಮಿತ್ ಷಾ ಅವರ ಸೂಚನೆಯಂತೆ ಪ್ರಜ್ವಲ್ ರೇವಣ್ಣ ಸ್ವದೇಶಕ್ಕೆ ವಾಪಸ್ ಆಗುತ್ತಿದ್ದಾರೆ ಎಂಬ ಸಚಿವ ಪ್ರಿಯಾಂಕ ಖರ್ಗೆ ಅವರ ಆರೋಪಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಪ್ರಿಯಾಂಕ ಖರ್ಗೆ ಅವರೊಬ್ಬ ವಿಶೇಷ ವ್ಯಕ್ತಿ, ಇಡೀ ಸಂಪುಟದಲ್ಲಿ ನಾನೊಬ್ಬನೇ ಮಹಾನ್ ವಿಚಾರವಂತ ಎಂದು ಭಾವಿಸಿಕೊಂಡು ಎಲ್ಲದಕ್ಕೂ ಮಾತನಾಡುತ್ತಿದ್ದಾರೆ. ಅಂಥವರ ಬಗ್ಗೆ ಮಾತನಾಡದೇ ಇರುವುದೇ ಲೇಸು ಎಂದು ಕಿಡಿಕಾರಿದರು.
ನಾಲಗೆ ಇದೆ ಎಂದು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇದಕ್ಕೆ ತಕ್ಕ ಪ್ರತಿಫಲವನ್ನು ಅವರು ಈಗಾಗಲೇ ಅನುಭವಿಸಿದ್ದಾರೆ. ಜೂನ್ 4 ರಂದು ಇದಕ್ಕೆ ತಕ್ಕ ಉತ್ತರ ಸಿಗಲಿದೆ ಎಂದು ಎಚ್ಚರಿಸಿದರು.