ಬೆಂಗಳೂರು, ನ.11- ಪ್ರತಿಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಬಿಜೆಪಿ ಕೊನೆಗೂ ಎಚ್ಚೆತ್ತುಕೊಂಡಿದ್ದು, ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷದ ನಾಯಕನ ಆಯ್ಕೆ ಸಂಬಂಧ ಶುಕ್ರವಾರ ಶಾಸಕಾಂಗ ಸಭೆ ಆಯೋಜಿಸಿದೆ.ಶುಕ್ರವಾರ ಸಂಜೆ ಬೆಂಗಳೂರಿನ ಖಾಸಗಿ ಹೊಟೇಲ್ನಲ್ಲಿ ನಡೆಯಲಿರುವ ಶಾಸಕಾಂಗ ಸಭೆಗೆ ಶಾಸಕರು, ವಿಧಾನ ಪರಿಷತ್ ಸದಸ್ಯರು ಕಡ್ಡಾಯವಾಗಿ ಭಾಗವಹಿಸುವಂತೆ ಸೂಚನೆ ಕೊಡಲಾಗಿದ್ದು, ಕೇಂದ್ರದಿಂದ ವೀಕ್ಷಕರು ಕೂಡ ಆಗಮಿಸಲಿದ್ದಾರೆ.
ಮೂಲಗಳ ಪ್ರಕಾರ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ಸಿಂಗ್, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಭಾಗವಹಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಈಗಾಗಲೇ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನವನ್ನು ಲಿಂಗಾಯತ ಸಮುದಾಯಕ್ಕೆ ನೀಡಿರುವುದರಿಂದ ವಿಧಾನಸಭೆ ಪ್ರತಿಪಕ್ಷದ ನಾಯಕನ ಸ್ಥಾನವನ್ನು ಈ ಸಮುದಾಯ ಹೊರತುಪಡಿಸಿ ಒಕ್ಕಲಿಗ ಇಲ್ಲವೆ ಹಿಂದುಳಿದ ಸಮುದಾಯಕ್ಕೆ ಸೇರಿದವರನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ.
ಹಿರಿತನವೇ ಮಾನದಂಡವಾದರೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಆರಗ ಜ್ಞಾನೇಂದ್ರ, ಆರ್.ಅಶೋಕ್, ಬಸನಗೌಡ ಪಾಟೀಲ್ ಯತ್ನಾಳ್ ಈ ಸ್ಥಾನಕ್ಕೆ ಅರ್ಹರೂ ಹೌದು. ಆದರೆ, ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿರುವುದರಿಂದ ಬೊಮ್ಮಾಯಿ ಮತ್ತು ಯತ್ನಾಳ್ ರೇಸ್ನಿಂದ ಹೊರಬಿದ್ದಿದ್ದಾರೆ.
80 ಭಾರತೀಯ ಮೀನುಗಾರರ ಬಿಡುಗಡೆ ಮಾಡಿದ ಪಾಕ್
ಉಳಿದಂತೆ ಒಕ್ಕಲಿಗ ಸಮುದಾಯಕ್ಕೆ ಮಣೆ ಹಾಕುವುದಾದರೆ ಸದ್ಯ ಬಿಜೆಪಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ನಿರಂತರವಾಗಿ ಟೀಕೆ ಮಾಡುತ್ತ ಬಂದಿರುವ ಮಲ್ಲೇಶ್ವರಂ ಶಾಸಕ, ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ, ಹಿರಿಯರಾದ ಆರ್.ಅಶೋಕ್, ಆರಗ ಜ್ಞಾನೇಂದ್ರ ಹೆಸರುಗಳು ಪ್ರಬಲವಾಗಿ ಕೇಳಿಬರುತ್ತಿವೆ.
ಈಗಾಗಲೇ ಕುಮಾರಸ್ವಾಮಿ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದು, ಅವರು ಕೂಡ ಒಕ್ಕಲಿಗ ಸಮುದಾಯವನ್ನು ಪ್ರತಿನಿಸುತ್ತಾರೆ. ಪುನಃ ಅದೇ ಸಮುದಾಯಕ್ಕೆ ವಿಪಕ್ಷ ನಾಯಕ ಸ್ಥಾನ ನೀಡುವುದು ಬೇಡ ಎಂಬ ತೀರ್ಮಾನಕ್ಕೆ ಬಂದರೆ ವಿ.ಸುನಿಲ್ಕುಮಾರ್ಗೆ ಅದೃಷ್ಟ ಒಲಿಯಬಹುದು. ಹಿಂದುಳಿದ ಸಮುದಾಯಕ್ಕೂ ಸಾಮಾಜಿಕ ನ್ಯಾಯ ಒದಗಿಸಿದ್ದೇವೆ ಎಂಬ ಸಂದೇಶವನ್ನು ರವಾನಿಸಲು ಬಿಜೆಪಿ ಮುಂದಾಗಿದೆ.
ಇನ್ನು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಕೋಟಾ ಶ್ರೀನಿವಾಸ ಪೂಜಾರಿ, ಸದಸ್ಯರಾದ ತೇಜಸ್ವಿನಿ ರಮೇಶ್ಗೌಡ, ಶಶೀಲ್ ನಮೋಶಿ ಹೆಸರುಗಳು ಕೇಳಿಬಂದಿವೆ. ಅಂತಿಮವಾಗಿ ಶುಕ್ರವಾರ ನಡೆಯಲಿರುವ ಶಾಸಕಾಂಗ ಸಭೆಯಲ್ಲಿ ಯಾರ ಪರವಾಗಿ ಹೆಚ್ಚಿನ ಬೆಂಬಲ ಸಿಗಲಿದೆಯೋ ಅವರಿಗೆ ಈ ಸ್ಥಾನಗಳು ಒಲಿಯಲಿವೆ.
ಯಾವುದೇ ರೀತಿಯ ಅಪಸ್ವರ, ಅಸಮಾಧಾನಕ್ಕೆ ಅವಕಾಶವಿಲ್ಲದಂತೆ ಪ್ರಜಾಸತ್ತಾತ್ಮಕ ಮಾರ್ಗದಲ್ಲೇ ಎಲ್ಲರ ಅಭಿಪ್ರಾಯಕ್ಕೆ ಮನ್ನಣೆ ಕೊಟ್ಟು ಎರಡೂ ಸದನಗಳ ನಾಯಕ ಮತ್ತು ಉಪನಾಯಕನನ್ನು ಆಯ್ಕೆ ಮಾಡಲು ಬಿಜೆಪಿ ಗಮನ ಹರಿಸಿದೆ.