ಬೆಂಗಳೂರು,ಸೆ.19- ಹಲವು ವರ್ಷಗಳಿಂದ ಅನಾನುಕೂಲಗಳನ್ನು ಎದುರಿಸಿದ ಕಂಪೆನಿಯು ಬೆಂಗಳೂರಿನ ಕುಂದುಕೊರತೆ, ವಿಫಲತೆಗಳ ಕುರಿತು ಮಾತನಾಡಿದರೆ ರಾಜ್ಯ ಸರಕಾರಕ್ಕೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಸಿ.ಎನ್. ಅಶ್ವತ್ಥ ನಾರಾಯಣ್ ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಥ ಕಂಪೆನಿಗೆ ಬೇಕಿದ್ದರೆ ಇರಿ, ಇಲ್ಲದಿದ್ದರೆ ಹೋಗಿ ಎನ್ನುವುದಾದರೆ, ಇದ್ಯಾವ ಸಂಸ್ಕೃತಿ? ಇದು ಜನಪರ ಸರಕಾರದ ಮಾತುಗಳೇ? ಎಂದು ಕೇಳಿದರು. ಈ ದುರಹಂಕಾರದ ಮಾತು ಬಿಟ್ಟು, ಜನಪರವಾಗಿ ಕೆಲಸ ಮಾಡಿ ವಿಶ್ವಾಸ ಮೂಡಿಸಬೇಕು ಎಂದು ಆಗ್ರಹಿಸಿದರು.
ಸರಕಾರ ಎಂಬುದು ಜನಪರವಾಗಿರಬೇಕು. ಆಡಳಿತದಲ್ಲಿ ಸೌಜನ್ಯ, ಜನಪರ ಕಾಳಜಿ ಇರಬೇಕು. ಆದರೆ, ಕಾಂಗ್ರೆಸ್ಸಿನ ರಾಜ್ಯ ಸರಕಾರಕ್ಕೆ ಅಧಿಕಾರ ತಲೆಗೆ ಹತ್ತಿದೆ. ದುರಹಂಕಾರದ ಮಾತು ಆಡುತ್ತಿದ್ದಾರೆ. ಅವರ ವೈಫಲ್ಯಗಳನ್ನು ಜನರು ಎತ್ತಿ ಹಿಡಿದಾಗ ಅದನ್ನು ಒಪ್ಪಿಕೊಳ್ಳುವ ಸೌಜನ್ಯ, ಸಂಸ್ಕೃತಿ ಅವರಲ್ಲಿಲ್ಲ ಎಂದು ದೂರಿದರು.
ಬೆಂಗಳೂರು ವಿಶ್ವದಲ್ಲೇ ಮಾನ್ಯತೆ ಪಡೆದ ಹೆಮೆಯ ನಗರ; ಉದ್ಯಮಶೀಲತೆ, ತಂತ್ರಜ್ಞಾನ, ಸ್ಟಾರ್ಟಪ್‌ಗೆ ಹೆಸರುವಾಸಿಯಾಗಿದೆ. ಎಲ್ಲ ಪ್ರಧಾನಮಂತ್ರಿಗಳು, ಮಾನ್ಯ ರಾಷ್ಟ್ರಪತಿಗಳು, ವಿಶ್ವ ನಾಯಕರು ಭಾರತವನ್ನು ಬೆಂಗಳೂರಿನ ಮೂಲಕ ನೋಡುತ್ತಾರೆ. ಬೆಂಗಳೂರಿನ ವೈಫಲ್ಯವನ್ನು ತಿಳಿಸಿ, ಕುಂದುಕೊರತೆ ಹೇಳಿದಾಗ ಅದನ್ನು ಇವರಿಗೆ ಸಹಿಸಿಕೊಳ್ಳಲು ಆಗುವುದಿಲ್ಲ ಎಂದು ಅವರು ಆಕ್ಷೇಪಿಸಿದರು.