ಬೆಳಗಾವಿ,ಜು.5- ಹೃದಯಾಘಾತಗಳ ಸರಣಿ ಸಾವು ಮುಂದುವರೆದಿದ್ದು, ಗೋಕಾಕ್ ನಗರದ ಪ್ರಸಿದ್ಧ ಲಕ್ಷ್ಮಿದೇವ ಜಾತ್ರೆಯ ಬಂದೋಬಸ್ತ್ ಗೆ ಆಗಮಿಸಿದ್ದ ಹುಬ್ಬಳ್ಳಿ ಎಪಿಎಂಸಿ ಠಾಣೆಯ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಹೃದಯಾಘಾತದಿಂದ ಇಂದು ಮೃತಪಟ್ಟಿದ್ದಾರೆ.
ಎಲ್.ಜೆ.ಮೀರಾನಾಯಕ (56) ಎಂಬುವವರು ಇಂದು ಬೆಳಿಗ್ಗೆ ತಾವು ವಾಸ್ತವ್ಯ ಹೂಡಿದ್ದ ಸರ್ಕಾರಿ ಬಾಲಕರ ವಿದ್ಯಾರ್ಥಿನಿಲಯದಲ್ಲಿ ಅಸ್ವಸ್ಥರಾಗಿದ್ದ ಅವರನ್ನು ಗೋಕಾಕ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆಸ್ಪತ್ರೆಗೆ ತಲುಪುವ ಮೊದಲೇ ಅವರು ಅಸುನೀಗಿದ್ದಾರೆ.
ಎಸ್ಪಿ ಡಾ.ಭೀಮಾಶಂಕರ್ ಗುಳೇದ್‌ರವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಗೋಕಾಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಲಾಗಿದೆ.
ಹಾಸನ, ಬೆಳಗಾವಿ, ಚಿಕ್ಕಮಗಳೂರು, ಮಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಿವೆ.

ಹಾಸನ ಜಿಲ್ಲೆಯೊಂದರಲ್ಲೇ ಕಳೆದ 45 ದಿನಗಳಲ್ಲಿ ಯುವಕರು, ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ 32 ಮಂದಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.ಹೃದಯಾಘಾತದಿಂದ ದಿನೇದಿನೇ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ದಯಾಘಾತಗಳ ಸರಣಿ ಸಾವಿನ ಬಗ್ಗೆ ತಜ್ಞರು ಸಮೀಕ್ಷೆ ನಡೆಸಿದ್ದು, ಸದ್ಯದಲ್ಲಿ ಸರ್ಕಾರಕ್ಕೆ ವರದಿ ನೀಡಲಿದ್ದಾರೆ.