Monday, June 24, 2024
Homeರಾಜ್ಯಮೇಲ್ಮನೆ ಚುನಾವಣೆಗೆ ಆಕಾಂಕ್ಷಿಗಳ ಲಾಬಿ ಜೋರು

ಮೇಲ್ಮನೆ ಚುನಾವಣೆಗೆ ಆಕಾಂಕ್ಷಿಗಳ ಲಾಬಿ ಜೋರು

ಬೆಂಗಳೂರು, ಮೇ 23- ವಿಧಾನಸಭೆಯಿಂದ ವಿಧಾನಪರಿಷತ್‌ನ 11 ಸದಸ್ಯರ ಆಯ್ಕೆಗೆ ನಡೆಯುವ ಚುನಾವಣೆಯಲ್ಲಿ ಅವಕಾಶ ಗಿಟ್ಟಿಸಲು 50ಕ್ಕೂ ಹೆಚ್ಚು ಆಕಾಂಕ್ಷಿಗಳು ಬೆಂಗಳೂರಿನಿಂದ ದಿಲ್ಲಿಯವರೆಗೂ ಲಾಬಿ ನಡೆಸಲಾರಂಭಿಸಿದ್ದಾರೆ.ಅರವಿಂದ್‌ ಕುಮಾರ್‌ ಅರಳಿ, ಎನ್‌.ಎಸ್‌‍.ಬೋಸರಾಜ್‌, ಡಾ.ಕೆ.ಗೋವಿಂದರಾಜು, ಡಾ.ತೇಜಸ್ವಿನಿ ಗೌಡ, ಮುನಿರಾಜುಗೌಡ, ಕೆ.ಪಿ.ನಂಜುಂಡಿ, ಬಿ.ಎಂ.ಫಾರುಖ್‌, ರಘುನಾಥರಾವ್‌ ಮಲ್ಕಾಪುರೆ, ಎನ್‌.ರವಿಕುಮಾರ್‌, ಎಸ್‌‍.ರುದ್ರೇಗೌಡ, ಕೆ.ಹರೀಶ್‌ಕುಮಾರ್‌ ಅವರು ಜೂನ್‌ 17ಕ್ಕೆ ನಿವೃತ್ತರಾಗುತ್ತಿದ್ದಾರೆ.

ಮೇ 27 ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡು ಜೂನ್‌ 13 ಕ್ಕೆ ಚುನಾವಣೆ ನಡೆಯಲಿದೆ. 11 ಸ್ಥಾನಗಳ ಪೈಕಿ ಕಾಂಗ್ರೆಸ್‌‍ 7, ಬಿಜೆಪಿ 3, ಜೆಡಿಎಸ್‌‍ 1 ಸ್ಥಾನಗಳನ್ನು ಆಯ್ಕೆ ಮಾಡಿಕೊಳ್ಳಲು ಶಾಸಕರ ಸಂಖ್ಯಾಬಲ ಹೊಂದಿದೆ.ಆಡಳಿತಾರೂಢ ಕಾಂಗ್ರೆಸ್‌‍ನಲ್ಲಿ 7 ಸ್ಥಾನಗಳಿಗೆ ಆಕಾಂಕ್ಷಿಗಳ ಸಂಖ್ಯೆ ದಂಡಿಯಾಗಿದೆ. ಹಾಲಿ ಸದಸ್ಯರ ಪೈಕಿ ಸಣ್ಣ ನೀರಾವರಿ ಸಚಿವ ಎನ್‌.ಎಸ್‌‍.ಬೋಸರಾಜ್‌ ಮತ್ತು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಡಾ.ಕೆ.ಗೋವಿಂದರಾಜು ಮರು ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಅರವಿಂದ ಕುಮಾರ್‌ ಅರಳಿ, ಹರೀಶ್‌ಕುಮಾರ್‌ ಅವರು ಮತ್ತೊಮೆ ಅವಕಾಶ ಕೇಳುತ್ತಿದ್ದಾರೆ. ಇತ್ತ ಬಿಜೆಪಿಯಲ್ಲಿದ್ದ ತೇಜಸ್ವಿನಿ ರಮೇಶ್‌ ಮತ್ತು ಕೆ.ಪಿ.ನಂಜುಂಡಿ ಅವರು ಲೋಕಸಭಾ ಚುನಾವಣೆಗೂ ಮುನ್ನವೇ ವಿಧಾನಪರಿಷತ್‌ ಸದಸ್ಯತ್ವ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌‍ ಸೇರಿದ್ದು, ಮತ್ತೊಮೆ ಮೇಲನೆ ಪ್ರವೇಶಿಸುವ ಉಮೇದಿನಲ್ಲಿದ್ದಾರೆ.

ಇದರ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಅವರ ಹೆಸರು ಪ್ರಬಲವಾಗಿ ಕೇಳಿಬಂದಿದೆ. ತಂದೆಗಾಗಿ ವರುಣ ಕ್ಷೇತ್ರವನ್ನು ಬಿಟ್ಟುಕೊಟ್ಟ ಯತೀಂದ್ರ ಅವರಿಗೆ ವಿಧಾನಪರಿಷತ್‌ನಲ್ಲಿ ಅವಕಾಶ ಕಲ್ಪಿಸಬೇಕೆಂಬ ಒತ್ತಾಯಗಳಿವೆ.
ಉನ್ನತ ಮೂಲಗಳ ಪ್ರಕಾರ, 7 ಸ್ಥಾನಗಳಲ್ಲಿ ಕಾಂಗ್ರೆಸ್‌‍ ಒಕ್ಕಲಿಗ ಸಮುದಾಯಕ್ಕೆ 2, ಹಿಂದುಳಿದ ವರ್ಗಕ್ಕೆ 2, ಪರಿಶಿಷ್ಟ ಜಾತಿಗೆ 2, ಲಿಂಗಾಯತ ಸಮುದಾಯಕ್ಕೆ 1 ಸ್ಥಾನ ನೀಡುವ ಚಿಂತನೆ ನಡೆಸಿದೆ ಎನ್ನಲಾಗಿದೆ.

ಡಾ.ಕೆ.ಗೋವಿಂದರಾಜು ಅವರು ಪುನರ್‌ ಆಯ್ಕೆಯಾಗುವ ಸಾಧ್ಯತೆ ಇದೆ. ಒಕ್ಕಲಿಗ ಕೋಟಾದ ಒಂದು ಸ್ಥಾನ ಭರ್ತಿಯಾಗಲಿದ್ದು, ಮತ್ತೊಂದು ಸ್ಥಾನಕ್ಕೆ ಅಭ್ಯರ್ಥಿ ಆಯ್ಕೆಯಾಗಬೇಕಿದೆ. ಎನ್‌.ಎಸ್‌‍.ಬೋಸರಾಜು ಪುನರ್‌ ಆಯ್ಕೆಯಾಗಿದ್ದೇ ಆದರೆ ಓಬಿಸಿ ವರ್ಗದ ಒಂದು ಸ್ಥಾನ ಮಾತ್ರ ಬಾಕಿ ಉಳಿಯಲಿದೆ.

ಮಹಿಳೆಯರಿಗೂ ಅವಕಾಶ ನೀಡುವ ಚರ್ಚೆಗಳಾಗಿದ್ದು, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್‌, ಮಹಾನಗರ ಘಟಕದ ಮಾಜಿ ಅಧ್ಯಕ್ಷೆ ಕಮಲ ಸಿ.ರಾಜಣ್ಣ ಅವರ ಹೆಸರುಗಳು ಕೇಳಿಬಂದಿವೆ.ಪರಿಶಿಷ್ಟ ಜಾತಿಯ 2 ಕ್ಷೇತ್ರಗಳ ಪೈಕಿ ಒಂದನ್ನು ಬಲಗೈಗೆ, ಮತ್ತೊಂದನ್ನು ಲಂಬಾಣಿ ಅಥವಾ ಬೋವಿ ಸಮುದಾಯಕ್ಕೆ ನೀಡುವ ಚರ್ಚೆ ನಡೆದಿದೆ. ಇದರ ನಡುವೆ ಕಳೆದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಅವಕಾಶ ವಂಚಿತರು, ಬಂಡಾಯಗಾರರನ್ನು ಸಮಾಧಾನಪಡಿಸುವಾಗ ವಿಧಾನಪರಿಷತ್‌ನ ಸದಸ್ಯರನ್ನಾಗಿ ಮಾಡುವ ಆಸೆ ತೋರಿಸಲಾಗಿತ್ತು. ಆ ರೀತಿ ಅವಕಾಶಕ್ಕಾಗಿ ಕಾಯುತ್ತಿರುವವರ ಪೈಕಿ ಮಾಜಿ ಶಾಸಕರು, ಮಾಜಿ ಸಚಿವರು, ಮಾಜಿ ಸಂಸದರು ಬಹಳಷ್ಟು ಮಂದಿ ಇದ್ದಾರೆ.

ಪ್ರಮುಖವಾಗಿ ಬಿ.ಎಲ್‌.ಶಂಕರ್‌, ವಿ.ಆರ್‌.ಸುದರ್ಶನ್‌, ಹಿರಿಯರ ಪೈಕಿ ಲಾಬಿ ನಡೆಸುತ್ತಿದ್ದಾರೆ. ಕೆಪಿಸಿಸಿಯ ಆಡಳಿತಾತಕ ಪ್ರಧಾನ ಕಾರ್ಯದರ್ಶಿ ವಿಜಯ್‌ ಕೆ.ಮುಳಗುಂದ್‌, 15ಕ್ಕೂ ಹೆಚ್ಚು ಅಧ್ಯಕ್ಷರುಗಳ ಜೊತೆ ಕಚೇರಿ ಕಾರ್ಯದರ್ಶಿಯಾಗಿ ಯಶಸ್ವಿ ಕಾರ್ಯ ನಿರ್ವಹಿಸಿರುವ ಎನ್‌.ನಾರಾಯಣ್‌, ಹಿಂದುಳಿದ ವರ್ಗದ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್‌‍.ದ್ವಾರಕಾನಾಥ್‌, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ರಫೀಖ್‌ ಅಹಮದ್‌, ಕೆಪಿಸಿಸಿ ಖಜಾಂಚಿ ವಿನಯ್‌ ಕಾರ್ತಿಕ್‌, ಪದವೀಧರರ ಕ್ಷೇತ್ರದ ಅಧ್ಯಕ್ಷ ನಟರಾಜ್‌ಗೌಡ, ಬಿಬಿಎಂಪಿ ಮಾಜಿ ಮೇಯರ್‌ ರಾಮಚಂದ್ರಪ್ಪ, ಮುಂಡರಗಿ ನಾಗರಾಜ್‌, ಎಂ.ಎಸ್‌‍.ಬಸವರಾಜು, ಎಐಸಿಸಿಯಲ್ಲಿ ಕೆಲಸ ಮಾಡಿದ ಸೂರಜ್‌ ಹೆಗ್ಡೆ, ಸಂದೀಪ್‌ ಅವರು ಆಕಾಂಕ್ಷಿಗಳಾಗಿದ್ದಾರೆ.

ಕೆಪಿಸಿಸಿ ಮಾಧ್ಯಮ ಘಟಕದ ಅಧ್ಯಕ್ಷ ರಮೇಶ್‌ ಬಾಬು, ಕಳೆದ ಬಾರಿ ವಿಧಾನಸಭೆ ಹಾಗೂ ಲೋಕಸಭೆ ಎರಡಲ್ಲೂ ಟಿಕೆಟ್‌ ವಂಚಿತ ಡಾ.ಬಿ.ಸಿ.ಮುದ್ದುಗಂಗಾಧರ್‌, ಬಿಜೆಪಿ ತೊರೆದು ಕಾಂಗ್ರೆಸ್‌‍ ಸೇರಿದ ಮಾಜಿ ಸಂಸದ ಕರಡಿ ಸಂಗಣ್ಣ ಮತ್ತಿತರರು ಆಕಾಂಕ್ಷಿಗಳಾಗಿದ್ದಾರೆ.
ಈ ಬಾರಿ ಪಕ್ಷನಿಷ್ಠರಿಗೆ ಅವಕಾಶ ನೀಡಬೇಕು ಎಂಬುದು ಹಿರಿಯ ನಾಯಕರ ಇರಾದೆಯಾಗಿದೆ. ಪದವೀಧರ ಹಾಗೂ ಶಿಕ್ಷಕರ ಒಟ್ಟು 6 ಕ್ಷೇತ್ರಗಳಲ್ಲಿ ನಡೆಯುತ್ತಿರುವ ದ್ವೈವಾರ್ಷಿಕ ಚುನಾವಣೆಗಳಲ್ಲಿ ವಲಸಿಗರಿಗೆ ಕಾಂಗ್ರೆಸ್‌‍ ಮಣೆ ಹಾಕಿದೆ.

ಈ ಹಿನ್ನೆಲೆಯಲ್ಲಿ ವಿಧಾನಸಭೆಯಿಂದ ಆಯ್ಕೆಯಾಗುವ ಕ್ಷೇತ್ರಗಳಿಗೆ ಪಕ್ಷನಿಷ್ಠರಿಗೆ ಅವಕಾಶ ನೀಡಬೇಕು ಎಂಬ ಚರ್ಚೆಗಳು ನಡೆಯುತ್ತಿವೆ. ಆದರೆ ಹೈಕಮಾಂಡ್‌ನ ಸೂಚನೆಗಳು ಮತ್ತು ರಾಜ್ಯ ನಾಯಕರುಗಳ ನಿರ್ಧಾರಗಳು ಯಾವ ರೀತಿ ಇರಲಿವೆ ಎಂಬುದು ಕುತೂಹಲ ಕೆರಳಿಸಿವೆ.

RELATED ARTICLES

Latest News