ನವದೆಹಲಿ,ಅ.18- ಕುಟುಂಬ ರಾಜಕಾರಣ ಪದದ ಅರ್ಥ ಗೊತ್ತಿಲ್ಲದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಬ್ಬ ಅನಕ್ಷರಸ್ಥ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾಸ್ ವಾಗ್ದಾಳಿ ನಡೆಸಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಕೂಡ ಬಿಜೆಪಿಯ ಒಂದು ವಿಂಗ್ ಆಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.
ರಾಜಕಾರಣದಲ್ಲಿ ಅನುರಾಗ್ ಠಾಕೂರ್, ಕೇಂದ್ರ ಸಚಿವ ರಾಜನಾಥ್ ಸಿಂಗ್ ಪುತ್ರ ಪಂಕಜ್ ಸಿಂಗ್ ಇರುವಂತೆ ಬಿಸಿಸಿಐನಲ್ಲಿ ಕೇಂದ್ರ ಗೃಹಸಚಿವ ಅಮಿತ್‍ಷಾ ಪುತ್ರ ಜೈಷಾ ಇದ್ದಾರೆ. ಇಂತಹ ಬಿಜೆಪಿ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುತ್ತಿದೆ ಎಂದು ರಾಹುಲ್ ಲೇವಡಿ ಮಾಡಿದ್ದರು.
ಇದಕ್ಕೆ ತಿರುಗೇಟು ಕೊಟ್ಟಿರುವ ಹಿಮಂತ್ ಬಿಸ್ವಾಸ್, ಅನುರಾಗ್ ಠಾಕೂರ್ ಹಾಗೂ ಪಂಕಜ್ ಸಿಂಗ್ ತಮ್ಮ ಪರಿಶ್ರಮದ ಮೇಲೆ ಗೆದಿದ್ದಾರೆ. ಬಿಸಿಸಿಐ ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು, ಅದಕ್ಕೂ ಬಿಜೆಪಿಗೂ ಏನು ಸಂಬಂಧ. ವಂಶ ಪಾರಂಪರ್ಯದ ರಾಜಕಾರಣದ ಅರ್ಥವೇ ರಾಹುಲ್ ಗಾಂಧಿಗೆ ಗೊತ್ತಿಲ್ಲ. ಬಿಸಿಸಿಐ ಬಿಜೆಪಿಯ ಒಂದು ವಿಂಗ್ ಎಂದು ಹೇಳುವ ರಾಹುಲ್ ಗಾಂಧಿ ಓರ್ವ ಅನಕ್ಷರಸ್ಥ ಎಂದು ವ್ಯಂಗ್ಯವಾಡಿದರು.
ಇಸ್ಲಾಮಿಕ್ ಉಗ್ರರ ರಾಕೆಟ್ ಮಿಸ್‍ಫೈರ್, ಗಾಜಾದಲ್ಲಿ 500ಕ್ಕೂ ಹೆಚ್ಚು ಮಂದಿ ಸಾವು
ಅಮಿತ್ ಷಾ ಅವರ ಪುತ್ರ ಜೈಷಾ ಬಿಜೆಪಿಯಲ್ಲಿ ಇಲ್ಲ. ಅವರು ಬಿಸಿಸಿಐನ ಕಾರ್ಯದರ್ಶಿ. ಚುನಾವಣೆ ಮೂಲಕ ಗೆದ್ದು ಆಯ್ಕೆಯಾಗಿದ್ದಾರೆ. ರಾಹುಲ್ ಗಾಂಧಿ ಕುಟುಂಬದವರ ತರ ರಾಜಕೀಯದಲ್ಲಿ ಇಲ್ಲ. ಮುತ್ತಾತ, ತಾತ, ಅಜ್ಜಿ, ಅಪ್ಪ ತಾಯಿ, ಸಹೋದರಿ ಹೀಗೆ ಪ್ರತಿಯೊಬ್ಬರು ಕೂಡ ರಾಜಕಾರಣದಲ್ಲಿದ್ದಾರೆ. ಇದನ್ನೇ ಕುಟುಂಬ ರಾಜಕಾರಣ ಎಂದು ಕರೆಯುತ್ತಾರೆ.
ರಾಜನಾಥ್ ಸಿಂಗ್ ಪುತ್ರ ಪಂಕಜ್ ಸಿಂಗ್ ಎಂದಿಗೂ ಕೂಡ ಬಿಜೆಪಿಯನ್ನು ನಿಯಂತ್ರಿಸಿಲ್ಲ. ಇಂದು ಕಾಂಗ್ರೆಸ್ ಪಕ್ಷಕ್ಕೆ ಎಐಸಿಸಿ ಅಧ್ಯಕ್ಷರಿದ್ದರೂ ಇಡೀ ಪಕ್ಷವನ್ನು ನಿಯಂತ್ರಿಸುತ್ತಿರುವುದು ಪ್ರಿಯಾಂಕ ಗಾಂಧಿ ಎಂದು ಕಿಡಿಕಾರಿದ್ದಾರೆ.