ಬೆಂಗಳೂರು, ಫೆ.4-ಕೆಲಸಕ್ಕಿದ್ದ ಮನೆಯಲ್ಲಿ ಚಿನ್ನಾಭರಣ, ನಗದು ಕಳ್ಳತನ ಮಾಡಿ ಪರಾರಿಯಾಗಿದ್ದ ಅಸ್ಸಾಂ ಮೂಲದ ಮಹಿಳೆ,ಆಕೆಗೆ ನೆರವಾಗಿದ್ದ ಗಂಡ ಮತ್ತು ಗಂಡನ ಅಣ್ಣನನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿ 273 ಗ್ರಾಂ ಚಿನ್ನಾಭರಣ ಹಾಗೂ 75,200 ನಗದು ವಶಪಡಿಸಿಕೊಂಡಿದ್ದಾರೆ.
ಠಾಣಾ ಸರಹದ್ದಿನ, ಸಿಂಗಸಂದ್ರದ ಅಪಾರ್ಟ್ಮೆಂಟ್ವೊಂದರ ಮನೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಮನೆಗೆಲಸ ಮಾಡಿಕೊಂಡಿದ್ದ ಅಸ್ಸಾಂ ಮೂಲದ ಮಹಿಳೆ ಕಳೆದ ಜ.27 ರಂದು ಮನೆಯ ಕೊಠಡಿಯ ವಾರ್ಡ್ ರೋಬ್ ನಲ್ಲಿಟ್ಟಿದ್ದ ಚಿನ್ನಾಭರಣ ಹಾಗೂ ನಗದನ್ನು ಕಳವು ಮಾಡಿಕೊಂಡಿ ಪರಾರಿಯಾಗಿದ್ದಳು.
ಈ ಬಗ್ಗೆ ಮನೆಯ ಮಾಲೀಕರು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಪೊಲೀಸರಿಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ, ಬೆಂಗಳೂರು-ತಿರುಪತಿ ಮುಖ್ಯರಸ್ತೆಯಲ್ಲಿರುವ ಹೊಸಕೋಟೆಯ ಹೋಟೆಲ್ವೊಂದರ ಬಳಿ ಮಹಿಳೆ ಸೇರಿದಂತೆ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು.
ನಂತರ ವಿಚಾರಣೆಗೊಳಪಡಿಸಿದಾಗ ಚಿನ್ನಾಭರಣ ಮತ್ತು ನಗದನ್ನು ಕಳವು ಮಾಡಿರುವುದು ಗೊತ್ತಾಗಿತು.ಆರೋಪಿ ಮಹಿಳೆ ತಾನು ಕದ್ದ ವಸ್ತುವನ್ನು ಗಂಡನಿಗೆ ನೀಡಿದ್ದಳು ಆತ ಅದನ್ನು ಅವನ ಅಣ್ಣನಿಗೆ ನೀಡದ್ದ.ಪ್ರಸ್ತುತ ಆರೋಪಿಗಳ ವಶದಲ್ಲಿದ್ದ 273 ಗ್ರಾಂ ಚಿನ್ನಾಭರಣ ಹಾಗೂ 75.200/-ನಗದನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇವುಗಳ ಒಟ್ಟು ಮೌಲ್ಯ 22,50,00 ಗಳಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯನ್ನು ಅಗ್ನಿಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಸಾರಾ ಫಾತಿಮಾ ರವರ ಮಾರ್ಗದರ್ಶನದಲ್ಲಿ, ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಸತೀಶ್.ಆರ್ ರವರ ನೇತೃತ್ವದಲ್ಲಿ, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ .ಸತೀಶ್ ಬಿ.ಎಸ್ ಮತ್ತವರ ತಂಡ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.