ಬೆಂಗಳೂರು,ಡಿ.3- ಕರ್ನಾಟಕ ಚುನಾವಣೆಯಲ್ಲಿ ಕಮಾಲ್ ಮಾಡಿದ ಗ್ಯಾರಂಟಿ ಯೋಜನೆಗಳು ತೆಲಂಗಾಣದಲ್ಲಿ ಕಾಂಗ್ರೆಸ್‍ನ ಕೈಹಿಡಿದರೆ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‍ಗಢದಲ್ಲಿ ಈ ಯೋಜನೆಗಳಿಗೆ ಜನ ಆದ್ಯತೆ ನೀಡಿದಂತಿಲ್ಲ. ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳು ;ಭಾರೀ ಸದ್ದು ಮಾಡಿದ್ದವು. ತೆಲಂಗಾಣದಲ್ಲಿ ಆರು ಗ್ಯಾರಂಟಿ ಯೋಜನೆಗಳನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಸೇರಿದಂತೆ ಮುಖಂಡರು ಅಬ್ಬರದ ಪ್ರಚಾರ ನಡೆಸಿ ಘೋಷಣೆ ಮಾಡಿದ್ದರು.
ಕರ್ನಾಟಕದ ಮಾದರಿಯಂತೆ ಗ್ಯಾರಂಟಿ ಯೋಜನೆಗಳನ್ನು ನೀಡುವ ಭರವಸೆ ನೀಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವ ಸಂಪುಟದ ಸದಸ್ಯರೆಲ್ಲಾ ಪ್ರಚಾರದ ಕಣಕ್ಕೆ ದಾಂಗುಡಿಯಿಟ್ಟು ಅಬ್ಬರದ ಪ್ರಚಾರ ನಡೆಸಿ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದರು.
ರಾಜಸ್ಥಾನ ಮಾಂತ್ರಿಕನ ಕಾಟದಿಂದ ಮುಕ್ತವಾಗಿದೆ : ಶೇಖಾವತ್
ತೆಲಂಗಾಣದಲ್ಲಿ ಭಾರೀ ಬಹುಮತದೊಂದಿಗೆ ಕಾಂಗ್ರೆಸ್ ಗೆಲುವಿನ ನಿರೀಕ್ಷೆ ಮಾಡಿತ್ತು. ಆದರೆ ಕರ್ನಾಟಕದಷ್ಟು ಭರ್ಜರಿ ಬಹುಮತ ಸಾಧಿಸಲು ಸಾಧ್ಯವಾಗಿಲ್ಲ. ಅದೇ ರೀತಿ ಛತ್ತೀಸ್‍ಗಢದಲ್ಲೂ ಕೂಡ ಜನ ಕಾಂಗ್ರೆಸ್ ಅನ್ನು ನಿರೀಕ್ಷಿತ ಮಟ್ಟದಲ್ಲಿ ಕೈ ಹಿಡಿದಿಲ್ಲ.
ಛತ್ತೀಸ್‍ಗಢದಲ್ಲಿ ಕಾಂಗ್ರೆಸ್‍ಗೆ ಬಿಜೆಪಿ ಸಮಬಲದ ಪೈಪೋಟಿ ನೀಡಿದೆ. ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಬಿಜೆಪಿ ಭರ್ಜರಿ ಬಹುಮತದತ್ತ ದಾಪುಗಾಲು ಇಟ್ಟಿದೆ. ರಾಜಸ್ಥಾನದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಬಿಜೆಪಿ ಅಧಿಕಾರ ಹಿಡಿಯಲು ಮುಂದಾಗಿದೆ. ಮಧ್ಯಪ್ರದೇಶದಲ್ಲೂ ಕೂಡ ಭಾರೀ ಮುನ್ನಡೆ ಸಾಧಿಸಿದ್ದು, ಅಧಿಕಾರ ಚುಕ್ಕಾಣಿ ಹಿಡಿಯುವ ಕಸರತ್ತುಗಳು ಆರಂಭವಾಗಿವೆ.
ಈ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್‍ನ ಗ್ಯಾರಂಟಿ ಯೋಜನೆಗಳು ಫಲ ನೀಡಿದಂತೆ ಕಂದುಬಂದಿಲ್ಲ. ಕರ್ನಾಟಕದಲ್ಲಿ ನಿರೀಕ್ಷೆಗೂ ಮೀರಿ ಕಾಂಗ್ರೆಸ್‍ಗೆ ಬಹುಮತ ಬಂದಿತ್ತು. ಕಾಂಗ್ರೆಸ್ ನೀಡಿದ ಗ್ಯಾರಂಟಿ ಯೋಜನೆಗಳು ಫಲ ನೀಡಿದ್ದವು. ಅದೇ ಮಾದರಿಯನ್ನು ಪಂಚರಾಜ್ಯಗಳ ಚುನಾವಣೆಯಲ್ಲಿ ಅನುಸರಿಸಿತ್ತಾದರೂ ಜನ ಗ್ಯಾರಂಟಿ ಯೋಜನೆಗಳಿಗೆ ಮಾನ್ಯತೆ ನೀಡಿರುವುದು ಕಂಡುಬಂದಂತಿಲ್ಲ.