ಬೆಳಗಾವಿ,ಡಿ.17- ವಿಧಾನಸಭೆಯ ಕಾರ್ಯ ಕಲಾಪಗಳು ಮಧ್ಯರಾತ್ರಿ 12.50ರವರೆಗೆ ನಡೆದು ಹೊಸ ದಾಖಲೆ ನಿರ್ಮಿಸಲಾಗಿದೆ. ನಿನ್ನೆ ಬೆಳಿಗ್ಗೆ 10 ಗಂಟೆಗೆ ಸದನ ಸಮಾವೇಶಗೊಳ್ಳಲು ಸಮಯ ನಿಗದಿಯಾಗಿತ್ತು.
ಸುಮಾರು 40 ನಿಮಿಷ ತಡವಾಗಿ ಕಲಾಪ ಆರಂಭಗೊಂಡಿತ್ತು. ನಿನ್ನೆ ಬೆಳಿಗ್ಗೆ 10.40ರಿಂದ ಮಧ್ಯರಾತ್ರಿ 12.50ರವರೆಗೆ ಸದನದ ಕಾರ್ಯ ಕಲಾಪಗಳು ನಡೆದಿದ್ದು, ಸುಮಾರು 14 ಗಂಟೆಗಳ ಕಾಲ ವಿಧಾನಸಭೆಯ ಕಾರ್ಯಕಲಾಪಗಳು ನಡೆದಂತಾಗಿದೆ. ಕಳೆದ ಹತ್ತು ವರ್ಷಗಳಲ್ಲೇ ನಿನ್ನೆ ಅತಿ ಹೆಚ್ಚು ಸಮಯ ಸದನ ನಡೆದಂತಾಗಿದೆ.
ಪ್ರಶ್ನೋತ್ತರ ಬದಿಗಿಟ್ಟು ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತ ವಿಶೇಷ ಚರ್ಚೆಗೆ ಅವಕಾಶ ನೀಡಿದ್ದರಿಂದ ಭೋಜನಾ ವಿರಾಮದವರೆಗೂ ಅದೇ ಚರ್ಚೆ ನಡೆಯಿತು. ಬಳಿಕ ಶಾಸನ ರಚನಾ ಕಲಾಪದಲ್ಲಿ 8 ವಿಧೇಯಕಗಳಿಗೆ ಅಂಗೀಕಾರ ದೊರೆಯಿತು. ಅನಂತರ ನಿಯಮ 69ರ ಮೇರೆಗೆ ಬಿಜೆಪಿ ಶಾಸಕ ವಿ.ಸುನೀಲ್ ಕುಮಾರ್ ಮೊದಲಾದವರು ಕಳೆದ ಎರಡು ವರ್ಷಗಳಿಂದ ಅಭಿವೃದ್ಧಿ ಚಟುವಟಿಕೆಗಳಿಗೆ ಅನುದಾನ ಬಿಡುಗಡೆಯಾಗಿಲ್ಲ ಎಂಬ ವಿಚಾರ ಹಾಗೂ ಶಾಸಕ ಮುನಿರತ್ನ ವಿರುದ್ಧ ಜಾತಿ ನಿಂದನೆ ಆರೋಪದ ವಿಚಾರಗಳು ಚರ್ಚೆಯಾದವು. ಬಳಿಕ ಪ್ರಶ್ನೋತ್ತರ ಹಾಗೂ ಗಮನ ಸೆಳೆಯುವ ಸೂಚನೆಗಳ ಕಲಾಪದಲ್ಲಿ ಶಾಸಕರು ತಮ ತಮ ಕ್ಷೇತ್ರಗಳಿಗೆ ಸಂಬಂಧಿಸಿದ ವಿಷಯ ಪ್ರಸ್ತಾಪಿಸಿದ ಸರ್ಕಾರದಿಂದ ಉತ್ತರ ಪಡೆದರು.
ಕಳೆದ ವಾರ ಒಂದು ದಿನ ವಿಧಾನಸಭೆ ಕಲಾಪ ರಾತ್ರಿ ಹತ್ತು ಗಂಟೆಯವರೆಗೂ ಜರುಗಿತ್ತು. ಕಳೆದ ರಾತ್ರಿ ಕಲಾಪ ಮುಗಿಯುವ ವೇಳೆಗೆ ಕೆಲವು ಶಾಸಕರು ಮಾತ್ರ ಇದ್ದರು. ಸಭಾಧ್ಯಕ್ಷರು, ಉಪ ಸಭಾಧ್ಯಕ್ಷರು, ಮೂವರು ಸಚಿವರು, 7 ಮಂದಿ ಕಾಂಗ್ರೆಸ್ ಶಾಸಕರು, ನಾಲ್ವರು ಜೆಡಿಎಸ್ ಹಾಗೂ ಒಬ್ಬರು ಬಿಜೆಪಿ ಹಾಗೂ ಮತ್ತೊಬ್ಬರು ಪಕ್ಷೇತರ ಶಾಸಕರು ಇದ್ದರು.
ಮೊದಲ ಆಯ್ಕೆಯಾಗಿರುವ ಜೆಡಿಎಸ್ ಶಾಸಕಿ ಕರೆಮ ಮಧ್ಯರಾತ್ರಿವರೆಗೂ ಕಲಾಪದಲ್ಲಿ ಭಾಗಿಯಾಗಿ ತಮ ಗಮನ ಸೆಳೆಯುವ ಸೂಚನೆಗೆ ಸರ್ಕಾರದಿಂದ ಉತ್ತರ ಪಡೆದರು.
ಹತ್ತು ದಿನಗಳ ಅಧಿವೇಶನದಲ್ಲಿ ಕಳೆದ ವಾರ ನಾಲ್ಕು ದಿನಗಳ ಕಾಲ ಸದನ ನಡೆದಿತ್ತು.
ಮಂಡ್ಯದಲ್ಲಿ ನಡೆಯುವ ಅಖಿಲ ಭಾರತ ಸಾಹಿತ್ಯ ಸಮೇಳನದ ಹಿನ್ನೆಲೆಯಲ್ಲಿ ಈ ವಾರ ಒಂದು ದಿನ ಮೊಟಕುಗೊಳಿಸಲಾಗಿದೆ. ಹೀಗಾಗಿ 8 ದಿನಗಳಿಗೆ ಕಲಾಪ ಸೀಮಿತಗೊಳ್ಳಲಿದೆ. ಇದರಿಂದ ಸಮಯದ ಅಭಾವದಿಂದ ಅಧಿಕೃತ ಕಾರ್ಯಕಲಾಪಗಳನ್ನು ಪೂರ್ಣಗೊಳಿಸಲು ತಡರಾತ್ರಿವರೆಗೆ ಅಧಿವೇಶನ ನಡೆಸಲಾಗಿದೆ.