Friday, November 22, 2024
Homeರಾಜ್ಯಚಾಮುಂಡಿ ಬೆಟ್ಟದಲ್ಲಿ ಮೊದಲ ಆಷಾಢ ಶುಕ್ರವಾರದ ಸಂಭ್ರಮ

ಚಾಮುಂಡಿ ಬೆಟ್ಟದಲ್ಲಿ ಮೊದಲ ಆಷಾಢ ಶುಕ್ರವಾರದ ಸಂಭ್ರಮ

ಮೈಸೂರು,ಜು.12- ಚಾಮುಂಡಿ ಬೆಟ್ಟದಲ್ಲಿಂದು ಮೊದಲ ಆಷಾಢ ಶುಕ್ರವಾರ ಪ್ರಯುಕ್ತ ಸಡಗರ, ಸಂಭ್ರಮ ಮನೆ ಮಾಡಿತ್ತು.ಮುಂಜಾನೆ ನಾಡ ಅಧಿದೇವತೆ ಚಾಮುಂಡೇಶ್ವರಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿ ದೇವಿಗೆ ಮಹಾಲಕ್ಷ್ಮಿ ಅಲಂಕಾರ ಮಾಡಲಾಗಿದ್ದು ನೋಡಲು ಎರಡು ಕಣ್ಣುಗಳು ಸಾಲದೆಂಬಂತಿದೆ.

ದೇವಿಯ ದರ್ಶನಕ್ಕಾಗಿ ರಾಜ್ಯಾದ್ಯಂತ ಆಗಮಿಸಿರುವ ಲಕ್ಷಾಂತರ ಮಂದಿ ಭಕ್ತಾದಿಗಳಿಗೆ ಸುಗಮ ದರ್ಶನಕ್ಕೆ ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಕಲ್ಪಿಸಿದೆ. ಚಾಮುಂಡಿ ಬೆಟ್ಟಕ್ಕೆ ಭಕ್ತಾದಿಗಳನ್ನು ಕರೆದೊಯ್ಯಲು 35 ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

ಬೆಳಿಗ್ಗೆ ದೇವಾಲಯದ ಪ್ರಧಾನ ಅರ್ಚಕರಾದ ಡಾಕ್ಟರ್ ಶಶಿಶೇಖರ ದೀಕ್ಷಿತ್ ಅವರ ನೇತೃತ್ವದಲ್ಲಿ ದೇವಿ ಚಾಮುಂಡೇಶ್ವರಿಗೆ ಮುಂಜಾನೆ ಮೂರು ಮೂವತ್ತರಿಂದ ಮಹಾನ್ ನ್ಯಾಸ ಪೂರ್ವಕ ರುದ್ರಾಭಿಷೇಕ, ಅಷ್ಟೋತ್ತರ ಸಹಸ್ರನಾಮ ಮತ್ತಿತರ ಪೂಜಾ ಕೈಂಕರ್ಯಗಳು ನೆರವೇರಿದವುವಿಶೇಷ ಪೂಜೆ ನಂತರ ಭಕ್ತಾದಿಗಳಿಗೆ ಬೆಳಿಗ್ಗೆ 6 ಗಂಟೆಯಿಂದ ತಾಯಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ಭಕ್ತಾದಿಗಳು ದೇವಾಲಯ ಪ್ರವೇಶಿಸಲು ಮೂರು ಸಾಲುಗಳ ವ್ಯವಸ್ಥೆ ಮಾಡಲಾಗಿತ್ತು. ಒಂದರಲ್ಲಿ ಧರ್ಮದರ್ಶನ ಮತ್ತೆರಡು ಸಾಲಿನಲ್ಲಿ 50 ರೂ.ವಿನ ಟಿಕೆಟ್ ಖರೀದಿಸಿ ದೇವಿಯ ದರ್ಶನಕ್ಕೆ ತೆರಳಬಹುದಾಗಿದೆ.ಪ್ರತಿ ವರ್ಷದಂತೆ ಈ ಬಾರಿಯೂ ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು.

ಭಕ್ತಾದಿಗಳು ಮೈಸೂರಿನ ಲಲಿತ ಮಹಲ್ ಹೆಲಿಪ್ಯಾಡ್ ನಲ್ಲಿ ವಾಹನಗಳನ್ನು ನಿಲ್ಲಿಸಿ ಅಲ್ಲಿಂದ ವ್ಯವಸ್ಥೆ ಮಾಡಲಾಗಿರುವ ಉಚಿತ ಬಸ್ಸುಗಳಲ್ಲಿ ಚಾಮುಂಡಿ ಬೆಟ್ಟಕ್ಕೆ ತೆರಳಬೇಕಾಗಿದೆ. ಭಕ್ತಾದಿಗಳಿಗಾಗಿ ಇಲ್ಲಿ ಶೌಚಾಲಯ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲುಗಳ ಮೂಲಕ ತೆರಳುವ ಭಕ್ತಾದಿಗಳಿಗಾಗಿ ಚಾಮುಂಡಿ ಬೆಟ್ಟದ ಮೆಟ್ಟಿಲುಗಳಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ.ಶಕ್ತಿದೇವತೆಯ ದರ್ಶನ ಪಡೆದ ಭಕ್ತರು ಪುನೀತರಾಗಿ ದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್್ತ ಮಾಡಲಾಗಿದೆ. ಎಲ್ಲಾ ವ್ಯವಸ್ಥೆ ಅಚ್ಚುಕಟ್ಟಾಗಿದೆ, 800 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

ದೇವಾಲಯದ ಪ್ರಾಂಗಣ ಹಾಗೂ ಆವರಣವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿದ್ದು, ಹಬ್ಬದ ವಾತಾವರಣ ಮನೆ ಮಾಡಿದೆ. ರಾತ್ರಿವರೆಗೂ ದೇವಿಯ ದರ್ಶನ ಇರಲಿದೆ.

RELATED ARTICLES

Latest News