ರಂಗಾರೆಡ್ಡಿ(ತೆಲಂಗಾಣ),ನ.3- ಜಲ್ಲಿಕಲ್ಲು ಸಾಗಿಸುತ್ತಿದ್ದ ಟಿಪ್ಪರ್ ಲಾರಿ, ಸಾರಿಗೆ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್‌ನಲ್ಲಿದ್ದ 20 ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ಇಂದು ಬೆಳಿಗ್ಗೆ ತೆಲಂಗಾಣಾದ ರಂಗಾರೆಡ್ಡಿ ಜಿಲ್ಲೆಯ ಚವೆಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಡಿಕ್ಕಿಯ ರಭಸಕ್ಕೆ ಟಿಪ್ಪರ್ ಲಾರಿಯಲ್ಲಿದ್ದ ಜಲ್ಲಿಕಲ್ಲು ಬಸ್‌ನೊಳಗೆ ತುಂಬಿಕೊಂಡ ಪರಿಣಾಮ ಅದರಡಿ ಸಿಲುಕಿ 20 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 15 ಮಂದಿ ಗಾಯಗೊಂಡಿದ್ದು, ಹತ್ತಿರದ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ. ಈ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಪಘಾತದ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳೀಯರ ನೆರವಿನೊಂದಿಗೆ ಬಸ್‌ನೊಳಗೆ ಸಿಲುಕಿಕೊಂಡಿದ್ದ ಪ್ರಯಾಣಿಕರನ್ನು ಹರಸಾಹಸಪಟ್ಟು ಹೊರಗೆ ಕರೆತಂದಿದ್ದಾರೆ.
ವಿಕಾರಾಬಾದ್-ಹೈದರಾಬಾದ್ ಮಾರ್ಗದಲ್ಲಿ ಇಂದು ಬೆಳಿಗ್ಗೆ 7.30ರ ಸುಮಾರಿಗೆ ದ್ವಿಚಕ್ರ ವಾಹನವನ್ನು ಹಿಂದಿಕ್ಕುವ ಪ್ರಯತ್ನದಲ್ಲಿ ಟಿಪ್ಪರ್ ಲಾರಿ ಅತಿವೇಗವಾಗಿ ಮುನ್ನುಗಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ.
ಘಟನಾ ಸ್ಥಳಕ್ಕೆ ತೆಲಂಗಾಣ ಸಾರಿಗೆ ಸಚಿವ ಪೊನ್ನಂ ಪ್ರಭಾಕರ್ ಭೇಟಿ ನೀಡಿ ಅಪಘಾತದ ಕಾರಣದ ಬಗ್ಗೆ ಅವರು ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮ (ಟಿಜಿಎಸ್‌ಆರ್‌ಟಿಸಿ) ವ್ಯವಸ್ಥಾಪಕ ನಿರ್ದೇಶಕ ವೈ.ನಾಗಿರೆಡ್ಡಿ ಅವರೊಂದಿಗೆ ಮಾತನಾಡಿದರು.ಅಧಿಕೃತ ಸಂವಹನದ ಪ್ರಕಾರ, ಜಲ್ಲಿ ತುಂಬಿದ ಟಿಪ್ಪರ್ ಲಾರಿ ತಪ್ಪು ಮಾರ್ಗದಿಂದ ಬಂದು ಬಸ್‌ಗೆ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾಂಡೂರು ಡಿಪೋಗೆ ಸೇರಿದ ಈ ಬಸ್ ಹೈದರಾಬಾದ್‌ಗೆ ತೆರಳುತ್ತಿತ್ತು. ಬಸ್‌ನಲ್ಲಿ ಸುಮಾರು 40 ಜನರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಮೃತರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದ ಹೇಳಿದರು. ಸಾವನ್ನಪ್ಪಿದವರಲ್ಲಿ ಆರ್‌ಟಿಸಿ ಬಸ್ ಚಾಲಕ ಮತ್ತು ಲಾರಿ ಚಾಲಕರು ಸೇರಿದ್ದಾರೆ. ಹಲವಾರು ಮಹಿಳೆಯರು ಮತ್ತು ಹತ್ತು ತಿಂಗಳ ಮಗು ಮತ್ತು ಅದರ ತಾಯಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಪ್ರಾಥಮಿಕ ವರದಿಗಳ ಪ್ರಕಾರ ತಾಂಡೂರಿನಿಂದ ಹೈದರಾಬಾದ್‌ಗೆ ಆರ್‌ಟಿಸಿ ಬಸ್ ಹೋಗುತ್ತಿತ್ತು ಇದರಲ್ಲಿ ಬಹುತೇಕ ವಿದ್ಯಾರ್ಥಿಗಳು ಮತ್ತು ಕಚೇರಿಗೆ ಹೋಗುವವರು ವಾರಾಂತ್ಯದ ನಂತರ ನಗರಕ್ಕೆ ಮರಳುತ್ತಿದ್ದರು.
ಅನೇಕ ವಿದ್ಯಾರ್ಥಿಗಳು ಹೈದರಾಬಾದ್‌ನ ವಿವಿಧ ಕಾಲೇಜುಗಳಲ್ಲಿ ಓದುತ್ತಿದ್ದರು ಭಾನುವಾರ ರಜೆಯ ಕಾರಣ ತಮ ಮನೆಗೆ ಭೇಟಿ ನೀಡಿ ಹಿಂತಿರುಗುತ್ತಿದ್ದರು.ಅಪಘಾತದಿಂದಾಗಿ ಹೈದರಾಬಾದ್-ಬಿಜಾಪುರ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು ಚವೆಲ್ಲಾ-ವಿಕಾರಾಬಾದ್ ಮಾರ್ಗದಲ್ಲಿ ವಾಹನಗಳ ಸಾಲುಗಳು ಕಿಲೋ ಮೀಟರ್‌ನಷ್ಟು ನಿಂತಿದ್ದು ಕಂಡುಬಂತು.
ತುರ್ತು ತಂಡಗಳು ಸ್ಥಳಕ್ಕೆ ಧಾವಿಸಿ ಮೂರು ಜೆಸಿಬಿ ಯಂತ್ರಗಳನ್ನು ಬಳಸಿ ಅವಶೇಷಗಳನ್ನು ತೆಗೆದು, ಒಳಗೆ ಸಿಲುಕಿರುವವರನ್ನು ಹೊರತೆಗೆಯಲು ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿವೆ.
ಪರಿಹಾರ: ಪ್ರಧಾನಿ ನರೇಂದ್ರ ಮೋದಿ ಅವರು ಅಪಘಾತದ ಬಗ್ಗೆ ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಹಾಗೂ ಗಂಭೀರ ಗಾಯಾಳುಗಳಿಗೆ 50 ಸಾವಿರ ರೂ ಪರಿಹಾರ ಘೋಷಿಸಿದ್ದಾರೆ.


