ಬೆಂಗಳೂರು,ಡಿ.26– ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಮೇಲೆ ಕಾಂಗ್ರೆಸ್ನ ಕೆಲವು ಬಾಡಿಗೆ ಗೂಂಡಾಗಳು ಪ್ರಾಯೋಜಿತ ದಾಳಿ ನಡೆಸಿದ್ದು, ಸರ್ಕಾರ ಕೂಡಲೇ ನ್ಯಾಯಾಂಗ ತನಿಖೆಗೆ ವಹಿಸಬೇಕೆಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಮೇಲ್ನೋಟಕ್ಕೆ ಪ್ರಾಯೋಜಿತ ಕೃತ್ಯ ಎಂಬುದು ಕಂಡು ಬರುತ್ತಿದೆ. ಮೊಟ್ಟೆಯಲ್ಲಿ ದುಷ್ಕ ರ್ಮಿಗಳು ಆ್ಯಸಿಡ್ ಮಿಶ್ರಣ ಮಾಡಿದ್ದಾರೆಂದು
ವೈದ್ಯ ಡಾ.ಸಿ.ಎನ್.ಮಂಜುನಾಥ್ ಹೇಳಿದ್ದಾರೆ.
ಸತ್ಯಾಸತ್ಯತೆ ಹೊರಬರಲು ನ್ಯಾಯಾಂಗ ತನಿಖೆ ಸೂಕ್ತ ಎಂದು ಅಭಿಪ್ರಾಯಪಟ್ಟರು. ರಾಜ್ಯದಲ್ಲಿ ದ್ವೇಷದ ರಾಜಕಾರಣ ನಡೆಯುತ್ತಿದೆ. ಪ್ರತಿಪಕ್ಷದವರನ್ನು ಹತ್ತಿಕ್ಕುವ ಕಾರ್ಯ ಸರ್ಕಾರದಿಂದ ನಡೆಯುತ್ತಿದೆ. ವಿಧಾನಸೌಧದಲ್ಲಿ ಸಿ.ಟಿ.ರವಿ ಮೇಲೆ ದಾಳಿ ನಡೆಸಲಾಯಿತು. ಈಗ ಮುನಿರತ್ನ ಮೇಲೆ ಆ್ಯಸಿಡ್ ಮಿಶ್ರಿತ ಮೊಟ್ಟೆ ಎಸಗಿದ್ದಾರೆ. ಮುಂದೆ ಇನ್ಯಾರನ್ನೋ ಗುರಿಯಾಗಿಟ್ಟುಕೊಂಡಿದ್ದಾರೋ ಗೊತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಆ್ಯಸಿಡ್ ದಾಳಿ ನಡೆದಿದೆ ಎಂದು ಸ್ವತಃ ಮುನಿರತ್ನ ಅವರೇ ಹೇಳಿದ್ದಾರೆ. ಕಾಂಗ್ರೆಸ್ನವರು ತಾಲಿಬಾನ್ ಆಡಳಿತಕ್ಕೆ ಮುನ್ನುಡಿ ಬರೆದಿದ್ದಾರೆ. ಸಿ.ಟಿ.ರವಿ ಮೇಲೆ ದಾಳಿಯಾಗಿ ವಾರವಾಗಿಲ್ಲ. ಈಗ ಮತ್ತೊಮೆ ಶಾಸಕನ ಮೇಲೆ ದಾಳಿ ನಡೆದಿದೆ. ಅನೇಕ ಕಾಂಗ್ರೆಸ್ ಶಾಸಕರ ಮೇಲೆ ಆರೋಪವಿದೆ. ಹಾಗಾದರೆ ಆ ಪಕ್ಷದ ಕಾರ್ಯಕರ್ತರು ಹೀಗೆಯೇ ಮಾತನಾಡುತ್ತಾರೆಯೇ ಎಂದು ಪ್ರಶ್ನಿಸಿದರು.
ನ್ಯಾಯಾಂಗ ತನಿಖೆಗೊಳಪಡಿಸಿದರೆ ಸತ್ಯ ಹೊರಬರುತ್ತದೆ. ಪೊಲೀಸರಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ. ಅವರು ಏನು ವರದಿ ಕೊಡುತ್ತಾರೆ ಎಂಬುದನ್ನು ಬಾಯ್ಬಿಟ್ಟು ಹೇಳುವ ಅಗತ್ಯವೂ ಇಲ್ಲ. ಮುನಿರತ್ನ ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಶಿಕ್ಷೆಯಾಗುತ್ತದೆ. ತಪ್ಪು ಮಾಡಿದವರ ಮೇಲೆ ಹಲ್ಲೆ ಮಾಡುತ್ತಾರೆಂದರೆ ಅನೇಕ ಕಾಂಗ್ರೆಸ್ ಶಾಸಕರು ತಲೆ ಎತ್ತಿ ನಡೆಯಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.
ಸಂಸತ್ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಂಬೇಡ್ಕರ್ ಅವರ ಬಗ್ಗೆ ಮಾತಾಡಿದ್ದನ್ನು ಕಾಂಗ್ರೆಸ್ ತಿರುಚುತ್ತಿದೆ. ಅಂಬೇಡ್ಕರ್ ಎಂದೂ ಕಾಂಗ್ರೆಸ್ ಸದಸ್ಯರು ಆಗಿರಲಿಲ್ಲ. ತನ್ನದೇ ಆದ ಪಕ್ಷ ಸ್ಥಾಪನೆ ಮಾಡಿ ಸ್ಪರ್ಧಿಸಿದ್ದರು. 1952-54 ರಲ್ಲಿ ಸ್ಪರ್ಧೆ ಮಾಡಿದಾಗ ನೆಹರು ಹೋಗಿ ವಿರುದ್ದ ಪ್ರಚಾರ ಮಾಡಿ ಸೋಲಿಸಿ ಎಂದಿದ್ದರು. ಇದೀಗ ಅಂಬೇಡ್ಕರ್ ಪರ ಪ್ರತಿಭಟನೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಗೆ ಯಾವ ನೈತಿಕತೆ ಇದೆ? ಎಂದು ಪ್ರಶ್ನಿಸಿದರು.
ಈ ಪ್ರಕರಣದಿಂದ ನಮಗೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ. ಸಂವಿಧಾನ ಭಗವದ್ಗೀತೆ ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ ನಾವು ಅಂಬೇಡ್ಕರ್ ಪರ ಇರುವವರು ಎಂದು ಸಮರ್ಥಿಸಿಕೊಂಡರು.
ಬೆಳಗಾವಿಗೆ ಗಾಂಧಿ ಬಂದು ನೂರು ವರ್ಷ ಕಳೆದಿದೆ ಎಂದು ಕಾಂಗ್ರೆಸ್ ಕಾರ್ಯಕ್ರಮ ಮಾಡುತ್ತಿದೆ. ಸರ್ಕಾರದ ದುಡ್ಡಲ್ಲಿ ಪಕ್ಷದ ಕಾರ್ಯಕ್ರಮ ಮಾಡುತ್ತ್ತಿದ್ದಾರೆ. ಇದರ ವಿರುದ್ದದ ಪ್ರತಿಭಟನೆ ಮಾಡುತ್ತಿದ್ದೇವೆ. ನಾಳೆ ಕಾರ್ಯಕ್ರಮದ ದಿನ ವಿಧಾನಸೌಧದ ಮುಂಭಾಗ ಗಾಂಧೀಜಿ ಪ್ರತಿಮೆ ಬಳಿ ಪ್ರತಿಭಟನೆ ಮಾಡುತ್ತೇವೆ ಎಂದರು.
ಕಾರ್ಯಕ್ರಮಕ್ಕೆ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತ್ರ ಆಹ್ವಾನ ಕೊಟ್ಟಿದ್ದಾರೆ. ಪ್ರಧಾನಿ ನರೇಂದ್ರಮೋದಿ, ಕೇಂದ್ರ ಸಚಿವರಾದ ಕುಮಾರಸ್ವಾಮಿ, ಪ್ರಹ್ಲಾದ್ ಜೋಷಿ, ಸ್ಥಳೀಯ ಸಂಸದ ಜಗದೀಶ್ ಶೆಟ್ಟರ್, ಶಾಸಕ ಅಭಯ್ ಪಾಟೀಲ್ ಯಾರಿಗೂ ಆಹ್ವಾನ ಇಲ್ಲ ಎಂದು ಅಶೋಕ್ ಕಿಡಿಕಾರಿದರು.