ಬೆಂಗಳೂರು, ಮೇ 30- ಬಾಂಗ್ಲಾದಿಂದ ನುಸುಳಿಕೊಂಡು ಬಂದು ಅಕ್ರಮವಾಗಿ ನಗರದಲ್ಲಿ ವಾಸವಾಗಿದ್ದ ಬಾಂಗ್ಲಾ ಪ್ರಜೆಗಳ ನಿವಾಸಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ದಾಖಲೆಗಳನ್ನ ಪರಿಶೀಲಿಸಿದ್ದಾರೆ.
ಮಧ್ಯರಾತ್ರಿ ಒಂದು ಗಂಟೆಯಿಂದ ಬೆಳಗಿನ ಜಾವ 5 ಗಂಟೆಯವರೆಗೆ ಎಲೆಕ್ಟ್ರಾನಿಕ್ ಸಿಟಿ, ರಾಮಮೂರ್ತಿನಗರ ಸೇರಿದಂತೆ ಆರು ಪ್ರದೇಶಗಳಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಈ ಪ್ರದೇಶಗಳಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ಪ್ರಜೆಗಳು ಯಾವ ಮಾರ್ಗವಾಗಿ ನಗರಕ್ಕೆ ಬಂದಿದ್ದಾರೆ. ಎಷ್ಟು ವರ್ಷದಿಂದ ಇಲ್ಲಿ ನೆಲೆಸಿದ್ದಾರೆ. ಅವರ ಬಳಿ ಯಾವ ದಾಖಲೆಗಳಿವೆ, ಅವರುಗಳ ಆಧಾರ ಕಾರ್ಡ್ ಸೇರಿದಂತೆ ವಿವಿಧ ದಾಖಲೆಗಳನ್ನು ಪರಿಶೀಲಿಸಿದರು.
ಸಿಸಿಬಿ ಜಂಟಿ ಪೊಲೀಸ್ ಆಯುಕ್ತರಾದ ಚಂದ್ರಗುಪ್ತ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಬಾಂಗ್ಲಾ ದೇಶದಿಂದ ನುಸುಳಿಕೊಂಡು ಅಕ್ರಮವಾಗಿ ನಗರಕ್ಕೆ ಬಂದು ನೆಲೆಸಿರುವವರನ್ನು ಗುರಿಯಾಗಿಸಿಕೊಂಡು ಈ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.
ದಾಳಿ ಸಂದರ್ಭದಲ್ಲಿ ಕೆಲವರನ್ನು ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿ ಹೆಚ್ಚಿನ ಮಾಹಿತಿಗಳನ್ನು ಕಲೆಹಾಕಲಾಗಿದೆ.