Tuesday, April 1, 2025
Homeರಾಜ್ಯಸಚಿವ ಕೆ.ಎನ್‌.ರಾಜಣ್ಣ ಅವರ ಪುತ್ರ ರಾಜೇಂದ್ರ ಕೊಲೆಗೆ ಯತ್ನ

ಸಚಿವ ಕೆ.ಎನ್‌.ರಾಜಣ್ಣ ಅವರ ಪುತ್ರ ರಾಜೇಂದ್ರ ಕೊಲೆಗೆ ಯತ್ನ

Attempted murder of Minister K.N. Rajanna's son Rajendra

ಬೆಂಗಳೂರು,ಮಾ.27– ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಅವರ ಪುತ್ರ ಹಾಗೂ ವಿಧಾನಪರಿಷತ್‌ ಸದಸ್ಯ ರಾಜೇಂದ್ರ ರಾಜಣ್ಣ ಪೊಲೀಸ್‌‍ ಮಹಾ ನಿರ್ದೇಶಕರಿಗೆ ದೂರು ನೀಡಿದ್ದು, ತಮ್ಮ ಹತ್ಯೆಯ ಪ್ರಯತ್ನ ನಡೆದಿದೆ ಎಂದು ಆರೋಪಿಸಿದ್ದಾರೆ. ಪೊಲೀಸ್‌‍ ಮಹಾ ನಿರ್ದೇಶಕ ಅಲೋಕ್‌ಮೋಹನ್‌ ಅವರಿಗೆ ಇಂದು ಲಿಖಿತವಾಗಿ ದೂರು ನೀಡಿರುವ ರಾಜೇಂದ್ರ ರಾಜಣ್ಣ, ಡಿಜಿಯವರ ಸಲಹೆ ಮೇರೆಗೆ ನಾಳೆ ತುಮಕೂರು ಜಿಲ್ಲಾ ಎಸ್ಪಿಯವರಿಗೆ ದೂರು ನೀಡಲಿದ್ದಾರೆ.

ಇಂದು ಬೆಳಿಗ್ಗೆ ಪೊಲೀಸ್‌‍ ಮಹಾ ನಿರ್ದೇಶಕರ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ ರಾಜೇಂದ್ರ, ನವೆಂಬರ್‌ 16 ರಂದು ನನ್ನ ಮಗಳ ಹುಟ್ಟಿದ ಹಬ್ಬವಿತ್ತು. ಅದಕ್ಕೆ ಶಾಮಿಯಾನ ಹಾಕಲು ಹಿಂದಿನ ದಿನ ಕೆಲವರು ಮನೆಗೆ ಬಂದಿದ್ದರು. ಶಾಮಿಯಾನ ಹಾಕುವ ನೆಪದಲ್ಲಿ ಬಂದಿದ್ದ ಇಬ್ಬರು ನನ್ನ ಮೇಲೆ ಹಲ್ಲೆ ಮಾಡುವ ಅಥವಾ ಕೊಲೆ ಮಾಡುವ ಸಂಚಿನ ಭಾಗವಾಗಿದ್ದರು. ಆದರೆ ಅವರ ಪ್ರಯತ್ನ ಯಶಸ್ವಿಯಾಗಿಲ್ಲ ಎಂದು ತಿಳಿಸಿದ್ದಾರೆ.

ನವೆಂಬರ್‌ 15 ರಂದು ನಡೆದಿದ್ದ ಈ ಘಟನೆ ಜನವರಿಯಲ್ಲಿ ನನಗೆ ನನ್ನದೇ ಆದಂತಹ ಮೂಲದಿಂದ ದೊರೆತ ಆಡಿಯೋ ಮೂಲಕ ಬಹಿರಂಗವಾಗಿದೆ. ಆಡಿಯೋದಲ್ಲಿ ಇಬ್ಬರ ನಡುವೆ ಸಂಭಾಷಣೆಯಾಗಿದೆ. ನನ್ನನ್ನು ಕೊಲೆ ಮಾಡುವ ಉದ್ದೇಶದ ಸಂಚಿನಲ್ಲಿ ಭಾಗಿಯಾದ ಇಬ್ಬರು ಆರೋಪಿಗಳಿಗೆ 5 ಲಕ್ಷ ರೂ. ಸುಫಾರಿ ಹಣ ಸಂದಾಯವಾಗಿರುವುದು ಅದಕ್ಕೆ ಪ್ರತಿಯಾಗಿ ಅವರು ನನ್ನನ್ನು ಕೊಲ್ಲುವ ಪ್ರಯತ್ನ ಮಾಡಬೇಕೆಂಬ ಸಂದೇಶಗಳಿವೆ. ಈ ಆಡಿಯೋವನ್ನು ನಾನು ದೂರಿನೊಂದಿಗೆ ಡಿಜಿಯವರಿಗೆ ತಲುಪಿಸಿದ್ದೇನೆ ಎಂದಿದ್ದಾರೆ.

ತಮ ಮೇಲೆ ಯಾವುದೇ ರೀತಿಯ ಹನಿಟ್ರ್ಯಾಪ್‌ ನಡೆದಿಲ್ಲ. ಅಂತಹ ಪ್ರಯತ್ನಗಳೂ ಆಗಿಲ್ಲ. ಕೊಲೆ ಯತ್ನ ಮಾತ್ರ ಕಂಡುಬಂದಿದೆ. ಆರಂಭದಲ್ಲಿ ಕೊಲೆ ಯತ್ನದ ಬಗ್ಗೆ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಗಂಭೀರವಾಗಿ ಪರಿಗಣಿಸಲೇಬೇಕಾದ ಪರಿಸ್ಥಿತಿ ಈಗ ಬಂದಿದೆ. ಹೀಗಾಗಿ ಮುಖ್ಯಮಂತ್ರಿಯವರ ಸಲಹೆ ಮೇರೆಗೆ ದೂರು ದಾಖಲಿಸುತ್ತಿದ್ದೇನೆ ಎಂದರು.

ನನ್ನ ಮನೆಯಲ್ಲಿ ಸಿಸಿಟಿವಿ ಇದೆ. ಅದನ್ನು ಪರಿಶೀಲಿಸಿ ಯಾರು, ಯಾರೆಲ್ಲಾ ಬಂದಿದ್ದರು. ಅವರ ಉದ್ದೇಶಗಳೇನು ಎಂಬ ವಿಚಾರದ ಬಗ್ಗೆಯೂ ಪರಿಶೀಲನೆ ನಡೆಸುವುದಾಗಿ ಹೇಳಿದರು. ಸಹಕಾರ ಸಚಿವ ರಾಜಣ್ಣ ಅವರು ಈಗಾಗಲೇ ಹೇಳಿಕೆ ನೀಡಿದ್ದು, ತಮ ಮೇಲೆ 2 ಬಾರಿ ಹನಿಟ್ರ್ಯಾಪ್‌ ಆಗಿದೆ ಎಂದು ಹೇಳಿದ್ದಾರೆ. ಆ ನಿಟ್ಟಿನಲ್ಲಿ ರಾಜಣ್ಣ ಗೃಹಸಚಿವರಿಗೆ ಮನವಿ ನೀಡಿದ್ದಾರೆ.

ಮನವಿಯನ್ನು ಡಿಐಜಿಯವರಿಗೆ ರವಾನಿಸಲಾಗಿತ್ತು. ಅಲ್ಲಿಂದ ಸಿಐಡಿ ತನಿಖೆಗೆ ಸೂಚಿಸಿರುವ ಸಾಧ್ಯತೆಯಿದೆ.ಸಿಐಡಿ ಅಧಿಕಾರಿಗಳು ಇಂದು ಬೆಳಿಗ್ಗೆ ಸಚಿವರ ಅಧಿಕೃತ ನಿವಾಸ ಜಯಮಹಲ್‌ನ ಅತಿಥಿಗೃಹಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಮನೆಯಲ್ಲಿ ಯಾರೆಲ್ಲಾ ಇರುತ್ತಾರೆ ಎಂಬುದರ ಕುರಿತು ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಹೇಳಿದರು.

RELATED ARTICLES

Latest News