ಅಡಿಲೇಡ್, ಡಿ.8- ಇಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಎರಡನೆ ಪಂದ್ಯದಲ್ಲಿ ಭಾರತ ತಂಡ ಹೀನಾಯ ಸೋಲು ಕಂಡಿದೆ.ಹೊನಲು ಬೆಳಕಿನ ನಸುಗೆಂಪು ಬಣ್ಣದ ಚೆಂಡಿನ ಕ್ರಿಕೆಟ್ ಟೆಸ್ಟ್ನಲ್ಲಿ ಭಾರತದ ಬ್ಯಾಟ್ಸ್ ಮನ್ಗಳು ರನ್ ಗಳಿಸಲು ಪರದಾಡಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿದ್ದಾರೆ.
ಮೂರನೆ ದಿನದಾಟದಲ್ಲಿಂದು ಮೊದಲಾರ್ಧದಲ್ಲೇ ದ್ವಿತೀಯ ಇನ್ನಿಂಗ್ಸ್ ನಲ್ಲಿ 175 ರನ್ಗಳಿಗೆ ಸರ್ವಪತನ ಕಂಡು ಆಸಿಸ್ಗೆ ಕೇವಲ 19 ರನ್ಗಳ ಗೆಲುವಿನ ಗುರಿಯನ್ನು ನೀಡಿದ್ದರು.
ಕೇವಲ ಮೂರು ಓವರ್ಗಳಲ್ಲಿ 19 ರನ್ ಚಚ್ಚಿ ಆಸ್ಟ್ರೇಲಿಯಾ ಭರ್ಜರಿ ಗೆಲುವು ಸಾಧಿಸುವುದರೊಂದಿಗೆ ಟೆಸ್ಟ್ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ.
ಎರಡನೆ ದಿನದಾಟದಲ್ಲಿ ಟ್ರಾವೆಲ್ ಹೆಡ್ ಅವರ ಅಮೋಘ ಶತಕದ ನೆರವಿನಿಂದ ದ್ವಿತೀಯ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ 337 ರನ್ ಕಲೆ ಹಾಕಿತ್ತು. ಇದಕ್ಕುತ್ತರವಾಗಿ ನಿನ್ನೆ ಪ್ರಮುಖ ಬ್ಯಾಟ್ಸ್ ಮನ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತ 24 ಓವರ್ಗಳಲ್ಲಿ 5 ವಿಕೆಟ್ಗೆ 128 ರನ್ ಗಳಿಸಿತ್ತು. ಇಂದು ಮೂರನೆ ದಿನದಾಟ ಆರಂಭಿಸಿದ ರಿಷಭ್ ಪಂತ್ ಮತ್ತು ನಿತೀಶ್ಕುಮಾರ್ ಜೋಡಿ ಹೆಚ್ಚು ಹೊತ್ತು ಬ್ಯಾಟ್ ಬೀಸಲು ಸಾಧ್ಯವಾಗದೆ ಬಹುಬೇಗನೆ ಔಟಾಗುವ ಮೂಲಕ ಭಾರತದ ಸೋಲು ಖಚಿತವಾಗಿತ್ತು.
ಆದರೆ, ಇನ್ನಿಂಗ್ಸ್ ಸೋಲು ತಪ್ಪಿಸಿಕೊಂಡು ಕೇವಲ 175 ರನ್ ಕಲೆ ಹಾಕಿ ಆಸಿಸ್ಗೆ ಶರಣಾಗಿದೆ.
ಸಂಕ್ಷಿಪ್ತ ಸ್ಕೋರ್:
ಭಾರತ- ಪ್ರಥಮ ಇನ್ನಿಂಗ್ಸ್ 180
ಆಸ್ಟ್ರೇಲಿಯಾ- ಪ್ರಥಮ ಇನ್ನಿಂಗ್ಸ್ 337
ಭಾರತ- ದ್ವಿತೀಯ ಇನ್ನಿಂಗ್ಸ್ 175
ಆಸ್ಟ್ರೇಲಿಯಾ- ದ್ವಿತೀಯ ಇನ್ನಿಂಗ್ಸ್ ವಿಕೆಟ್ ನಷ್ಟವಿಲ್ಲದೆ 19