ಬೆಂಗಳೂರು,ಜ.16- ಮನೆ ಕಿಟಿಕಿಯಲ್ಲಿದ್ದ ಕೀ ಮೂಲಕ ಬಾಗಿಲು ತೆಗೆದು ಒಳನುಗ್ಗಿ ಹಣ- ಆಭರಣ ಕಳವು ಮಾಡಿಕೊಂಡು ಪರಾರಿಯಾಗಿದ್ದ ಆಟೋ ಚಾಲಕನನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿ, 8 ಲಕ್ಷ ಬೆಲೆ ಬಾಳುವ ಚಿನ್ನಾಭರಣ ಹಾಗೂ ಹಣ ವಶಪಡಿಸಿಕೊಂಡಿದ್ದಾರೆ.
ಆನೇಕಲ್ ತಾಲ್ಲೂಕು ಜಿಗಣಿ ಹೋಬಳಿ ಬ್ಯಾಟರಾಯನದೊಡ್ಡಿ ಗ್ರಾಮದ ಕಾರ್ತಿಕ್ಕುಮಾರ್ ಅಲಿಯಾಸ್ ಟ್ಯಾಟು ಕಾರ್ತಿಕ್(25) ಬಂಧಿತ ಆರೋಪಿ. ವೃಷಭಾವತಿ ನಗರದ 12ನೇ ಮುಖ್ಯರಸ್ತೆ ನಿವಾಸಿ ಪ್ರೇಮನಾಥ ಎಂಬುವರು ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಹೋಗಲು ಆಟೋ ಬುಕ್ ಮಾಡಿದ್ದು, ಮನೆ ಬಳಿ ಬಂದ ಆಟೋದಲ್ಲಿ ಡ್ರಾಪ್ ಪಡೆಯುವ ವೇಳೆ ಮನೆಗೆ ಬೀಗ ಹಾಕಿ ಕೀಯನ್ನು ಕಿಟಕಿ ಬಳಿ ಇಡುವುದನ್ನು ಆಟೋ ಚಾಲಕ ಗಮನಿಸಿದ್ದಾನೆ.
ನಂತರ ಇವರನ್ನು ಸ್ಯಾಟ್ಲೈಟ್ ಬಸ್ ನಿಲ್ದಾಣಕ್ಕೆ ಡ್ರಾಪ್ ಮಾಡಿ ವಾಪಸ್ ಇವರ ಮನೆ ಬಳಿ ಬಂದು ಕಿಟಕಿಯಲ್ಲಿದ್ದ ಕೀ ಬಳಸಿ ಮನೆ ಬೀಗ ತೆಗೆದು ಬೀರುವಿನಲ್ಲಿದ್ದ 138 ಗ್ರಾಂ ಚಿನ್ನಾಭರಣ, 250 ಗ್ರಾಂ ಬೆಳ್ಳಿಯ ಸಾಮಾಗ್ರಿ ಹಾಗೂ 1.7 ಲಕ್ಷ ಹಣವನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದನು.
ಮನೆಗಳ್ಳತನವಾಗಿರುವ ಬಗ್ಗೆ ಪ್ರೇಮನಾಥ ಅವರು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆಟೋ ಚಾಲಕನನ್ನು ಬಂಧಿಸಿ ಆಭರಣ ಹಾಗೂ 2 ಸಾವಿರ ಹಣ, ಕೃತ್ಯಕ್ಕೆ ಬಳಸಿದ್ದ ಆಟೋ ರಿಕ್ಷಾ ಹಾಗು ಒಂದು ಮೊಬೈಲ್ನ್ನು ವಶಪಡಿಸಿಕೊಳ್ಳುವಲ್ಲಿ ಇನ್ಸ್ಪೆಕ್ಟರ್ ನಾಗೇಶ್ ನೇತೃತ್ವದ ಸಿಬ್ಬಂದಿ ತಂಡ ಯಶಸ್ವಿಯಾಗಿದೆ.