ಬೆಂಗಳೂರು,ಸೆ.13- ಆಟೋಚಾಲಕ ರಸ್ತೆ ಮಧ್ಯೆ ನಿಲ್ಲಿಸಿದ್ದ ಗೂಡ್ಸ್ ವಾಹನವನ್ನು ಪಕ್ಕಕ್ಕೆ ನಿಲ್ಲಿಸಲು ಚಾಲನೆ ಮಾಡುತ್ತಿದ್ದಂತೆ ನಿಯಂತ್ರಣ ತಪ್ಪಿ ಏಳು ವಾಹನಗಳಿಗೆ ಅಪ್ಪಳಿಸಿ ಪಾದಚಾರಿ ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟಿರುವ ಘಟನೆ ಚಾಮರಾಜಪೇಟೆ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಕಾಟನ್‌ಪೇಟೆ ನಿವಾಸಿ ಅಂಜನಾದೇವಿ (50) ಮೃತಪಟ್ಟ ಪಾದಚಾರಿ ಮಹಿಳೆ.
ನಿನ್ನೆ ಸಂಜೆ 5.30 ರ ಸುಮಾರಿನಲ್ಲಿ ಕಿರಣ್ ಎಂಬಾತ ತನ್ನ ಪ್ಯಾಸೆಂಜರ್ ಆಟೋದಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ಮನೆಗಳಿಗೆ ಬಿಡಲು ಹೋಗುತ್ತಿದ್ದನು. ಕಾಟನ್‌ಪೇಟೆ ಮುಖ್ಯರಸ್ತೆಯ ಮಿಲ್ ರೋಡ್ ಜಂಕ್ಷನ್ ಬಳಿ ಬಂದಾಗ ರಸ್ತೆ ಮಧ್ಯೆ ಗೂಡ್‌್ಸ ವಾಹನ ನಿಂತಿರುವುದು ಗಮನಿಸಿದ್ದಾನೆ.
ಗೂಡ್‌್ಸ ವಾಹನ ಚಾಲಕ ಅಗರಬತ್ತಿ ಲೋಡ್ ಮಾಡಲು ರಸ್ತೆ ಮಧ್ಯೆ ವಾಹನ ನಿಲ್ಲಿಸಿ ಹೋಗಿದ್ದನು. ಈ ವಾಹನವನ್ನು ಪಕ್ಕಕ್ಕೆ ನಿಲ್ಲಿಸಿ ತನ್ನ ಆಟೋಗೆ ಜಾಗ ಮಾಡಿಕೊಳ್ಳುವ ಸಲುವಾಗಿ ಆಟೋ ಚಾಲಕ ಗೂಡ್ಸ್ ವಾಹನವನ್ನು ಚಲಾಯಿಸಲು ಮುಂದಾಗಿದ್ದಾನೆ.
ಆ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ನಾಲ್ಕು ದ್ವಿಚಕ್ರ ವಾಹನಗಳು, ಮೂರು ಕಾರುಗಳಿಗೆ ಡಿಕ್ಕಿ ಹೊಡೆದು ನಂತರ ಪಾದಚಾರಿ ಮಹಿಳೆಗೆ ಗುದ್ದಿ ಸರಣಿ ಅಪಘಾತವಾಗಿದೆ.ಗಂಭೀರ ಗಾಯಗೊಂಡಿದ್ದ ಮಹಿಳೆ ಅಂಜನಾದೇವಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಚಾಮರಾಜಪೇಟೆ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಚಾಲಕ ಕಿರಣ್‌ನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.ಅಪಘಾತದಿಂದಾಗಿ ಏಳು ವಾಹನಗಳು ಜಖಂಗೊಂಡಿವೆ.
ಸ್ಕೂಟರ್‌ಗೆ ಟ್ಯಾಂಕರ್ ಡಿಕ್ಕಿ : ಸವಾರ ಸಾವು
ಸ್ಕೂಟರ್‌ಗೆ ಟ್ಯಾಂಕರ್ ವಾಹನ ಡಿಕ್ಕಿಹೊಡೆದ ಪರಿಣಾಮ ಸವಾರ ಮೃತಪಟ್ಟಿರುವ ಘಟನೆ ಮಹದೇವಪುರ ಸಂಚಾರಿ ಪೊಲೀಸ್‌ಠಾಣೆ ವ್ಯಾಪ್ತಿಯಲ್ಲಿಇಂದು ಬೆಳಗ್ಗೆ ನಡೆದಿದೆ. ಕೊಡಿಗೇಹಳ್ಳಿಯ ನಿವಾಸಿ ಮೆಹಬೂಬ್(45) ಮೃತಪಟ್ಟ ಸ್ಕೂಟರ್ ಸವಾರ.ಇಂದು ಬೆಳಗ್ಗೆ 8.30ರ ಸುಮಾರಿನಲ್ಲಿ ಬೆಳ್ತೂರು-ಕೊಡಿಗೇಹಳ್ಳಿ ರಸ್ತೆಯಲ್ಲಿ ಮೆಹಬೂಬ್ ಅವರು ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಅತೀವೇಗವಾಗಿ ಬಂದ ಟ್ಯಾಂಕರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಗಂಭೀರಗಾಯಗೊಂಡು ಅವರು ಮೃತಪಟ್ಟಿದ್ದಾರೆ. ಸುದ್ದಿ ತಿಳಿದು ಮಹದೇವಪುರ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.