Sunday, September 8, 2024
Homeರಾಜ್ಯಸದ್ಯದಲ್ಲೇ ಆಟೋ ಬಾಡಿಗೆ, ಹೋಟೆಲ್‌ ತಿಂಡಿ ದರ ಏರಿಕೆ "ಗ್ಯಾರಂಟಿ"

ಸದ್ಯದಲ್ಲೇ ಆಟೋ ಬಾಡಿಗೆ, ಹೋಟೆಲ್‌ ತಿಂಡಿ ದರ ಏರಿಕೆ “ಗ್ಯಾರಂಟಿ”

ಬೆಂಗಳೂರು,ಜೂ.26- ಡೀಸೆಲ್‌, ಪೆಟ್ರೋಲ್‌ ಹಾಗೂ ಹಾಲಿನ ದರ ಏರಿಕೆಯಾಗಿರು ಬೆನ್ನಲ್ಲೇ, ಆಟೋ ಪ್ರಯಾಣ ದರ, ಹೋಟೆಲ್‌‍ಗಳಲ್ಲಿ ತಿಂಡಿ-ತಿನಿಸುಗಳ ಬೆಲೆ ಕೂಡ ಹೆಚ್ಚಾಗಲಿದ್ದು, ಹೋಟೆಲ್‌ಗಳನ್ನೇ ನೆಚ್ಚಿಕೊಂಡಿರುವ ಗ್ರಾಹಕರ ಜೇಬಿಗೆ ಮತ್ತೆ ಕತ್ತರಿ ಬೀಳಲಿದೆ.ಬೆಲೆ ಏರಿಕೆ ಒತ್ತಡ ಎದುರಿಸುತ್ತಿರುವ ಹೋಟೆಲ್‌ ಉದ್ಯಮ ತನ್ನ ಮೇಲಿನ ಆರ್ಥಿಕ ಹೊರೆಯನ್ನು ಗ್ರಾಹಕರ ಮೇಲೆ ವರ್ಗಾಯಿಸಲು ಮುಂದಾಗಿದೆ. ಇದು ಜನಸಾಮಾನ್ಯರಿಗೆ ಮತ್ತಷ್ಟು ಹೊರೆಯಾಗಲಿದೆ.

ವಿದ್ಯುತ್‌ ಶುಲ್ಕ, ತರಕಾರಿ, ಬೇಳೆಕಾಳುಗಳ ದರ ಏರಿಕೆ ಬಿಸಿಯ ಮಧ್ಯೆ ಇದೀಗ ಹಾಲಿನ ಬೆಲೆ ಹೆಚ್ಚಾಗಿರುವುದರಿಂದ ಹೋಟೆಲ್‌ ಉದ್ಯಮಕ್ಕೆ ಹೊಡೆತ ಬಿದಿದ್ದು, ಆರ್ಥಿಕ ನಷ್ಟದಿಂದ ಹೊರಬರಲು ಶೇ.10ರಷ್ಟು ದರ ಏರಿಸಲು ಹೋಟೆಲ್‌ ಮಾಲೀಕರು ತೀರ್ಮಾನಿಸಿದ್ದಾರೆ.ಇಡ್ಲಿ-ವಡೆ, ದೋಸೆ, ರೈಸ್‌‍ಬಾತ್‌‍, ಚೌಚೌ ಬಾತ್‌ ತಿಂಡಿಗೆ 5 ರೂ., ಕಾಫಿ, ಟೀ ದರವನ್ನು 1ರಿಂದ 2 ರೂ. ಏರಿಸಲು ಚಿಂತಿಸಲಾಗಿದೆ. ಹಾಲು, ತುಪ್ಪ, ಬೆಣ್ಣೆ ಹಾಗೂ ಇತರೆ ಆಹಾರ ಪದಾರ್ಥಗಳ ಬೆಲೆ ಹೆಚ್ಚಳದ ಹಿನ್ನೆಲೆಯಲ್ಲಿ ತಿಂಡಿಗಳ ಬೆಲೆ ಹೆಚ್ಚಳ ಅನಿವಾರ್ಯ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

ಕೆಲವೊಂದು ಹೋಟೆಲ್‌‍ಗಳು ಈಗಾಗಲೇ ದರ ಹೆಚ್ಚಳ ಮಾಡಿವೆ. ಇನ್ನು ಕೆಲ ಹೋಟೆಲ್‌‍ಗಳ ಮಾಲೀಕರ ದರ ಏರಿಕೆ ಬದಲಿಗೆ ಪರ್ಯಾಯ ಮಾರ್ಗ ಕಂಡುಕೊಂಡಿದ್ದಾರೆ.ಕಳೆದ ವರ್ಷ ಸಿಲಿಂಡರ್‌ಗೆ ನೀಡುತ್ತಿದ್ದ ರಿಯಾಯಿತಿ ರದ್ದುಗೊಳಿಸಲಾಗಿದೆ. ಕಳೆದ ಕೆಲವು ತಿಂಗಳಿನಿಂದ ತೊಗರಿ, ಉದ್ದು, ಹೆಸರು ಬೇಳೆ ಸೇರಿದಂತೆ ಬೇಳೆ ಕಾಳುಗಳ ದರ ಏರಿಕೆ ಕಂಡಿದ್ದು ನೇರವಾಗಿ ಹೋಟೆಲ್‌‍ಗಳ ಆರ್ಥಿಕ ಹೊರೆಗೆ ಕಾರಣವಾಗಿತ್ತು.

ಕಳೆದ ಹದಿನೈದು ಇಪ್ಪತ್ತು ದಿನಗಳಿಂದ ಟೊಮೆಟೊ, ಕ್ಯಾರೆಟ್‌‍, ಬೀನ್‌್ಸ ಬೆಲೆ ಶತಕ ದಾಟಿರುವುದು ಮತ್ತಷ್ಟು ಹೊಡೆತ ನೀಡಿದೆ. ಬೆಲೆ ಹೆಚ್ಚಿಸುತ್ತಿರುವುದು ಉದ್ಯಮಕ್ಕೆ ಪೆಟ್ಟು ಕೊಟ್ಟಿದೆ. ಹೀಗಾಗಿ ಬೆಲೆ ಏರಿಕೆ ಅನಿವಾರ್ಯ ಎಂದು ಕೆಲವು ಹೋಟೆಲ್‌ ಮಾಲೀಕರು ಹೇಳಿದ್ದಾರೆ.

ಕಳೆದೊಂದು ತಿಂಗಳಿಂದ ಲಾಭವನ್ನೇ ಕಂಡಿಲ್ಲ. ಕೆಲ ತಿನಿಸುಗಳನ್ನು ಮಾಡಿ ನಷ್ಟ ಅನುಭವಿಸಿದ್ದಾರೆ. ಸಾಮಾನ್ಯ ಜನರು ಬರುವುದೇ ದರ್ಶಿನಿಗಳಿಗೆ. ಆದ್ದರಿಂದ ನಮಗೆ ಏಕಾಏಕಿ ಬೆಲೆ ಹೆಚ್ಚಿಸಲೂ ಆಗುವುದಿಲ್ಲ. ಆದರೆ ಈಗ ಅನಿವಾರ್ಯತೆಗೆ ಸಿಲುಕಿದ್ದೇವೆ ಎಂದು ಮಾಲೀಕರು ಅಳಲು ತೋಡಿಕೊಂಡಿದ್ದಾರೆ.

ಹೋಟೆಲ್‌ ಉತ್ಪನ್ನಗಳ ಜೊತೆಗೆ ಬೇಕರಿ ಖಾದ್ಯಗಳ ಬೆಲೆಯೂ ಹೆಚ್ಚಾಗುತ್ತಿದೆ. ಕೇಕ್‌‍, ಪೇಡಾ, ಖೋವಾ, ಬ್ರೆಡ್‌‍, ಬನ್‌ ಸೇರಿದಂತೆ ಸಿಹಿ ತಿನಿಸುಗಳ ಬೆಲೆಯೂ ಹೆಚ್ಚಾಗಲಿದೆ.ಕಳೆದ ಆರು ತಿಂಗಳ ಹಿಂದೆ ಏರಿಕೆಯಾಗಿದ್ದ ಮೈದಾ ಹಿಟ್ಟು ಬೆಲೆ ಇಳಿದಿಲ್ಲ. ನಾವು ತಯಾರಿಸುವ ಎಲ್ಲ ಖಾದ್ಯಗಳಿಗೂ ಹಾಲು ಅತ್ಯವಶ್ಯ. ಹೀಗಾಗಿ ಬೇಕರಿ ತಿನಿಸುಗಳ ಬೆಲೆ ಏರಿಸಬೇಕಾಗುತ್ತದೆ ಎಂದು ಬೇಕರಿ ವರ್ತಕರು ತಿಳಿಸಿದ್ದಾರೆ. ಇದರಿಂದ ಬೇಕರಿ ತಿನಿಸುಗಳ ಬೆಲೆ ಕೂಡ ಶೀಘ್ರದಲ್ಲೇ ಏರಲಿದೆ.

ಕಳೆದ ಆರು ತಿಂಗಳ ಹಿಂದೆ ಏರಿಕೆಯಾಗಿದ್ದ ಮೈದಾ ಹಿಟ್ಟು ಬೆಲೆ ಇಳಿದಿಲ್ಲ. ನಾವು ತಯಾರಿಸುವ ಎಲ್ಲ ಖಾದ್ಯಗಳಿಗೂ ಹಾಲು ಅತ್ಯವಶ್ಯ. ಹೀಗಾಗಿ ಬೇಕರಿ ತಿನಿಸುಗಳ ಬೆಲೆ ಏರಿಸಬೇಕಾಗುತ್ತದೆ ಎಂದು ಬೇಕರಿ ವರ್ತಕರು ತಿಳಿಸಿದ್ದಾರೆ. ಇದರಿಂದ ಬೇಕರಿ ತಿನಿಸುಗಳ ಬೆಲೆ ಕೂಡ ಶೀಘ್ರದಲ್ಲೇ ಏರಲಿದೆ.

ಪ್ರಮಾಣಕ್ಕೆ ಕತ್ತರಿ: ಕೆಲವು ಹೋಟೆಲ್‌‍ಗಳು ದರ ಹೆಚ್ಚಿಸಿದರೆ ಗ್ರಾಹಕರ ಸಂಖ್ಯೆ ಕಡಿಮೆಯಾಗುವ ಆತಂಕದ ಹಿನ್ನೆಲೆಯಲ್ಲಿ ಊಟ, ತಿಂಡಿಯ ಪ್ರಮಾಣವನ್ನೇ ಕಡಿಮೆ ಮಾಡಿದ್ದಾರೆ. ಅಂದರೆ ದೋಸೆ, ಇಡ್ಲಿ, ವಡೆಯ ಗಾತ್ರವನ್ನು ಕುಗ್ಗಿಸಲಾಗಿದೆ. ಹಾಗೆಯೇ, ರೈಸ್‌‍ಬಾತ್‍, ಚೌಚೌಬಾತ್‌ ನೀಡುವ ಬೌಲ್‌ ಅನ್ನು ತುಸು ಚಿಕ್ಕ ಗಾತ್ರಕ್ಕೆ ಬದಲಿಸಿದ್ದಾರೆ.

ಮನವಿ: ಇದರ ಬೆನ್ನಲ್ಲೇ ಡೀಸೆಲ್‌ ಮತ್ತು ಪೆಟ್ರೋಲ್‌ ದರ ಹೆಚ್ಚಳವಾಗಿರುವುದರಿಂದ ಆಟೋ ಚಾಲಕರ ಸಂಘ ದರವನ್ನು ಪರಿಷ್ಕರಣೆ ಮಾಡುವಂತೆ ಸಾರಿಗೆ ಇಲಾಖೆಗೆ ಮನವಿ ಮಾಡಿದೆ.

ಕಳೆದ ಹಲವು ತಿಂಗಳಿನಿಂದ ದರ ಪರಿಷ್ಕರಣೆಯಾಗಿಲ್ಲ. ಇಂಧನ ಬೆಲೆ ಏರಿಯಾಗಿರುವುದರಿಂದ ನಿರ್ವಹಣೆ ಮಾಡುವುದು ಕಷ್ಟಕರವಾಗುತ್ತಿದ್ದು, ಆಟೋ ಪ್ರಯಾಣ ದರವನ್ನು ಪರಿಷ್ಕರಣೆ ಮಾಡಿಕೊಡುವಂತೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರಿಗೆ ಆಟೋ ಚಾಲಕರ ಸಂಘ ಪತ್ರ ಬರೆದು ಮನವಿ ಮಾಡಿಕೊಂಡಿದೆ.

RELATED ARTICLES

Latest News