ಬೆಂಗಳೂರು, ಅ.24– ಬಸ್ ಪ್ರಯಾಣದ ವೇಳೆ ಸುರಕ್ಷತೆಯ ಖಾತ್ರಿ ಬಗ್ಗೆ ಎಲ್ಲಾ ರಾಜ್ಯ ಸರ್ಕಾರಗಳು ಜಾಗೃತ ಕ್ರಮಗಳನ್ನು ಕೈಗೊಳ್ಳಬೇಕೆಂದು ಡಿಸಿಎಂ ಡಿ.ಕೆ.ಶಿವ ಕುಮಾರ್ ಮನವಿ ಮಾಡಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವಾರ ಬೆಂಗಳೂರಿನಿಂದ ಹೈದರಾಬಾದ್‌ಗೆ ತೆರಳುತ್ತಿದ್ದ ಖಾಸಗಿ ಬಸ್‌ವೊಂದರಲ್ಲಿ ಬೆಂಕಿ ಅನಾಹುತವಾಗುವ ಸಾಧ್ಯತೆಯಿತ್ತು. ರಾಯಚೂರು ಜಿಲ್ಲೆಯ ಕಾಂಗ್ರೆಸ್ ನಾಯಕಿ ಆ ಬಸ್‌ನಲ್ಲಿದ್ದರು. ತಕ್ಷಣವೇ ಆಕೆ ಜೋರಾಗಿ ಕಿರುಚಿ, ಎಚ್ಚರಿಸಿದ್ದರಿಂದಾಗಿ ದುರಂತ ತಪ್ಪಿತು ಎಂದರು.
ಆ ಬಸ್‌ನಲ್ಲಿ 20ಕ್ಕೂ ಹೆಚ್ಚು ಮಂದಿ ವೈದ್ಯಕೀಯ ವಿದ್ಯಾರ್ಥಿಗಳೂ ಸೇರಿದಂತೆ ಅನೇಕ ಪ್ರಯಾಣಿಕರಿದ್ದರು. ತಾವು ರಾಯಚೂರಿಗೆ ಭೇಟಿ ನೀಡಿದಾಗ ಈ ವಿಚಾರ ಗಮನಕ್ಕೆ ಬಂತು. ಆದರೆ ಘಟನೆ ಬಗ್ಗೆ ಯಾವುದೇ ತನಿಖೆಗಳಾಗಿಲ್ಲ ಎಂದು ವಿಷಾದಿಸಿದರು.
ಕರ್ನೂಲ್‌ನಲ್ಲಿ ನಡೆದಿರುವ ಬಸ್ ದುರಂತ ವಿಷಾದನೀಯ. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ಕರ್ನಾಟಕ, ಆಂಧ್ರಪ್ರದೇಶವಷ್ಟೇ ಅಲ್ಲ ದೇಶದ ಎಲ್ಲಾ ರಾಜ್ಯ ಸರ್ಕಾರಗಳು ಪ್ರಯಾಣಿಕರ ಸುರಕ್ಷತೆಗಾಗಿ ಕಾಳಜಿವಹಿಸಬೇಕು ಎಂದರು.ಕಳೆದವಾರ ನಡೆದ ಘಟನೆಯ ಬಗ್ಗೆ ಸೂಕ್ತ ವಿಚಾರಣೆ ನಡೆದು ಸುರಕ್ಷತೆಯ ಮಾನದಂಡಗಳನ್ನು ಅನುಸರಿಸಿದ್ದರೆ, ಕರ್ನೂಲ್‌ನಲ್ಲಿ ಇಂತಹ ದುರಂತಗಳು ನಡೆಯುವುದಿಲ್ಲ ಎಂದರು.
ರಾಜ್ಯದ ಸಾರಿಗೆ ಹಾಗೂ ಗೃಹ ಸಚಿವರು ಬಸ್‌ಗಳ ಸುರಕ್ಷತೆಯ ಬಗ್ಗೆ ಹೆಚ್ಚು ಆಧ್ಯತೆ ನೀಡಬೇಕು. ನಿರಂತರವಾದ ತಪಾಸಣೆಗಳ ಮೂಲಕ ನಿರ್ದೇಶಿತ ಮಾನದಂಡನೆಗಳನ್ನು ಪಾಲನೆಯಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದರು.
ಕರ್ನೂಲ್‌ನ ದುರ್ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಲಿ ಎಂದು ಸಲಹೆ ನೀಡಿದರು. ರಾಮನಗರದ ಶಾಸಕ ಇಕ್ಬಾಲ್ ಹುಸೇನ್ ಹಾಗೂ ಇತರರು ಅಧಿಕಾರ ಹಂಚಿಕೆಯ ಬಗ್ಗೆ ಹೇಳಿಕೆ ನೀಡುವುದು ಸರಿಯಲ್ಲ. ಪಕ್ಷದಲ್ಲಿ ಶಿಸ್ತು ಪಾಲನೆ ತಮ ಮೊದಲ ಆಧ್ಯತೆ ಎಂದರು.
