ಬೆಂಗಳೂರು,ಜ.11- ಮುಂದಿನ ದಿನಗಳಲ್ಲಿ ಅಯೋಧ್ಯೆಗೆ ತಾವು ವೈಯಕ್ತಿಕವಾಗಿ ಭೇಟಿ ನೀಡುತ್ತೇವೆ. ಆದರೆ ಸದ್ಯಕ್ಕೆ ರಾಜಕೀಯದ ವಿಚಾರವಾಗಿ ಜ.22 ರಂದು ಅಯೋಧ್ಯೆಗೆ ಭೇಟಿ ಹೋಗುವುದಿಲ್ಲ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ. ಅಯೋಧ್ಯೆ ರಾಮನ ಜನ್ಮಭೂಮಿ ಎಂಬ ನಂಬಿಕೆ ಹಿನ್ನೆಲೆಯಲ್ಲಿ ಪಾವಿತ್ರ್ಯತೆ ಹೆಚ್ಚಿದೆ. ಈ ಮೊದಲು ತಾವು ಅಯೋಧ್ಯೆಗೆ ಭೇಟಿ ನೀಡಿ ಶೆಡ್‍ನಲ್ಲಿದ್ದ ರಾಮಲಲ್ಲಾನ ಮೂರ್ತಿಯ ದರ್ಶನ ಮಾಡಿ ಬಂದಿದ್ದೆ. ಮುಂದಿನ ದಿನಗಳಲ್ಲಿ ವೈಯಕ್ತಿಕವಾಗಿ ಅಲ್ಲಿನ ದೇವಸ್ಥಾನಕ್ಕೆ ಭೇಟಿ ನೀಡುತ್ತೇನೆ ಎಂದು ಹೇಳಿದರು.
ರಾಮ ಮಂದಿರದ ವಿಚಾರಕ್ಕೆ ಹೇಳುವುದಾದರೆ ಪ್ರತಿಯೊಂದೂ ಊರಿನಲ್ಲೂ ದೇವಸ್ಥಾನಗಳಿವೆ. ಅದರಲ್ಲೂ ನೂರಾರು ವರ್ಷಗಳ ಇತಿಹಾಸವಿರುವ ಮಂದಿರಗಳನ್ನೂ ನೋಡಿದ್ದೇವೆ. ಜ.22 ರಂದು ರಾಜಕೀಯಗೊಂಡಿರುವ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ. ಹೈಕಮಾಂಡ್ ತೆಗೆದುಕೊಂಡಿರುವ ನಿರ್ಧಾರಕ್ಕೆ ತಾವು ಬದ್ಧ ಎಂದರು.
ಲೋಕಸಭೆ ಚುನಾವಣೆ ತಯಾರಿ ಹಿನ್ನೆಲೆಯಲ್ಲಿ ಹೈಕಮಾಂಡ್ ಕರೆದಿರುವ ಸಭೆಯಲ್ಲಿ ಭಾಗವಹಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಕುರಿತು ಚರ್ಚಿಸುವುದಿಲ್ಲ ಎಂದರು. ಈಗಾಗಲೇ ನಾವು ನಮ್ಮ ಅಭಿಪ್ರಾಯ ವನ್ನು ಹೇಳಿದ್ದೇವೆ. ಅದಕ್ಕೆ ಬದ್ಧರಾಗಿದ್ದೇವೆ. ಹೈಕಮಾಂಡ್ ಸೂಕ್ತ ನಿಲುವು ತೆಗೆದುಕೊಳ್ಳಬೇಕಿದೆ ಎಂದು ಹೇಳಿದರು.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎನ್.ರಾಜಣ್ಣ, ನಿನ್ನೆ ತಾವು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‍ರವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಚರ್ಚೆ ನಡೆಸಿದ್ದೇನೆ. ರಾಜಕೀಯವಾಗಿ ನಮ್ಮಿಬ್ಬರ ನಡುವೆ ವಿಚಾರಬೇಧಗಳಿರಬಹುದು. ಆದರೆ ಉಪಮುಖ್ಯಮಂತ್ರಿಯಾಗುವುದಕ್ಕಿಂತಲೂ ಮೊದಲೇ ಡಿ.ಕೆ.ಶಿವಕುಮಾರ್ ಮತ್ತು ತಾವು ಸ್ನೇಹಿತರು. ಯುವ ಕಾಂಗ್ರೆಸ್‍ನಲ್ಲಿ ಒಟ್ಟಿಗೇ ಕೆಲಸ ಮಾಡಿದ್ದೇವೆ. ರಾಜಕಾರಣಕ್ಕಾಗಿ ವ್ಯಕ್ತಿಗತ ವಿಶ್ವಾಸವನ್ನು ಕಳೆದುಕೊಳ್ಳಲಾಗುವುದಿಲ್ಲ ಎಂದರು.
ಲೋಕಸಭೆ ಚುನಾವಣೆಯಲ್ಲಿ ಎಚ್‍ಡಿಕೆ ಸ್ಪರ್ಧೆಗೆ ಹೆಚ್ಚಿದ ಒತ್ತಡ
ನಿನ್ನೆ ಅವರೊಂದಿಗಿನ ಭೇಟಿಯ ವೇಳೆ ಉಪಮುಖ್ಯಮಂತ್ರಿಯವರ ಜೊತೆ ತುಮಕೂರು, ಹಾಸನ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆಯೂ ಚರ್ಚೆ ನಡೆಸಿದ್ದೇವೆ. ಕೆಲ ವಿಚಾರಗಳನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು. ಕಾಂಗ್ರೆಸ್ ರಾಮಮಂದಿರ ಕಾರ್ಯಕ್ರಮದಿಂದ ದೂರ ಉಳಿದು ಅಲ್ಪಸಂಖ್ಯಾತರ ತುಷ್ಠೀಕರಣ ಮಾಡುತ್ತಿದೆ ಎಂದು ಬಿಜೆಪಿಯವರ ಟೀಕೆ ಹಾಸ್ಯಾಸ್ಪದ. ಬಿಜೆಪಿಯವರು ಅಲ್ಪಸಂಖ್ಯಾತ ಸಮುದಾಯದ ಹೆಣ್ಣುಮಕ್ಕಳನ್ನು ಸೇರಿಸಿ ¿ಶುಕ್ರಿಯಾ ಮೋದಿ ಬಾಯ್‍ಜಾನ್¿ ಸಮಾವೇಶ ಮಾಡುತ್ತಿದ್ದಾರೆ. ಇದು ರಾಜಕೀಯ ತುಷ್ಠೀಕರಣ ಅಲ್ಲವೇ ಎಂದು ಪ್ರಶ್ನಿಸಿದರು.
ಅಯೋಧ್ಯೆ ಕಾರ್ಯಕ್ರಮಕ್ಕೆ ಶಂಕರಾಚಾರ್ಯ ಪೀಠದ ಗುರುಗಳೇ ಭಾಗವಹಿಸುತ್ತಿಲ್ಲ. ಅವರೇನೂ ಕಾಂಗ್ರೆಸ್‍ನ ಸ್ವಾಮೀಜಿಗಳಲ್ಲ. ಸ್ವಾಮೀಜಿಗಳ ಅಭಿಪ್ರಾಯವನ್ನು ಗೌರವಿಸದೇ ರಾಜಕೀಯಕ್ಕೆ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಟೀಕಿಸಿದರು.