Thursday, July 4, 2024
Homeರಾಷ್ಟ್ರೀಯಅಯೋಧ್ಯೆ ರಾಮಮಂದಿರದ ಮಾಳಿಗೆಯಲ್ಲಿ ನೀರು ಸೋರಿಕೆ : ನಿರ್ಮಾಣದ ವೇಳೆ ನಿರ್ಲಕ್ಷ್ಯದ ಆರೋಪ

ಅಯೋಧ್ಯೆ ರಾಮಮಂದಿರದ ಮಾಳಿಗೆಯಲ್ಲಿ ನೀರು ಸೋರಿಕೆ : ನಿರ್ಮಾಣದ ವೇಳೆ ನಿರ್ಲಕ್ಷ್ಯದ ಆರೋಪ

ಅಯೋಧ್ಯೆ,ಜೂ.25- ಜನವರಿ 22 ರಂದು ಪ್ರಾಣ ಪ್ರತಿಷ್ಠೆಯಾಗಿ ಲೋಕಾರ್ಪಣೆಯಾದ ಅಯೋಧ್ಯೆ ರಾಮಮಂದಿರದ ಮಾಳಿಗೆಯಲ್ಲಿ ನೀರು ಸೋರಿಕೆಯಾಗುತ್ತಿದೆ ಎಂದು ಮಂದಿರ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್‌‍ ಆತಂಕ ವ್ಯಕ್ತಪಡಿಸಿದ್ದಾರೆ.ರಾಮ ಮಂದಿರವು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾದ ನಂತರದಲ್ಲಿ ಸುರಿದ ಮೊದಲ ಭಾರಿ ಮಳೆಯ ಸಂದರ್ಭದಲ್ಲಿ ಗರ್ಭಗುಡಿಯಲ್ಲಿ ನೀರು ಸೋರುತ್ತಿದೆ. ಮಂದಿರದ ನಿರ್ಮಾಣದ ವೇಳೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಶನಿವಾರ ಮಧ್ಯರಾತ್ರಿ ಮಳೆ ಸುರಿಯಿತು, ಮಂದಿರದ ಆವರಣದಲ್ಲಿ ಬಿದ್ದ ಮಳೆನೀರು ಹರಿದುಹೋಗಲು ಸೂಕ್ತವಾದ ವ್ಯವಸ್ಥೆ ಇರಲಿಲ್ಲ, ಮಂದಿರದ ಆಡಳಿತದ ಹೊಣೆ ಹೊತ್ತಿರುವವರು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಮೇಲ್ಛಾವಣಿಯಿಂದ ನೀರು ಸೋರುತ್ತಿರುವ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಾಗ, ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರು ಮಂದಿರಕ್ಕೆ ಬಂದು ಮೇಲ್ಛಾವಣಿಯ ರಿಪೇರಿಗೆ ಸೂಚನೆ ನೀಡಿದರು ಎಂದು ಮೂಲಗಳು ಹೇಳಿವೆ.

ಮಂದಿರ ನಿರ್ಮಾಣದಲ್ಲಿ ಆಗಿರುವ ಪ್ರಗತಿಯ ಬಗ್ಗೆ ಸುದ್ದಿಗಾರರೊದಿಗೆ ಮಾತನಾಡಿದ ನೃಪೇಂದ್ರ ಮಿಶ್ರಾ, ಮೊದಲ ಮಹಡಿಯ ಕೆಲಸ ನಡೆಯುತ್ತಿದ್ದು, ಅದು ಜುಲೈ ಅಂತ್ಯದೊಳಗೆ ಮುಕ್ತಾಯ ಆಗಲಿದೆ ಎಂದರು. ಡಿಸೆಂಬರ್‌ ವೇಳೆಗೆ ಮಂದಿರದ ನಿರ್ಮಾಣ ಕಾರ್ಯವು ಪೂರ್ಣಗೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮಂದಿರದ ಉದ್ಘಾಟನೆ ಆದ ನಂತರ ಶನಿವಾರ ರಾತ್ರಿ ಮೊದಲ ಬಾರಿಗೆ ಭಾರಿ ಮಳೆ ಸುರಿದಿದೆ. ಆಗ ಗರ್ಭಗುಡಿಯ ಮೇಲ್ಛಾವಣಿಯಿಂದ ದೊಡ್ಡ ಮಟ್ಟದಲ್ಲಿ ನೀರು ಸೋರುತ್ತಿತ್ತು. ಬಾಲರಾಮನ ಮುಂದೆ ಅರ್ಚಕರು ಕುಳಿತುಕೊಳ್ಳುವ ಸ್ಥಳದಲ್ಲಿ ಹಾಗೂ ಅತಿಗಣ್ಯ ವ್ಯಕ್ತಿಗಳು ದರ್ಶನಕ್ಕೆ ಬರುವ ಸ್ಥಳದಲ್ಲಿ ನೀರು ಸೋರುತ್ತಿತ್ತು ಎಂದು ಸತ್ಯೇಂದ್ರ ದಾಸ್‌‍ ತಿಳಿಸಿದ್ದಾರೆ.

ದೇಶದ ಎಲ್ಲೆಡೆಗಳಿಂದ ಬಂದಿರುವ ಎಂಜಿನಿಯರ್‌ಗಳು ರಾಮ ಮಂದಿರವನ್ನು ನಿರ್ಮಿಸುತ್ತಿದ್ದಾರೆ. ಜನವರಿ 22ರಂದು ಮಂದಿರ ಉದ್ಘಾಟನೆಯಾಗಿದೆ. ಆದರೆ ಮಳೆ ಸುರಿದಾಗ ಮೇಲ್ಛಾವಣೆಯಿಂದ ನೀರು ಸೋರುತ್ತದೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ವಿಶ್ವವಿಖ್ಯಾತ ಮಂದಿರ ಸೋರುತ್ತಿರುವುದು ಆಶ್ಚರ್ಯಕರ. ಇದು ಆಗಿದ್ದು ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.

ಸುರಿದ ಮಳೆಯ ಕಾರಣದಿಂದಾಗಿ ರಾಮಪಥ ರಸ್ತೆಯಲ್ಲಿ ಹಾಗೂ ಅದಕ್ಕೆ ಹೊಂದಿಕೊಂಡಿರುವ ಬೀದಿಗಳಲ್ಲಿ ನೀರು ಭಾರಿ ಪ್ರಮಾಣದಲ್ಲಿ ನಿಂತಿತ್ತು. ಈ ಪ್ರದೇಶದ ಮನೆಗಳಿಗೆ ಕೊಳಚೆ ನೀರು ನುಗ್ಗಿದೆ. ರಾಮಪಥ ರಸ್ತೆ ಹಾಗೂ ಹೊಸದಾಗಿ ನಿರ್ಮಿಸಲಾದ ಕೆಲವು ರಸ್ತೆಗಳು ಅಲ್ಲಲ್ಲಿ ಕುಸಿದಿವೆ. ಮಂದಿರ ನಿರ್ಮಾಣದಲ್ಲಿ ಹಾಗೂ ಅಯೋಧ್ಯೆಯಲ್ಲಿ ನಾಗರಿಕ ಸೌಲಭ್ಯಗಳನ್ನು ಒದಗಿಸುವಲ್ಲಿ ಬಿಜೆಪಿಯು ಭ್ರಷ್ಟಾಚಾರ ಎಸಗಿದೆ ಎಂದು ಕಾಂಗ್ರೆಸ್‌‍ ಆರೋಪಿಸಿದೆ.

ಹುತಾತರ ಶವಪೆಟ್ಟಿಗೆ ಇರಲಿ, ದೇವಸ್ಥಾನವೇ ಇರಲಿ ಬಿಜೆಪಿಗೆ ಇವೆಲ್ಲವೂ ಭ್ರಷ್ಟಾಚಾರ ಎಸಗಲು ಒಂದು ಅವಕಾಶವಾಗಿ ಸಿಗುತ್ತವೆ. ನಂಬಿಕೆ ಮತ್ತು ಪಾವಿತ್ರ್ಯದ ಸಂಕೇತಗಳು ಕೂಡ ಅವರಿಗೆ ಲೂಟಿ ಮಾಡಲು ಒಂದು ಅವಕಾಶ ಎಂದು ಉತ್ತರ ಪ್ರದೇಶ ಕಾಂಗ್ರೆಸ್‌‍ ಮುಖ್ಯಸ್ಥ ಅಜಯ್‌ ರಾಯ್‌ ದೂರಿದ್ದಾರೆ.

ಅರ್ಚಕರಿಗೆ ಹಣ ಬೇಡ :
ಅಯೋಧ್ಯೆಯ ರಾಮಮಂದಿರದಲ್ಲಿ ಇಷ್ಟು ದಿನ ತಾರತಮ್ಯದ ಆರೋಪ ಕೇಳಿ ಬರುತ್ತಿತ್ತು. ಇದೀಗ ಭಕ್ತರ ಅಸಮಾಧಾನ ತಣಿಸಲು ಅಯೋಧ್ಯೆ ಶ್ರೀರಾಮಜನಭೂಮಿ ಟ್ರಸ್ಟ್‌ ಮೂರು ಮಹತ್ವದ ತೀರ್ಮಾನಗಳನ್ನು ತೆಗೆದುಕೊಂಡಿದೆ. ಅದರಂತೆ ರಾಮಮಂದಿರಕ್ಕೆ ಬರುವ ಪ್ರಮುಖರಿಗೆ, ಸೆಲೆಬ್ರೆಟಿಗಳಿಗೆ ತಿಲಕ ಇಡುವ ಕೆಲಸವನ್ನು ಅರ್ಚಕರು ಮಾಡುವಂತಿಲ್ಲ.

ಬಾಲರಾಮನ ಚರಣಾಮೃತವನ್ನು ಯಾರಿಗೂ ನೀಡಬಾರದು. ಹಾಗೆಯೇ, ಮಂದಿರದ ಅರ್ಚಕರಿಗೆ ಯಾರೂ ಹಣ ನೀಡುವ ಹಾಗಿಲ್ಲ ಎಂಬ ಮಹತ್ವದ ನಿರ್ಧಾರವನ್ನು ಟ್ರಸ್ಟ್‌ ಮಾಡಿದೆ. ದೇಗುಲಕ್ಕೆ ಬರುವ ಭಕ್ತರು ದೇಣಿಗೆ ರೂಪದಲ್ಲಿ ದೇವಾಲಯದ ಆಡಳಿತ ಮಂಡಳಿಗೆ ಹಣ ನೀಡಬಹುದು. ಈ ಮೂಲಕ ರಾಮಮಂದಿರಕ್ಕೆ ಬರುವ ಭಕ್ತರೆಲ್ಲಾ ಸಮಾನರು ಎಂಬ ಸಂದೇಶವನ್ನು ಟ್ರಸ್ಟ್‌ ಸಾರಿದೆ.

RELATED ARTICLES

Latest News