ಬೆಂಗಳೂರು, ಸೆ30- ಆಡಳಿತದ ಶಕ್ತಿ ಕೇಂದ್ರಗಳಾದ ವಿಧಾನಸೌಧ, ವಿಕಾಸಸೌಧ, ಬಹುಮಹಡಿಗಳ ಕಟ್ಟಡ ಸೇರಿದಂತೆ ರಾಜ್ಯಾದ್ಯಂತ ಇಂದು ಬಹುತೇಕ ಸರ್ಕಾರಿ ಕಚೇರಿ ಗಳಲ್ಲಿ ಆಯುಧ ಪೂಜೆಯನ್ನು ಸಂಭ್ರಮ ಸಡಗರದಿಂದ ನೆರವೇರಿಸ ಲಾಯಿತು.
ಸರ್ಕಾರಿ ಕಚೇರಿಗಳಲ್ಲದೇ ಖಾಸಗಿ ಸಂಸ್ಥೆಗಳ ಕಚೇರಿಗಳು, ಕೈಗಾರಿಕೆಗಳು, ಅಂಗಡಿ-ಮುಂಗಟ್ಟುಗಳಲ್ಲಿ ಇಂದು ಆಯುಧ ಪೂಜೆಯನ್ನು ಮಾಡಲಾಯಿತು.ವಿಧಾನಸೌಧ, ವಿಕಾಸಸೌಧದ ವಿವಿಧ ಕಚೇರಿಗಳನ್ನು ತಳಿರು-ತೋರಣಗಳಿಂದ ಸಿಂಗರಿಸಿ, ಕಚೇರಿ ಮುಂದೆ ರಂಗೋಲಿ ಬಿಡಿಸಿ ವಿಶೇಷವಾಗಿ ಅಲಂಕರಿಸಲಾಗಿತ್ತು.
ಅದೇ ರೀತಿ ರಾಜ್ಯದ ವಿವಿಧ ಸರ್ಕಾರಿ ಕಚೇರಿಗಳು, ಖಾಸಗಿ ಸಂಸ್ಥೆಗಳಲ್ಲೂ ಕೂಡ ಅಲಂಕರಿಸಿ ಆಯುಧ ಪೂಜೆಯನ್ನು ನೆರವೇರಿಸಲಾಯಿತು. ನಾಳೆ ಮತ್ತು ಗುರುವಾರ ರಜೆಯಿರುವ ಹಿನ್ನೆಲೆಯಲ್ಲಿ ಬಹುತೇಕ ಎಲ್ಲಾ ವಾಣಿಜ್ಯ ವ್ಯವಹಾರ ನಡೆಸುವ ಕಚೇರಿಗಳಲ್ಲೂ ಪೂಜೆ ಮಾಡಲಾಯಿತು.
ವಿಧಾನಸೌಧದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ವಿರೋಧಪಕ್ಷದ ನಾಯಕ ಆರ್.ಅಶೋಕ್ ಕಚೇರಿಗಳು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಕಚೇರಿಗಳು, ಸರ್ಕಾರದ ಉನ್ನತ ಅಧಿಕಾರಿಗಳ ಕಚೇರಿಗಳನ್ನೂ ವಿಶೇಷವಾಗಿ ಅಲಂಕರಿಸಿ ಆಯುಧ ಪೂಜೆ ಮಾಡಲಾಯಿತು.
ಪರಸ್ಪರ ಸಿಹಿ ಹಂಚಿ ಆಯುಧ ಪೂಜೆ, ವಿಜಯದಶಮಿಯ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದುದು ಸಾಮಾನ್ಯವಾಗಿ ಕಂಡುಬಂದಿತು.ಹೀಗಾಗಿ ಬಹುತೇಕ ಕಚೇರಿಗಳಲ್ಲಿ ದೈನಂದಿನ ಕೆಲಸ ಕಾರ್ಯಗಳಿಗಿಂತ ಹಬ್ಬದ ಸಡಗರ-ಸಂಭ್ರಮವೇ ಹೆಚ್ಚಾಗಿತ್ತು. ಅದೇ ರೀತಿ ರಾಜ್ಯದ ವಿವಿಧ ಸರ್ಕಾರಿ ಕಚೇರಿಗಳು, ಖಾಸಗಿ ಕಾರ್ಖಾನೆ-ಸಂಸ್ಥೆಗಳ ಕಚೇರಿಗಳಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿತ್ತು.