ಬೆಂಗಳೂರು, ಮಾ.24- ಮುಸ್ಲಿಂ ಎಂಬುದು ಧರ್ಮ ಅಲ್ಲ, ಅವರು ಇಸ್ಲಾಂ ಅನ್ನು ಪಾಲನೆ ಮಾಡುತ್ತಾರೆ. ಆದರೆ ಅವರೂ ಕೂಡ ಹಿಂದೂಗಳಂತೆಯೇ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಂರಿಗೆ ಶೇ.4 ರಷ್ಟು ಮೀಸಲಾತಿ ನೀಡುವುದನ್ನು ಸಮರ್ಥಿಸಿಕೊಂಡರು.
1997 ರಿಂದಲೂ ಕರ್ನಾಟಕ ಹಿಂದುಳಿದ ವರ್ಗಗಳ ಜಾತಿಗಳನ್ನು ಗುರುತಿಸಲು ಈವರೆಗೂ 4 ಆಯೋಗಗಳನ್ನು ರಚಿಸಿದೆ. ಅದರಲ್ಲಿ ಅವನೂರು ಆಯೋಗ, ಚಿನ್ನಪ್ಪರೆಡ್ಡಿ ಆಯೋಗ ಸೇರಿದಂತೆ ಹಲವು ಆಯೋಗಗಳು ಮುಸ್ಲಿಂ ಸಮುದಾಯ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ ಎಂದು ಗುರುತಿಸಿದ್ದಾರೆ.
ಸಂವಿಧಾನವನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ಮುಸ್ಲಿಂರಿಗೆ ಸರ್ಕಾರಿ ಗುತ್ತಿಗೆಯಲ್ಲಿ ಶೇ.4 ರಷ್ಟು ಮೀಸಲಾತಿ ನೀಡುತ್ತಿರುವುದು ಸಂವಿಧಾನದ ವ್ಯಾಪ್ತಿಯಲ್ಲಿದೆ. ಸಂವಿಧಾನದ ಪರಿಚ್ಛೇದ 14, 15 ಮತ್ತು 16 (ಎ) ಧರ್ಮ, ಭಾಷೆ ಮತ್ತು ಬಣ್ಣದ ಆಧಾರದ ಮೇಲೆ ತಾರತಮ್ಯ ಮಾಡುವುದನ್ನು ನಿಷೇಧಿಸಿದೆ.
ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರ ಅಭಿವೃದ್ಧಿಗಾಗಿ ಯೋಜನೆ ರೂಪಿಸುವುದು ಸರ್ಕಾರದ ಕರ್ತವ್ಯ. ಈ ಹಿಂದೆ ಹಲವು ಆಯೋಗಗಳು ಮುಸ್ಲಿಂ. ಸಮುದಾಯವನ್ನು ಹಿಂದುಳಿದಿದೆ ಎಂದು ಗುರುತಿಸಿರುವುದರಿಂದ ರಾಜ್ಯ ಸರ್ಕಾರ ಮೀಸಲಾತಿ ಸೌಲಭ್ಯ ಕಲ್ಪಿಸುತ್ತಿದೆ ಎಂದು ಸಮರ್ಥಿಸಿಕೊಂಡರು.
ಮುಸ್ಲಿಂರು ಹಿಂದೂಗಳಿದ್ದಂತೆ. ಅವರನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಂತೆ ಪರಿಗಣಿಸಬೇಕಾಗುತ್ತದೆ ಎಂದರು. ಸಂವಿಧಾನ ತಿದ್ದುಪಡಿಯ ಅಧಿಕಾರ ಇರುವುದು ಕೇಂದ್ರ ಸರ್ಕಾರದ ಬಳಿ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಪ್ಪಾಗಿ ಆ ರೀತಿ ಹೇಳಿಕೆ ನೀಡಿದಾಕ್ಷಣ ಸಂವಿಧಾನ ತಿದ್ದುಪಡಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಹನಿಟ್ರ್ಯಾಪ್ ಪ್ರಕರಣವನ್ನು ಸಂಪೂರ್ಣ ವಿಚಾರಣೆಪಡಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಮೊದಲು ತನಿಖೆಯಾಗಲಿ ಎಂದರು.