Monday, February 24, 2025
Homeರಾಜ್ಯಅನಧಿಕೃತ ಬಡಾವಣೆಗಳಿಗೆ ಕಡಿವಾಣ, ಇಂದಿನಿಂದ ಬಿ-ಖಾತಾ ವಿತರಣೆ

ಅನಧಿಕೃತ ಬಡಾವಣೆಗಳಿಗೆ ಕಡಿವಾಣ, ಇಂದಿನಿಂದ ಬಿ-ಖಾತಾ ವಿತರಣೆ

B-Khata distribution from today

ಬೆಂಗಳೂರು,ಫೆ.18- ಇನ್ನು ಮುಂದೆ ಅನಧಿಕೃತ ಬಡಾವಣೆಗಳಿಗೆ ಅವಕಾಶವಿಲ್ಲದಂತೆ ಬಿ-ಖಾತಾ ನೀಡಲಾಗುವುದು. ಮುಂದಿನ 3 ತಿಂಗಳ ಒಳಗಾಗಿ ಅಭಿಯಾನದ ಮೂಲಕ ಖಾತಾ ವಿತರಣೆ ಕಾರ್ಯವನ್ನು ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ರಾಜ್ಯಾದ್ಯಂತ ಮಹಾನಗರ ಪಾಲಿಕೆಗಳು, ನಗರ ಸಭೆ, ಪಟ್ಟಣ ಪಂಚಾಯಿತಿಯ ಆಯುಕ್ತರು, ಪೌರಾಯುಕ್ತರು, ಮುಖ್ಯಾಧಿಕಾರಿಗಳು, ಜಿಲ್ಲಾಧಿಕಾರಿಗಳು, ಯೋಜನಾ ನಿರ್ದೇಶಕರ ಜೊತೆ ವಿಡಿಯೋ ಕಾನ್ಸರೆನ್ಸ್ ನಡೆಸಿದ ಸಿದ್ದರಾಮಯ್ಯನವರು ನಗರ, ಪಟ್ಟಣ, ಪಾಲಿಕೆ ಮತ್ತು ಹಳ್ಳಿಗಳಲ್ಲಿರುವ ಅನಧಿಕೃತ ಬಡಾವಣೆಗಳಿಗೆ ಅಂತ್ಯ ಹಾಡುವುದಾಗಿ ತಿಳಿಸಿದರು.

ಕಾಯ್ದೆ ಮೂಲಕ ಅನಧಿಕೃತ ಬಡಾವಣೆಗಳಿಗೆ ಅಂತ್ಯ ಹಾಡಿದ್ದೇವೆ. ಇದನ್ನು ಅಧಿಕಾರಿಗಳು ಸ್ಪಷ್ಟವಾಗಿ ಅರ್ಥ ಮಾಡಿಕೊಂಡು ಕೆಲಸ ಮಾಡಬೇಕು. ಅನಧಿಕೃತ ಬಡಾವಣೆಗಳಿಂದ ಕಂದಾಯ ಬರುತ್ತಿಲ್ಲ, ಪರಿಣಾಮ ಜನರಿಗೆ ನಾಗರಿಕ ಸವಲತ್ತುಗಳೂ ಸಿಗುತ್ತಿಲ್ಲ, ಸ್ಥಳೀಯ ಸಂಸ್ಥೆಗಳಿಗೆ ಆದಾಯವೂ ಬಂದ್ ಆಗಿದೆ. ಇವೆಲ್ಲಾ ಅನಾನುಕೂಲಗಳಿಗೂ ಅಂತ್ಯ ಹಾಡಬೇಕಿದೆ ಎಂದು ಹೇಳಿದ್ದಾರೆ.

ಕಂದಾಯ ಕಟ್ಟದೇ ಇರುವುದರಿಂದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಒಂದು ಬಾರಿ, ಇದೊಂದು ಬಾರಿ ಬಿ ಖಾತಾ ಕೊಟ್ಟು ಅನಧಿಕೃತ ಬಡಾವಣೆಗಳಿಗೆ ಅಂತ್ಯ ಹಾಡಲಾಗುವುದು ಎಂದ ಮುಖ್ಯಮಂತ್ರಿಯವರು ಇದು ಒಂದು ಬಾರಿ ಮಾತ್ರ ಅವಕಾಶ ಕಲ್ಪಿಸುವುದಾಗಿ ಸ್ಪಷ್ಟವಾಗಿ ಉಲ್ಲೇಖಿಸಿದರು.

ಎಲ್ಲಾ ಅಧಿಕಾರಿಗಳಿಗೂ 3 ತಿಂಗಳು ಮಾತ್ರ ಸಮಯ ನೀಡಲಾಗುವುದು. ಅಷ್ಟರೊಳಗೆ ಅಭಿಯಾನ ನಡೆಸಿ ಖಾತಾ ವಿತರಣೆಯನ್ನು ಪೂರ್ಣಗೊಳಿಸಬೇಕು. ಇದರಲ್ಲಿ ಯಾವುದೇ ರಾಜಿ ಇಲ್ಲ. ಒಂದು ವೇಳೆ ಅಧಿಕಾರಿಗಳು ರಾಜಿ ಮಾಡಿಕೊಂಡರೂ ಸಹಿಸುವುದಿಲ್ಲ ಎಂದು ಸ್ಪಷ್ಟವಾಗಿ ಎಚ್ಚರಿಕೆ ನೀಡಿದರು.

ಅನಧಿಕೃತ ಬಡಾವಣೆಗಳು ಮತ್ತೆ ತಲೆ ಎತ್ತಿದರೆ ಜಿಲ್ಲಾಧಿಕಾರಿ, ಮುಖ್ಯ ಅಧಿಕಾರಿ, ನಗರ ಯೋಜನಾ ಅಧಿಕಾರಿಗಳನ್ನು ಜವಾಬ್ದಾರಿ ಮಾಡಲಾಗುವುದು ಮತ್ತು ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದಾಗಿ ಆದೇಶ ನೀಡಿದರು.

ಮಧ್ಯವರ್ತಿಗಳಿಗೆ, ಬೋಕರ್‌ಗಳಿಗೆ ತಕ್ಷಣವೇ ಗೇಟ್ ಪಾಸ್ ನೀಡಬೇಕು. ಕಾಯ್ದೆಯ ದೂರದೃಷ್ಟಿಯನ್ನು ಎಲ್ಲಾ ಅಧಿಕಾರಿಗಳು ಸ್ಪಷ್ಟವಾಗಿ, ಖಚಿತವಾಗಿ ಅರ್ಥ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ಇನ್ನು ಮುಂದೆ ಎಲ್ಲಿಯೂ ಅನಧಿಕೃತ ಬಡಾವಣೆಗಳು, ರೆವಿನ್ಯೂ ಬಡಾವಣೆಗಳು ತಲೆ ಎತ್ತಬಾರದು ಎಂದು ತಾಕೀತು ಮಾಡಿದರು.

ಅನಧಿಕೃತ, ರೆವಿನ್ಯೂ ಬಡಾವಣೆಗಳಲ್ಲಿ ಸೈಟು, ಮನೆ ಕಟ್ಟಿರುವವರಿಗೆ ತೊಂದರೆ ಆಗಬಾರದು. ಒಟ್ಟಾರೆಯಾಗಿ ಬಡವರು, ಮಧ್ಯಮ ವರ್ಗದವರಿಗೆ ಅನುಕೂಲ ಮಾಡಿಕೊಡಲು ಏಕಕಾಲಿಕ ಪರಿಹಾರ ನೀಡಲಾಗುತ್ತಿದೆ. ಗೊಂದಲಗಳಿಗೆ ಅವಕಾಶ ಮಾಡಿಕೊಡದಂತೆ ಇಂದಿನಿಂದಲೇ ಬಿ ಖಾತಾ ಅಭಿಯಾನವನ್ನು ಆರಂಭ ಮಾಡಿ 3 ತಿಂಗಳೊಳಗಾಗಿ ಪೂರ್ಣಗೊಳಿಸಿ ಎಂದು ಮುಖ್ಯಮಂತ್ರಿ ಆದೇಶ ಹೊರಡಿಸಿದ್ದಾರೆ.

ಕಂದಾಯ ಸಚಿವ ಕೃಷ್ಣ ಭೈರೇಗೌಡ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಸಚಿವ ರಹೀಂಖಾನ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

Latest News