ಬೆಂಗಳೂರು,ಅ.14-ಕಾಂಗ್ರೆಸ್ ಎಂಬ ಅಧಿಕಾರ ಸೃಷ್ಟಿಯ ಫ್ಯಾಕ್ಟರಿ ಹೊರತುಪಡಿಸಿದಂತೆ ನಿಮ್ಮ ಜೀವನದಲ್ಲಿ ಯಾವ ರಾಷ್ಟ್ರ ಭಕ್ತ ಸಂಘಟನೆಯಲ್ಲಿ ನೀವು ಸೇವೆ ಸಲ್ಲಿಸಿದ್ದೀರಿ, ಆಧಾರ ಸಹಿತ ಮಾಹಿತಿ ಕೊಡಿ ಎಂದು ಸಚಿವ ಪ್ರಿಯಾಂಕ್ ಖರ್ಗೆಯವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿರುಗೇಟು ನೀಡಿದ್ದಾರೆ.
ತಮ್ಮ ಸಾಮಾಜಿಕ ಜಾಲ ತಾಣ ಎಕ್ಸ್ ನಲ್ಲಿ ಸಚಿವ ಪ್ರಿಯಾಂಕ ಖರ್ಗೆ ವಿರುದ್ದ ತೀವ್ರ ವಾಗ್ದಳಿ ನಡೆಸಿರುವ ವಿಜಯೇಂದ್ರ, ಹಿಂದೂ ಸಂಘಟನೆಗಳನ್ನು ಹೊರತುಪಡಿಸಿ ನಿಮ್ಮ ರಾಜಕೀಯ ಜೀವನದಲ್ಲಿ ಇತರೆ ಕೋಮುವಾದಿ ಸಂಘಟನೆಗಳ ಬಗ್ಗೆ, ಭಯೋತ್ಪಾದಕತೆಯ ಕುರಿತು, ಮುಸ್ಲಿಂ ಮೂಲಭೂತವಾದಿ ಸಂಸ್ಥೆಗಳ ಕುಕೃತ್ಯಗಳ ಕುರಿತು ಎಂದಾದರೂ ಒಮ್ಮೆ ಯಾದರೂ ನೀವು ಟೀಕೆ- ಟಿಪ್ಪಣಿ ಮಾಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ಸಾಮಾಜಿಕ ಸಂಘಟನೆಗಳ ಹಿನ್ನೆಲೆ ಇಲ್ಲದೇ ಅಧಿಕಾರ ರಾಜಕಾರಣದ ನೆರಳಿನಲ್ಲಿ ಬಂದ ನಿಮಗೆ ರಾಷ್ಟ್ರಭಕ್ತ ಸಂಘಟನೆಗಳ ಸೇವೆ, ಇತಿಹಾಸ ತಿಳಿಯಲು ಹೇಗೆ ಸಾಧ್ಯ. ನಿಮ ಉದ್ದೇಶ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಟೀಕಿಸುವುದಲ್ಲ, ಹಿಂದೂ ಧರ್ಮವನ್ನು ಅವಹೇಳನ ಮಾಡುವುದು. ಏಕೆಂದರೆ ನೀವು ಹಿಂದೂ ಧರ್ಮವನ್ನು ಮರೆತು ಬಹು ವರ್ಷಗಳೇ ಕಳೆದಿದೆ, ಈ ಕಾರಣಕ್ಕಾಗಿಯೇ ಹಿಂದೂ ಧರ್ಮದ ಕುರಿತು ನೀವು ಹಗೆತನ, ದ್ವೇಷ ಸಾಧಿಸುತ್ತಿದ್ದೀರಿ ಎಂದು ಕಿಡಿಕಾರಿದ್ದಾರೆ.
ಒಂದೊಮೆ ನಿಮ್ಮ ಕುಟುಂಬದ ಇತಿಹಾಸದತ್ತ ಮೆಲುಕುಹಾಕಿ, ರಜಾಕರ ದಾಳಿಯ ನಡುವೆ ನಿಮ ಪೂಜ್ಯ ತಂದೆಯವರು ಹೇಗೆ ಬದುಕುಳಿದರು ಎಂಬುದನ್ನು ಒಮೆ ಅವಲೋಕನ ಮಾಡಿ, ಆದಾಗ್ಯೂ ನೀವು ರಜಾಕರು ಹಾಗೂ ರಜಾಕ ಸಂಸ್ಕೃತಿಯನ್ನು ಒಮೆಯೂ ಟೀಕಿಸಲಿಲ್ಲ, ಬದಲಾಗಿ ಅದನ್ನು ಪೋಷಿಸುತ್ತಿರುವ ಕಾಂಗ್ರೆಸ್ ಪಕ್ಷದ ಅಧಿಕೃತ ವಕ್ತಾರರಾಗಿ ದೇಶವಿರೋಧಿ ಮನಸ್ಥಿತಿಯ ಸಂಘಟನೆಗಳ ಪ್ರತಿನಿಧಿ ಎಂಬಂತೆ ರಾಷ್ಟ್ರಭಕ್ತ ಸಂಘಟನೆ ಆರ್‌ಎಸ್‌ಎಸ್ ಅನ್ನು ಟೀಕಿಸಿ, ಅವಹೇಳನ ಮಾಡುವುದನ್ನು ರಾಜಕೀಯ ಅಧಿಕಾರ ಅನುಭವಿಸುವ ಏಕೈಕ ಉದ್ದೇಶಕ್ಕಾಗಿ ಜೀವನ ಧ್ಯೇಯ ಮಾಡಿಕೊಂಡಿದ್ದೀರಿ ಎಂದು ಕುಟುಕಿದ್ದಾರೆ.
ಆರ್‌ಎಸ್‌ಎಸ್ ಹಾಗೂ ರಾಷ್ಟ್ರಭಕ್ತ ಸಂಘಟನೆಗಳ ವಿರುದ್ಧ ಡಂಗೂರ ಭಾರಿಸಿ ಬೊಬ್ಬೆ ಹೊಡೆಯುವ ಕೆಲಸವನ್ನು ನಿಷ್ಠೆಯಿಂದ ನಿರ್ವಹಿಸಿ ನಿಮ ಹೈಕಮಾಂಡ್ ಬೆನ್ನು ತಟ್ಟಿಸಿಕೊಳ್ಳುವ ಪೈಪೋಟಿಯಲ್ಲಿ ನಿರತರಾಗಿದ್ದೀರಿ ಎಂದು ತಿರುಗೇಟು ನೀಡಿದ್ದಾರೆ.
ಸರ್ಕಾರಿ ಶಾಲೆಗಳು, ಕಾಲೇಜುಗಳು, ದೇವಾಲಯಗಳು ಮತ್ತು ಇತರ ಆವರಣಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಷೇಧಿಸುವ ಪ್ರಸ್ತಾಪ ಮುಂದಿಟ್ಟಿರುವ ಪ್ರಿಯಾಂಕ್ ಖರ್ಗೆ ವಿರುದ್ಧ ರಾಜ್ಯ ಬಿಜೆಪಿ ತೀವ್ರ ವಾಗ್ದಾಳಿ ನಡೆಸುತ್ತಿದೆ.