ಬೆಂಗಳೂರು, ಜೂ.26- ಮಕ್ಕಳನ್ನು ಕಳ್ಳತನ ಮಾಡಿ ಸಂತಾನಹೀನ ದಂಪತಿಗಳಿಗೆ ಮಾರಾಟ ಮಾಡುತ್ತಿದ್ದ ವ್ಯವಸ್ಥಿತ ಜಾಲವೊಂದನ್ನು ಪತ್ತೆ ಹಚ್ಚಿರುವ ತುಮಕೂರು ಜಿಲ್ಲೆಯ ಪೊಲೀಸರು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಸಿಬ್ಬಂದಿಗಳನ್ನು ಬಂಧಿಸಿದ್ದಾರೆ.
ಈ ಬೃಹತ್ ಜಾಲದಲ್ಲಿ ಕೆಲದಿನಗಳ ಹಿಂದೆ ಕುಣಿಗಲ್ ಸರ್ಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಎಎನ್ಎಂ ಆಗಿ ಕೆಲಸ ಮಾಡುತ್ತಿರುವ ಯು.ಡಿ.ಮಹೇಶ್, ಮೆಹಬೂಬ್ ಷರೀಫ್ ಎಂಬ ಚಿಕ್ಕನಾಯ್ಕನಹಳ್ಳಿ ತಾಲ್ಲೂಕಿನ ಇಬ್ಬರನ್ನು, ಜಾತ್ರೆಗಳಲ್ಲಿ ಹಚ್ಚೆ ಬರೆಯುವ ಗುಬ್ಬಿ ತಾಲ್ಲೂಕಿನ ಚಿಕ್ಕಗುಡ್ಡ ಗ್ರಾಮದ ಕೆ.ಎನ್.ರಾಮಕೃಷ್ಣ, ತುಮಕೂರಿನ ಭಾರತಿ ನಗರದ ಹನುಮಂತರಾಜು, ನಾಗಮಂಗಲ ಮುಬಾರಕ್ ಪಾಶ, ದೊಡ್ಡೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುವ ಪೂರ್ಣಿಮಾ, ಶಿರಾ ನಗರದ ಸೌಜನ್ಯ ಅವರನ್ನು ಬಂಧಿಸಲಾಗಿದೆ.
ಕಳೆದ ಜೂ.9 ರಂದು ಗುಬ್ಬಿ ನಗರದ ಚನ್ನಬಸವೇಶ್ವರ ದೇವಸ್ಥಾನದ ಬಳಿ ಮಹದೇವಿ ಎಂಬುವರು ಮಲಗಿದ್ದಾಗ ಆಕೆಯ 11 ತಿಂಗಳ ಗಂಡುಮಗುವನ್ನು ಕದ್ದೊಯ್ಯಲಾಗಿತ್ತು. ದೂರು ಆಧರಿಸಿ ತನಿಖೆ ನಡೆಸಿದ ಗುಬ್ಬಿ ಪೊಲೀಸರು ತಾಂತ್ರಿಕ ಸಹಾಯದ ಆಧಾರದಲ್ಲಿ ಮಗುವನ್ನು ಕಳ್ಳತನ ಮಾಡಿದ ರಾಮಕೃಷ್ಣ ಹಾಗೂ ಹನುಮಂತರನ್ನು ಬಂಧಿಸಿದ್ದರು.
ಹೆಚ್ಚಿನ ವಿಚಾರಣೆ ನಡೆಸಿದಾಗ ಆರೋಪಿಗಳು ಮಗುವನ್ನು ಬೆಳ್ಳೂರು ಕ್ರಾಸ್ನ ಮುಬಾರಕ್ ಅವರಿಗೆ 1.75 ಲಕ್ಷ ರೂ.ಗಳಿಗೆ ಮಾರಾಟ ಮಾಡಿದ್ದಾಗಿ ವಿವರಿಸಿದ್ದಾರೆ.ಅವಿವಾಹಿತ ಹೆಣ್ಣುಮಕ್ಕಳು ಗರ್ಭ ಧರಿಸುವುದನ್ನು ಪತ್ತೆ ಹಚ್ಚುತ್ತಿದ್ದ ಈ ಜಾಲ ಅವರಿಗೆ ಹಣದ ಆಮಿಷ ತೋರಿಸಿ ಹೆರಿಗೆ ನಂತರ ಮಗುವನ್ನು ಪಡೆದುಕೊಂಡು ಸಂತಾನಹೀನ ದಂಪತಿಗಳಿಗೆ 2 ರಿಂದ 3 ಲಕ್ಷ ರೂ.ಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಆರೋಪಿಗಳು ಈವರೆಗೂ 9 ಮಕ್ಕಳನ್ನು ಮಾರಾಟ ಮಾಡಿದ್ದು, ಕಾರ್ಯಾಚರಣೆ ನಡೆಸಿದ ಪೊಲೀಸರು 5 ಮಕ್ಕಳನ್ನು ಸಂರಕ್ಷಿಸಿದ್ದಾರೆ. ಒಂದು ಮಗು ಮೃತಪಟ್ಟಿದ್ದು, ಇನ್ನೊಂದನ್ನು ಪೋಷಕರಿಗೆ ವಾಪಸ್ ನೀಡಲಾಗಿದೆ.ಸಂರಕ್ಷಿಸಲಾದ 5 ಮಕ್ಕಳಲ್ಲಿ 4 ಮಕ್ಕಳು ಕಲ್ಯಾಣ ಕೇಂದ್ರದ ಆಶಯದಲ್ಲಿ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಆರೋಪಿಗಳು ಮಕ್ಕಳನ್ನು ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಇತ್ತೀಚೆಗೆ ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆಯಾಗಿತ್ತು. ಇದೀಗ ಗೃಹಸಚಿವರ ತವರು ಜಿಲ್ಲೆಯಲ್ಲೇ ಇಂತಹ ಜಾಲ ಕಂಡುಬಂದಿರುವುದು ಆತಂಕ ಮೂಡಿಸಿದೆ.