ಬೆಂಗಳೂರು, ಏ.11- ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಸಿದ್ದಪಡಿಸಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ವರದಿಯ ಸಾಧಕ-ಬಾಧಕಗಳ ಬಗ್ಗೆ ಸಮಗ್ರ ಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಆಯೋಗದ ಸಲ್ಲಿಸಿರುವ ವರದಿ ಜಾತಿ ಗಣತಿ ಅಲ್ಲ, ಮನೆ ಮನೆ ಸಮೀಕ್ಷೆ ನಡೆದಿಲ್ಲ. ಅವೈಜ್ಞಾನಿಕವಾಗಿದೆ ಎಂಬೆಲ್ಲ ವಿಚಾರಗಳು ಚರ್ಚೆಯಾಗುತ್ತಿವೆ. ವರದಿ ಬಹಿರಂಗಗೊಳ್ಳದ ಹೊರತು ಅದರಲ್ಲಿನ ಅಂಶಗಳ ಬಗ್ಗೆ ಹೇಳಿಕೆ ನೀಡುವುದು ಅಪ್ರಸ್ತುತವಾಗಿದೆ. ವರದಿ ವೈಜ್ಞಾನಿಕವೋ, ಅವೈಜ್ಞಾನಿಕವೋ? ದತ್ತಾಂಶಗಳು ಸರಿಯಾಗಿವೆ. ಯಾವ ರೀತಿಯ ಅ ಅಂಶ ಸಂಗ್ರಹಿಸಲಾಗಿದೆ, ಜಾತಿ ಗಣತಿಯ ಅಂಕಿಸಂಖ್ಯೆಗಳ ಜೊತೆ ಹೋಲಿಕೆಯಾಗುತ್ತದೆಯೇ? ಎಂಬೆಲ್ಲ ವಿಚಾರಗಳನ್ನು ಪರಿಶೀಲಿಸಲಾಗುವುದು ಎಂದರು.
ಒಳಮೀಸಲಾತಿ ವಿಚಾರ ಬಂದಾಗ ನ್ಯಾಯಮೂರ್ತಿ ನಾಗಮೋಹನ್ ದಾಸ್ ವೈಜ್ಞಾನಿಕವಾಗಿ ಮರು ಸಮೀಕ್ಷೆ ಮಾಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆ ಪ್ರಕ್ರಿಯೆಗಳು ಹೇಗಿರಬೇಕು ಎಂಬ ನಿಟ್ಟಿನಲ್ಲಿ ತೀರ್ಮಾನ ತೆಗೆದುಕೊಳ್ಳಲಿದ್ದೇವೆ. ಅದೇ ರೀತಿ ಹಿಂದುಳಿದ ವರ್ಗಗಳ ಆಯೋಗದ ವರದಿಯ ಬಗ್ಗೆಯೂ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.