Thursday, April 10, 2025
Homeಜಿಲ್ಲಾ ಸುದ್ದಿಗಳು | District Newsಅಂತ್ಯ ಸಂಸ್ಕಾರದ ವೇಳೆ ಮರುಜೀವ ಪಡೆದ ಎಳೆಮಗು, ಬಾಗಲಕೋಟೆಯಲೊಂದು ಅಚ್ಚರಿ

ಅಂತ್ಯ ಸಂಸ್ಕಾರದ ವೇಳೆ ಮರುಜೀವ ಪಡೆದ ಎಳೆಮಗು, ಬಾಗಲಕೋಟೆಯಲೊಂದು ಅಚ್ಚರಿ

ಬಾಗಲಕೋಟೆ, ಮೇ 24- ಎಳೆಯ ಮಗುವೊಂದು ಮೃತಪಟ್ಟಿದೆ ಎಂದು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲಿ ಆ ಮಗು ಕೆಮ್ಮಿದ್ದು ಪೋಷಕರಲ್ಲಿ ಅಚ್ಚರಿ ಮೂಡಿಸಿದ ಘಟನೆ ಜಿಲ್ಲೆಯ ಇಳಕಲ್‌ ನಗರದಲ್ಲಿ ನಡೆದಿದೆ.

ಬಸವರಾಜ ಭಜಂತ್ರಿ ಹಾಗೂ ನೀಲಮ ದಂಪತಿಯ 13 ತಿಂಗಳ ದ್ಯಾಮಣ್ಣ ಭಜಂತ್ರಿ ಮೃತ ಪಟ್ಟಿದೆ ಎಂದು ಭಾವಿಸಿದ್ದ ಮಗು. ಉಸಿರಾಟ ತೊಂದರೆ ಸೇರಿದಂತೆ ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಮಗುವನ್ನು ನಾಲ್ಕೈದು ದಿನಗಳ ಹಿಂದೆ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ವೈದ್ಯರು ಪರೀಕ್ಷಿಸಿ ಮಗು ಬದುಕುವುದು ಕಷ್ಟ ಎಂದು ಹೇಳಿದ್ದರು. ಹೀಗಾಗಿ ವಾಪಸ್‌‍ ಮನೆಗೆ ವಾಹನದಲ್ಲಿ ಹಿಂದಿರುಗುವಾಗ ಮಗು ಪ್ರಜ್ಞೆ ತಪ್ಪಿದೆ. ಪ್ರಜ್ಞೆ ತಪ್ಪಿದ ಮಗು ಮೃತಪಟ್ಟಿದೆ ಎಂದು ಭಾವಿಸಿ ಪೋಷಕರು ಸಂಬಂಧಿಕರಿಗೆ ಸಾವಿನ ಸುದ್ದಿ ಮುಟ್ಟಿಸಿದ್ದರು.

ಅದರಂತೆ ಸಂಬಂಧಿಕರು ಅಂತ್ಯಸಂಸ್ಕಾರಕ್ಕೆ ಬಂದು ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲಿ ಮಗು ಕೆಮ್ಮಿದೆ. ಈ ವೇಳೆ ಮಗು ಬದುಕಿದೆ ಎಂದು ಪೋಷಕರು ನಿಟ್ಟುಸಿರು ಬಿಟ್ಟರೆ, ಇತ್ತ ಅಂತ್ಯಸಂಸ್ಕಾರಕ್ಕೆಂದು ಬಂದ ಸಂಬಂಧಿಕರಿಗೆ ಅಚ್ಚರಿಯಾಗಿದೆ. ಸದ್ಯ ಮಗುವಿಗೆ ಇಳಕಲ್‌ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

RELATED ARTICLES

Latest News