ಕಲಬುರಗಿ,ಏ.12-ಜಗಳವಾಡಿಕೊಂಡು ತವರು ಮನೆ ಸೇರಿದ್ದ ಹೆಂಡತಿಯ ಮನವೊಲಿಸಲು ಬಂದ ಬಾವನನ್ನು ಬಾಮೈದುನನೇ ಥಳಿಸಿ ಚಾಕುವಿನಿಂದ ಇರಿದು ಕೊಂದಿರುವ ಘಟನೆ ನಗರದಲ್ಲಿ ನಡೆದಿದೆ.
ಆನಂದ್ (24) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಆರೋಪಿ ಟೋನಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಎರಡು ವರ್ಷದ ಹಿಂದೆ ಗಾಜಿಪುರದ ಸ್ನೇಹಾ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದ ಆನಂದ ಆರಂಭದಲ್ಲಿ ಸಂತೋಷವಾಗಿದ್ದರು. ಆದರೆ ಕಳೆದ 2 ತಿಂಗಳ ಹಿಂದೆ ಗಂಡ ಹೆಂಡತಿಯ ಮಧ್ಯೆ ಜಗಳವಾಗಿದೆ. ಕೋಪಗೊಂಡ ಸ್ನೇಹಾ ತವರು ಮನೆ ಸೇರಿದ್ದಳು.
ಆನಂದ್ ಅವರ ಅಣ್ಣನ ಮದುವೆ ನಿಶ್ಚಯವಾಗಿದ್ದರಿಂದ ಮನೆಗೆ ವಾಪಾಸ್ ಬರುವಂತೆ ಸ್ನೇಹಾಳನ್ನು ಕರೆದಿದ್ದರೂ ಬಂದಿರಲಿಲ್ಲ.
ಹಾಗಾಗಿ ಆನಂದ್ ಅವರೇ ಪತ್ನಿಯನ್ನು ಕರೆದುಕೊಂಡು ಬರಲು ಅವರ ಮನೆಗೆ ಹೋಗಿದ್ದಾನೆ.
ಆ ವೇಳೆ ಸ್ನೇಹಾಳ ಸಹೋದರ ಟೋನಿ ಮತ್ತು ಆತನ ಸ್ನೇಹಿತರು ಸೇರಿ ಆನಂದ್ ಮೇಲೆರಗಿ ಮನಬಂದಂತೆ ಥಳಿಸಿ ನಂತರ ಚಾಕುವಿನಿಂದ ಇರಿದಿದ್ದಾರೆ. ತೀವ್ರವಾಗಿ ಗಾಯಗೊಂಡ ಆನಂದನನ್ನು ತಕ್ಷಣ ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಿಸದೇ ಆತ ಸಾವಿಗೀಡಾಗಿದ್ದಾನೆ.
ಈ ಸಂಬಂಧ ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಟೋನಿಯನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.