ಹಾಸನ,ಮಾ.24- ಜಿಲ್ಲೆಯ ವಿವಿಧೆಡೆ ನಿನ್ನೆ ಸಂಜೆ ಗುಡುಗು, ಸಿಡಿಲಿ ಸಹಿತ ಸುರಿದ ಧಾರಕಾರ ಮಳೆಗೆ ಕಟಾವಿಗೆ ಬಂದಿದ್ದ ಒಂದು ಸಾವಿರ ಬಾಳೆಗಿಡಗಳು ನೆರಕ್ಕುಳಿರುವ ಘಟನೆ ಹೊಳೆನರಸೀಪುರ ತಾಲ್ಲೂಕಿನ ಅತ್ತಿ ಚೋಡೆನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಲಿಂಗರಾಜು ಎಂಬುವರಿಗೆ ಸೇರಿದ ಬಾಳೆತೋಟ ಸಂಪೂರ್ಣವಾಗಿ ನೆಲಕಚ್ಚಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ನಿನ್ನೆ ಸಂಜೆ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಮಳೆಯಾಗಿದ್ದು, ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದ ರೈತ ಲಿಂಗರಾಜುಗೆ ಬರಸಿಡಿಲು ಬಡಿದಂತಾಗಿದೆ.ಮೊದಲ ಮಳೆಯಿಂದ ಅಪಾರ ಹಾನಿಯಾಗಿದ್ದು, ಅಂದಾಜು 7 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಈಗ ಮಾರುಕಟ್ಟೆಯಲ್ಲಿ ಏಲಕ್ಕಿ ಬಾಳೆಗೆ ಉತ್ತಮ ಬೆಲೆಯಿದ್ದು, ಫಸಲಿಗೆ ಬಂದಿದ್ದ ಬೆಳೆ ಮಳೆಗೆ ನೆಲಕಚ್ಚಿದ್ದು ಅನ್ನದಾತ ತಲೆಮೇಲೆ ಕೈ ಹೊತ್ತು ಕೂರುವಂತಾಗಿದೆ. ನೆಲಕಚ್ಚಿದ ಬೆಳೆ ಕಂಡು ರೈತ ಲಿಂಗರಾಜು ಕಣ್ಣೀರಿಟ್ಟಿದ್ದಾನೆ.
ಬೇಸಿಗೆಯಲ್ಲೂ ಸಹ ಕಷ್ಟಪಟ್ಟು ನೀರು ಹಾಯಿಸಿ ಬೆಳೆ ಉಳಿಸಿಕೊಂಡಿದ್ದರು. ಆದರೆ ಒಂದೇ ಒಂದು ಕ್ಷಣದಲ್ಲಿ ನಿನ್ನೆ ಬೀಸಿದ ಗಾಳಿಗೆ ಫಸಲು ನೆಲಕಚ್ಚಿದೆ. ಬೆಳೆನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ರೈತ ಮನವಿ ಮಾಡಿಕೊಂಡಿದ್ದಾರೆ.
ನೆಲಕ್ಕುದುರಿದ ಮಾವು
ಕೋಲಾರ ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಬಿರುಗಾಳಿ ಸಹಿತ ಮಳೆಯಾಗಿದ್ದು, ಒಂದೆಡೆ ಬಿಸಿಲ ಬೇಗೆಯಿಂದ ಬೆಂಡಾಗಿದ್ದ ಭೂಮಿ ತಂಪಾಗಿದ್ದರೆ ಮತ್ತೊಂದೆಡೆ ಅಪಾರ ಪ್ರಮಾಣದ ಮಾವು ನೆಲ ಕಚ್ಚಿದೆ. ಶ್ರೀನಿವಾಸಪುರದಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿದ್ದು, ಮಾವಿನಕಾಯಿಗಳು ಉದುರಿ ಬೆಳೆ ಹಾನಿಯಾಗಿದೆ. ಅದೇ ರೀತಿ ತಾಲ್ಲೂಕಿನ ವಿವಿಧೆಡೆ ಮಳೆಯಾಗಿದ್ದು, ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದ ಮಾವು ಬೆಳೆಗಾರರಿಗೆ ತಣ್ಣೀರೆರಚಿದಂತಾಗಿದೆ.

ಈ ಬಾರಿ ಬಿಸಿಲು ಹೆಚ್ಚಾಗಿದ್ದರಿಂದ ಅಷ್ಟೇನೂ ಮಾವಿನ ಫಸಲು ಕಚ್ಚಿರಲಿಲ್ಲ. ಆದರೂ ಸಹ ಕೆಲ ರೈತರು ಕಷ್ಟಪಟ್ಟು ಮಾವಿನ ಗಿಡಗಳಿಗೆ ನೀರು ಹಾಯಿಸಿ ಔಷಧಿ ಸಿಂಪಡಿಸಿ ಹೂವನ್ನು ಉಳಿಸಿಕೊಂಡಿದ್ದರು. ಈಚು ಚೆನ್ನಾಗಿ ಕಟ್ಟಿದ್ದು, ಈ ಬಾರಿ ಇಳುವರಿ ಕಡಿಮೆಯಾಗಲಿದ್ದು, ಬೇಡಿಕೆ ಹೆಚ್ಚಾಗಿ ಬೆಲೆ ಜಾಸ್ತಿಯಾಗುವ ನಿರೀಕ್ಷೆಯಲ್ಲಿದ್ದರು.
ಆದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆ ಮಾವಿನ ಈಚನ್ನು ಧರೆಗುರುಳಿಸಿದೆ. ಇದರಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಜಿಲ್ಲೆಯಲ್ಲಿ ಭಾರಿ ಮಳೆಯಾಗಿದ್ದು, ಡಿಎಚ್ ಒ ಕಚೇರಿ ಬಳಿ 2 ಮರಗಳು ಮುರಿದುಬಿದ್ದಿದ್ದು ಸಂಚಾರ ಅಸ್ತವ್ಯಸ್ತವಾಗಿದ್ದು, ಅಗ್ನಿಶಾಮಕ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಮರಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಅದೇ ರೀತಿ ತರಕಾರಿ ಬೆಳೆಗಳಿಗೂ ಹಾನಿಯಾಗಿದ್ದು ಮೊದಲ ಬೇಸಿಗೆ ಮಳೆ ಜಿಲ್ಲೆಯಲ್ಲಿ ಭಾರಿ ನಷ್ಟ ತಂದೊಡ್ಡಿದೆ.