ಬೆಂಗಳೂರು,ಜ.29- ವಿದೇಶ ಮತ್ತು ಹೊರ ರಾಜ್ಯದ ಯುವತಿಯರನ್ನು ಕರೆತಂದು ಹೋಟೆಲ್, ಮನೆ, ಅಪಾರ್ಟ್ಮೆಂಟ್ಗಳಲ್ಲಿ ಇಟ್ಟು ಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ನಾಲ್ಕು ಕಡೆ ಸಿಸಿಬಿ ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿ ಯುವತಿಯರನ್ನು ರಕ್ಷಿಸಿದ್ದಾರೆ.
ಕೆಆರ್ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರತಿಷ್ಠಿತ ಹೋಟೆಲ್ವೊಂದರಲ್ಲಿ ಹೊರದೇಶ ಮತ್ತು ಹೊರರಾಜ್ಯದ ಹುಡುಗಿಯರನ್ನು ಮಾನವ ಕಳ್ಳ ಸಾಗಣೆ ಮಾಡಿ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ದೊರೆತಿದೆ.
ಈ ಮಾಹಿತಿಯನ್ನು ಆಧರಿಸಿ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಅಧಿಕಾರಿ ಮತ್ತು ಸಿಬ್ಬಂದಿ ಈ ಹೋಟೆಲ್ ಮೇಲೆ ದಾಳಿ ಮಾಡಿ, ವಿದೇಶಿ ಮಹಿಳೆ ಹಾಗೂ ಹೊರರಾಜ್ಯದ ನಾಲ್ವರು ಮಹಿಳೆಯರನ್ನು ರಕ್ಷಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಉದ್ಯೋಗ ಕೊಡಿಸುವುದಾಗಿ, ಮಾನವ ಕಳ್ಳಸಾಗಣೆ ಮಾಡಿಕೊಂಡು ಸಂಪಿಗೆಹಳ್ಳಿ ವ್ಯಾಪ್ತಿಯ ಅಪಾರ್ಟ್ಮೆಂಟ್ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ಮಾಡಿ ವಿದೇಶಿ ಮಹಿಳೆ ಹಾಗೂ ಹೊರ ರಾಜ್ಯದ ಮಹಿಳೆಯನ್ನು ರಕ್ಷಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಉದ್ಯೋಗ ಕೊಡಿಸುವುದಾಗಿ ನಂಬಿಸಿ ರಾಮಮೂರ್ತಿ ನಗರ ಹಾಗೂ ಹೆಚ್ಎಎಲ್ ವ್ಯಾಪ್ತಿಯಲ್ಲಿ ವಿದೇಶಿ ಮಹಿಳೆಯರನ್ನು ಅಕ್ರಮವಾಗಿ ಮಾನವ ಕಳ್ಳ ಸಾಗಣಿಕೆ ಮಾಡಿಕೊಂಡು ಬಂದು ಮನೆಯೊಂದರಲ್ಲಿ ಕೂಡಿ ಹಾಕಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಿದ್ದ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಮನೆ ಮೇಲೆ ದಾಳಿ ಮಾಡಿ ಇಬ್ಬರು ಮಹಿಳೆಯರನ್ನು ಹಾಗೂ ನಾಲ್ಕು ವರ್ಷದ ಮಗುವನ್ನು ರಕ್ಷಣೆ ಮಾಡಿ, ಎಫ್.ಆರ್.ಆರ್.ಓ ರವರ ಮಾರ್ಗದರ್ಶನದಂತೆ ವಾಪಸ್ಸು ಅವರ ದೇಶಕ್ಕೆ ಕಳುಹಿಸಲಾಗಿದೆ.
ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀನಗರದಲ್ಲಿರುವ ಮನೆಯೊಂದರಲ್ಲಿ ವಿದೇಶಿ ಮಹಿಳೆಯನ್ನು ಮಾನವ ಕಳ್ಳಸಾಗಾಣಿಕೆಮಾಡಿಕೊಂಡು ಬಂದು, ಆಕೆಗೆ ಹಣದ ಆಮೀಷವೊಡ್ಡಿ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಸ್ಥಳದ ಮೇಲೆ ದಾಳಿ ಮಾಡಿ, ವಿದೇಶಿ ಮಹಿಳೆಯನ್ನು ರಕ್ಷಣೆ ಮಾಡಿದ್ದು, ಆರೋಪಿತೆಯನ್ನು ಬಂಧಿಸಿದ್ದಾರೆ.