ಆಫ್ರಿಕಾ ದೇಶದ ಪ್ರಜೆ ಬಂಧನ : 4 ಕೋಟಿ ಮೌಲ್ಯದ ಡ್ರಗ್ಸ್ ವಶ
ಬೆಂಗಳೂರು, ಮೇ 16- ಕಾಲೇಜು ವಿದ್ಯಾರ್ಥಿಗಳಿಗೆ, ಐಟಿ-ಬಿಟಿ ಉದ್ಯೋಗಿಗಳಿಗೆ ಹಾಗೂ ಸ್ಥಳೀಯ ಗಿರಾಕಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆಫ್ರಿಕಾ ದೇಶದ ಪ್ರಜೆಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿ 4 ಕೋಟಿ ರೂ. ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ.
ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಅಚ್ಯುತನಗರದ ಮನೆಯೊಂದರಲ್ಲಿ ಇಬ್ಬರು ವಿದೇಶಿ ಪ್ರಜೆಗಳು ವಾಸವಾಗಿದ್ದುಕೊಂಡು ಎಂಡಿಎಂಎ, ಕ್ರಿಸ್ಟಲ್‌ಅನ್ನು ಮಾರಾಟ ಮಾಡುತ್ತಿದ್ದಾರೆಂಬ ಮಾಹಿತಿ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರಿಗೆ ಲಭಿಸಿದೆ.
ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ನಂತರ ಸ್ಥಳಕ್ಕೆ ದಾವಿಸಿ ವಿದೇಶಿ ಪ್ರಜೆಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ 2 ಕೆಜಿ 585 ಗ್ರಾಂ. ತೂಕದ ಎಂಡಿಎಂಎ ಕ್ರಿಸ್ಟಲ್, ದ್ವಿಚಕ್ರ ವಾಹನ, ಒಂದು ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದು, ಇದರ ಮೌಲ್ಯ 4 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ.ಆರೋಪಿಯು ಬಿಜಿನೆಸ್ ವೀಸಾದಲ್ಲಿ ಭಾರತಕ್ಕೆ ಬಂದು ವಾಪಸ್ ತನ್ನ ದೇಶಕ್ಕೆ ಹೋಗದೆ ನಗರದಲ್ಲಿ ನೆಲೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ದಾಳಿ ವೇಳೆ ಮತ್ತೊಬ್ಬ ವಿದೇಶಿ ಪ್ರಜೆ ತಲೆಮರೆಸಿಕೊಂಡಿದ್ದು, ಆತನ ಬಂಧನ ಕಾರ್ಯ ಮುಂದುವರೆದಿದೆ.ಈ ಕಾರ್ಯಾಚರಣೆಯನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹದಳದ ಅಧಿಕಾರಿ ಮತ್ತು ಸಿಬ್ಬಂದಿ ತಂಡ ಯಶಸ್ವಿಯಾಗಿ ಕೈಗೊಂಡಿದೆ.
ಪತ್ನಿ ಕೊಂದ ಪತಿ :
ಬೆಂಗಳೂರು, ಮೇ 16- ಅಕ್ರಮ ಸಂಬಂಧ ಶಂಕೆ ವ್ಯಕ್ತಪಡಿಸಿ ಪತಿಯೇ ಪತ್ನಿಯನ್ನು ಮರಗೆಲಸಕ್ಕೆ ಬಳಸುವ ಉಳಿಯಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ನಡೆದಿದೆ. ಸುಬ್ಬಯ್ಯನಪಾಳ್ಯದ ನಿವಾಸಿ ಕಲೈವಾಣಿ (47) ಕೊಲೆಯಾದ ದುರ್ದೈವಿ. ಮನೆಗೆಲಸ ಮಾಡಿಕೊಂಡಿದ್ದ ಕಲೈವಾಣಿ ಮೇಲೆ ಪತಿ ರಮೇಶ್ ಅನುಮಾನ ವ್ಯಕ್ತಪಡಿಸಿ ಆಗಾಗ್ಗೆ ಜಗಳವಾಡುತ್ತಿದ್ದ.
ಮರಗೆಲಸ ಮಾಡುತ್ತಿದ್ದ ಬಡಗಿ ರಮೇಶ್ ಇಂದು ಮುಂಜಾನೆ 4 ಗಂಟೆ ಸುಮಾರಿನಲ್ಲಿ ಪತ್ನಿ ಜತೆ ಗಲಾಟೆ ಮಾಡಿ ಮರಗೆಲಸಕ್ಕೆ ಬಳಸುವ ಉಳಿಯಿಂದ ಕಲೈವಾಣಿಗೆ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.ಸುದ್ದಿ ತಿಳಿದು ಬಾಣಸವಾಡಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ಕೈಗೊಂಡಿದ್ದಾರೆ.
ಮನೆಗಳ್ಳತನ :ಮೂವರ ಬಂಧನ, 35 ಲಕ್ಷ ಮೌಲ್ಯದ ಆಭರಣಗಳ ಜಪ್ತಿ
ಮನೆಗಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಸವೇಶ್ವರ ನಗರ ಠಾಣೆ ಪೊಲೀಸರನ್ನು ಬಂಧಿಸಿ 35 ಲಕ್ಷ ರೂ. ಮೌಲ್ಯದ 382 ಗ್ರಾಂ ಚಿನ್ನಾಭರಣ ಹಾಗೂ 286 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಸಾಯಿಬಾಬಾ ದೇವಸ್ಥಾನದ ಮನೆಯೊಂದರಲ್ಲಿ ನಾಲ್ಕು ಮಂದಿ ವಾಸವಿದ್ದು, ತಂದೆ ಕೆಲಸಕ್ಕೆ ಹೋಗಿದ್ದು, ತಾಯಿ ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು. ಅಣ್ಣ ಬಾಲ್ಕನಿಯ ಬಾಗಿಲು ತೆಗೆದು ಒಂದು ರೂಮ್ ನಲ್ಲಿ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಸಹೋದರಿ ವಾಯುವಿಹಾರಕ್ಕೆ ಹೋಗಿದ್ದಾರೆ.
ಆ ಸಂದರ್ಭದಲ್ಲಿ ಬಾಲ್ಕನಿಯಿಂದ ಒಳನುಗ್ಗಿದ ಕಳ್ಳರು ವಾರ್ಡ್‌ರೂಬ್‌ನಲ್ಲಿದ್ದ ಚಿನ್ನಾಭರಣ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದರು.ವಾಯುವಿಹಾರ ಮುಗಿಸಿಕೊಂಡು ಸಹೋದರಿ ಮನೆಗೆ ಬಂದಾಗ ವಾರ್ಡ್‌ರೂಬ್‌ನಲ್ಲಿದ್ದ ಆಭರಣಗಳು ಕಳ್ಳತನವಾಗಿರುವ ಬಗ್ಗೆ ಗಮನಿಸಿ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಕುರುಬರ ಹಳ್ಳಿ ವೃತ್ತದ ಬಳಿ ವ್ಯಕ್ತಿಯೊಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮತ್ತಿಬ್ಬರು ಸಹಚರರೊಂದಿಗೆ ಸೇರಿಕೊಂಡು ಮನೆಗಳ್ಳತನ ಮಾಡಿರುವುದಾಗಿ ತಿಳಿಸಿದ್ದಾರೆ.
ಕಳವು ಮಾಡಿದ ಆಭರಣಗಳ ಪೈಕಿ ಚಿನ್ನದ ಸರವನ್ನು ಮಣಪುರಂ ಅಸೆಟ್ ಫೈನಾನ್ಸ್ ಕಚೇರಿಯಲ್ಲಿ ಗಿರವಿಯಿಟ್ಟಿರುವುದಾಗಿ ಹಾಗೂ ಉಳಿದ ಆಭರಣಗಳನ್ನು ರಾಜಾಜಿನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡವೊಂದರಲ್ಲಿ ಬಚ್ಚಿಟ್ಟಿರುವುದಾಗಿ ತಿಳಿಸಿದ್ದಾರೆ.ಈತನ ಮಾಹಿತಿಯಂತೆ 35 ಲಕ್ಷ ರೂ. ಮೌಲ್ಯದ ಪ್ಲ್ಯಾಟಿನಮ್ ಚೈನ್, 3 ಜೊತೆ ಚಿನ್ನದ ಓಲೆಗಳು, ಸನ್ ಗ್ಲಾಸ್,್ 300 ಅಮೆರಿಕನ್ ಡಾಲರ್, 1.50 ಲಕ್ಷ ರೂ. ಮೌಲ್ಯದ ರೈಮೆಂಡ್ ವೈಲ್ ಕಂಪನಿಯ ವಾಚು, 32.83 ಗ್ರಾಂ ಚಿನ್ನದ ಸರ, 350 ಗ್ರಾಂ ಚಿನ್ನಾಭರಣ ಹಾಗೂ 286 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬ್ಯಾಂಕ್ ಲಾಕರ್‌ನಲ್ಲಿದ್ದ ಚಿನ್ನಾಭರಣ ಕಳವು : ಇಬ್ಬರು ಬ್ಯಾಂಕ್ ಉದ್ಯೋಗಿಗಳ ಸೆರೆ
ಬ್ಯಾಂಕಿನ ಸಹದ್ಯೋಗಿ ಮಹಿಳೆಯೊಂದಿಗೆ ಸೇರಿಕೊಂಡು ಬ್ಯಾಂಕ್ ಲಾಕರ್‌ನಲ್ಲಿಟ್ಟಿದ್ದ ಚಿನ್ನಾಭರಣಗಳನ್ನುಕಳವು ಮಾಡಿದ್ದ ಇಬ್ಬರು ಬ್ಯಾಂಕ್ ನೌಕರರನ್ನು ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿ 16 ಲಕ್ಷ ರೂ. ಬೆಲೆಯ 170 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಬಸವೇಶ್ವರ ನಗರದ ಬ್ಯಾಂಕ್‌ವೊಂದರಲ್ಲಿ ವ್ಯವಸ್ಥಾಪಕರಾಗಿರುವ ಬ್ಯಾಡರಹಳ್ಳಿಯ ನಿವಾಸಿ ಬ್ಯಾಂಕಿನ ಲಾಕರ್ ಪೆಸಿಲಿಟಿಯನ್ನು ಪಡೆದುಕೊಂಡಿದ್ದಾರೆ. ಆ ಲಾಕರ್‌ನಲ್ಲಿ ಚಿನ್ನಾಭರಣಗಳು, ಬ್ಯಾಂಕ್ ಚೆಕ್‌ಬುಕ್, ಡಿಗ್ರಿ ಸೆರ್ಟಿಫಿಕೆಟ್ಸ್ , ಅಂಕಪಟ್ಟಿಗಳು ಇತರ ದಾಖಲಾತಿಗಳನ್ನು ಇಟ್ಟಿದ್ದರು. ಕಳೆದ ಡಿಸೆಂಬರ್ ತಿಂಗಳಿನಲ್ಲಿ ಲಾಕರ್ ಪರಿಶೀಲಿಸಿದಾಗ ದಾಖಲಾತಿಗಳು ಮಾತ್ರ ಇದ್ದು, 200ರಿಂದ 250 ಗ್ರಾಂ ಆಭರಣಗಳು ಇರಲಿಲ್ಲ. ಬ್ಯಾಂಕಿನಲ್ಲಿರುವ ಸಹದ್ಯೋಗಿಗಳ ಪೈಕಿ ಯಾರೋ ಕಳ್ಳತನ ಮಾಡಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿ ಕಲೆಹಾಕಿ ಕಮಲಾ ನಗರದ ಎನ್‌ಜಿಓಎಸ್ ಕಾಲೋನಿಯಲ್ಲಿರುವ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬ್ಯಾಂಕಿನ ಸಹದ್ಯೋಗಿ ಮಹಿಳೆಯೊಂದಿಗೆ ಸೇರಿಕೊಂಡು ಕಳ್ಳತನ ಮಾಡಿರುವುದಾಗಿ ಹೇಳಿದ್ದಾನೆ.ಬ್ಯಾಂಕ್‌ನ ಉದ್ಯೋಗಿ ಮಹಿಳೆಯೊಂದಿಗೆ ಸೇರಿಕೊಂಡು ಬ್ಯಾಂಕ್‌ನಲ್ಲಿದ್ದ ಕೀಗಳನ್ನು ಬಳಸಿ, ಲಾಕರ್ ತೆಗೆದು ಆಭರಣಗಳನ್ನು ಕಳವು ಮಾಡಿ ಪುನಃ ಲಾಕರ್‌ನ್ನು ಯಥಾಸ್ಥಿತಿಯಲ್ಲಿ ಲಾಕ್ ಮಾಡಿರುವುದಾಗಿ ಆರೋಪಿ ತಿಳಿಸಿದ್ದಾನೆ.
ಈ ಇಬ್ಬರು ಆಭರಣ ಕಳವು ಮಾಡಿದ ನಂತರ ಅಗ್ರಹಾರ ದಾಸರಹಳ್ಳಿಯಲ್ಲಿರುವ ಜ್ಯೂವೆಲರಿ ಅಂಗಡಿಯಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿದ್ದು, ಇವರ ಮಾಹಿತಿಯಂತೆ ಜ್ಯುವೆಲರಿ ಅಂಗಡಿಯಿಂದ 170 ಗ್ರಾಂ ಆಭರಣಗಳನ್ನು ವಶಕ್ಕೆ ಪಡೆಯುವಲ್ಲಿ ಇನ್‌ಸ್ಪೆಕ್ಟರ್ ಚಿಕ್ಕಸ್ವಾಮಿ ಹಾಗೂ ಸಿಬ್ಬಂದಿ ತಂಡ ಯಶಸ್ವಿಯಾಗಿದೆ.
ಇಬ್ಬರ ಸೆರೆ: 117 ಗ್ರಾಂ ಚಿನ್ನಾಭರಣ ಜಪ್ತಿ
ಮನೆ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಬಾಣಸವಾಡಿ ಠಾಣೆ ಪೊಲೀಸರು 10 ಲಕ್ಷ ಮೌಲ್ಯದ 117 ಗ್ರಾಂ ಚಿನ್ನಾಭರಣಗಳ ವಶಪಡಿಸಿಕೊಂಡಿ ದ್ದಾರೆ. ಬಾಣಸವಾಡಿ ಪೊಲೀಸ್ ಠಾಣಾ ಸರಹದ್ದಿನ, ಕಲ್ಯಾಣನಗರದ 3ನೇ ಬ್ಲಾಕ್‌ನ ನಿವಾಸಿಯೊಬ್ಬರು ಚೆನ್ನೈಗೆ ತೆರಳಿ ವಾಪಸ್ ಮನೆಗೆ ಬಂದು ನೋಡಿದಾಗ ಮುಂಭಾಗಲಿನ ಬಾಗಿಲು ತೆರೆದಿತ್ತು. ಒಳಗೆ ಪ್ರವೇಶಿಸಿ ನೋಡಿದಾಗ ಕೊಠಡಿಯ ಬೀರುವಿನ ಬಾಗಿಲನ್ನು ಮೀಟಿ ಚಿನ್ನಾಭರಣ, ಬೆಳ್ಳಿಯ ವಸ್ತುಗಳು ಹಾಗೂ ವಾಚುಗಳು ಕಳುವಾಗಿರುವುದನ್ನು ಕಂಡು ನಂತರ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು.
ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡ ಪೊಲೀಸರು ಕಳೆದ ಏ.28ರಂದು ರಾಮಮೂರ್ತಿನಗರ ಪೊಲೀಸ್ ಠಾಣಾ ಸರಹದ್ದಿನ ಕಲ್ಕೆರೆಯಲ್ಲಿ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.ಇವರನ್ನು ವಿಚಾರಣೆಗೊಳಪಡಿ ಸಿದಾಗ ಈ ಪ್ರಕರಣದಲ್ಲಿ ಚಿನ್ನಾಭರಣ, ಬೆಳ್ಳಿಯ ವಸ್ತುಗಳು ಹಾಗೂ ವಾಚುಗಳನ್ನು ಕಳವು ಮಾಡಿರುವುದು ಗೊತ್ತಾಗಿದು ಈ ಪ್ರಕರಣದಲ್ಲಿ ಇನ್ನಿಬ್ಬರು ಬಾಗಿಯಾಗಿರುವುದು ಗೊತ್ತಾಗಿದೆ.
ಎನ್‌ಆರ್‌ಐ ಲೇಔಟ್‌ನಲ್ಲಿ ವಾಸವಿದ್ದ ಒಬ್ಬ ಆರೋಪಿ ಮನೆಯಿಂದ 75 ಗ್ರಾಂ ಚಿನ್ನಾಭರಣಗಳನ್ನು ಮತ್ತು ಮತ್ತೋರ್ವ ಆರೋಪಿ ವಾಸವಿರುವ ರಾಜ್‌ಕುಮಾರ್ ಲೇಔಟ್‌ನ ವಾಸದ ಮನೆಯಿಂದ 42 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದ ಆರೋಪಿಗಳಿಬ್ಬರ ಬಂಧನದಿಂದ ಒಟ್ಟು 117 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರುಗಳ ಪತ್ತೆ ಕಾರ್ಯ ಮುಂದುವರೆದಿದೆ. ಈ ಕಾರ್ಯಾಚರಣೆಯನ್ನು ಪೂರ್ವ ವಿಭಾಗದ ಉಪ- ಪೊಲೀಸ್ ಕಮಿಷನರ್ ದೇವರಾಜ್ ಮಾರ್ಗದರ್ಶನದಲ್ಲಿ ಬಾಣಸವಾಡಿ ಉಪ ವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಉಮಾಶಂಕರ್ ಅವರ ನೇತೃತ್ವದಲ್ಲಿ ಬಾಣಸವಾಡಿ ಪೊಲೀಸ್ ಠಾಣೆಯ ಪೊಲೀಸ್ ಇನ್‌್ಸಪೆಕ್ಟರ್ ಅರುಣ್ ಸಾಳುಂಕೆ ಮತ್ತು ಸಿಬ್ಬಂದಿ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೊಬೈಲ್ ಸರ್ವೀಸ್ ಅಂಗಡಿ ದೋಚಿದ್ದ ಇಬ್ಬರ ಬಂಧನ :
ರಾತ್ರಿ ವೇಳೆ ಮೊಬೈಲ್ ಸರ್ವೀಸ್ ಅಂಗಡಿಯ ಬೀಗ ಹೊಡೆದು ಕಳವು ಮಾಡುತ್ತಿದ್ದ ಹೊರ ರಾಜ್ಯದ ಇಬ್ಬರನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿ 1.40 ಲಕ್ಷ ರೂ. ಮೌಲ್ಯದ 14 ಮೊಬೈಲ್ ಪೋನ್‌ಗಳು ಹಾಗೂ ಲ್ಯಾಪ್‌ಟಾಪ್ ವಶಪಡಿಸಿಕೊಂಡಿದ್ದಾರೆ.ಬಾಗಲೂರು ಮುಖ್ಯ ರಸ್ತೆಯ ಮೊಬೈಲ್ ಸರ್ವೀಸ್ ಅಂಗಡಿಯ ಬೀಗ ಹೊಡೆದು ಮೊಬೈಲ್‌ಗಳು, ಲ್ಯಾಪ್‌ಟಾಪ್, ನೇಕ್ ಬ್ಯಾಂಡ್‌ಗಳು ಹಾಗೂ ಹಣ ಕಳ್ಳತನವಾಗಿದ್ದ ಬಗ್ಗೆ ಅಂಗಡಿ ಮಾಲೀಕ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಕಟ್ಟಿಗೆನಹಳ್ಳಿಯ ಪಿ.ಜಿ. ಸ್ಟ್ರೀಟ್‌ನಲ್ಲಿ ಮೊಬೈಲ್‌ಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಮೊಬೈಲ್ ಸರ್ವೀಸ್ ಅಂಗಡಿಯಲ್ಲಿ ಕಳವು ಮಾಡಿರುವುದಾಗಿ ತಿಳಿಸಿದ್ದಾರೆ. ಆರೋಪಿಗಳ ವಶದಲ್ಲಿದ್ದ 1.40 ಲಕ್ಷ ರೂ. ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಇನ್‌ಸ್ಪೆಕ್ಟರ್ ಕೃಷ್ಣಮೂರ್ತಿ ಮತ್ತು ಸಿಬ್ಬಂದಿ ತಂಡ ಯಶಸ್ವಿಯಾಗಿದೆ.
ಪ್ಲಾಟ್‌ನಲ್ಲಿ ಕಳ್ಳತನ ಮಾಡಿದ್ದ ಮಹಾರಾಷ್ಟ್ರದ ಇಬ್ಬರ ಬಂಧನ
ಅಪಾರ್ಟ್‌ಮೆಂಟ್‌ನ ಪ್ಲಾಟ್‌ವೊಂದರ ಮುಂಬಾಗಿಲನ್ನು ಮೀಟಿ ಒಳನುಗ್ಗಿ ಹಣ ಹಾಗೂ ಆಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ಮಹಾರಾಷ್ಟ್ರ ಮೂಲದ ಇಬ್ಬರನ್ನು ಯಲಹಂಕ ಠಾಣಾ ಪೊಲೀಸರು ಬಂಽಸಿ 16 ಲಕ್ಷ ರೂ. ವೌಲ್ಯದ 180 ಗ್ರಾಂ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ಲಾಟ್‌ನ ನಿವಾಸಿ ಎಂದಿನಂತೆ ಕೆಲಸಕ್ಕೆ ಹೋಗಿದ್ದಾಗ ಕಳ್ಳರು ಪ್ಲಾಟ್‌ನ ಮುಂಬಾಗಿಲು ಮೀಟಿ ಒಳನುಗ್ಗಿ 250 ಗ್ರಾಂ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ಹಣ ಕಳವು ಆಗಿದ್ದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಮಾಹಿತಿ ಕಲೆಹಾಕಿ ಗುಜರಾತ್ ರಾಜ್ಯದ ಸೂರತ್ ಸಿಟಿ ಸೆಂಟ್ರಲ್ ಜೈಲಿನಲ್ಲಿದ್ದ ಇಬ್ಬರು ಆರೋಪಿಗಳನ್ನು ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಪ್ಲಾಟ್‌ನಲ್ಲಿ ಕಳವು ಮಾಡಿರುವುದಾಗಿ ತಿಳಿಸಿದ್ದಾರೆ. ಕಳವು ಮಾಡಿದ ಚಿನ್ನಾಭರಣಗಳನ್ನು ಕರಗಿಸಿ ಗಟ್ಟಿಯನ್ನಾಗಿಸಿ ಮಹಾರಾಷ್ಟ್ರ ರಾಜ್ಯದ ಓಶಿವಾರದಲ್ಲಿರುವ ತನ್ನ ಮನೆಯಲ್ಲಿ ಇಟ್ಟಿರುವುದಾಗಿ ಆರೋಪಿಗಳು ತಿಳಿಸಿದ್ದಾನೆ.
ಇವರ ಮಾಹಿತಿಯಂತೆ ಪೊಲೀಸರು ಮಹಾರಾಷ್ಟ್ರಕ್ಕೆ ತೆರಳಿ 175 ಗ್ರಾಂ ತೂಕದ 15 ಚಿನ್ನದ ಗಟ್ಟಿಗಳು, 5 ಗ್ರಾಂನ ಎರಡು ಚಿನ್ನದ ಉಂಗುರಗಳನ್ನು ವಶಪಡಿಸಿಕೊಂಡು ಮತ್ತೆ ಆರೋಪಿಗಳಿಬ್ಬರನ್ನು ಗುಜರಾತ್ ರಾಜ್ಯದ ಸೂರತ್ ಸಿಟಿ ಸೆಂಟ್ರಲ್ ಜೈಲಿಗೆ ವಾಪಸ್ ಕಳುಹಿಸಿದ್ದಾರೆ.