ನವದೆಹಲಿ, ಮಾ.4 (ಪಿಟಿಐ) ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಪೋಟದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‍ಐಎ) ಹಸ್ತಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಾರ್ಚ್ 1 ರಂದು ಪೂರ್ವ ಬೆಂಗಳೂರಿನ ಇಂದಿರಾನಗರದ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಸ್ಪೋಟ ಸಂಭವಿಸಿ ಕನಿಷ್ಠ ಒಂಬತ್ತು ಜನರು ಗಾಯಗೊಂಡಿದ್ದರು.
ಮೂಲಗಳ ಪ್ರಕಾರ ಸ್ಪೋಟದ ತನಿಖೆಯನ್ನು ಎನ್‍ಐಎಗೆ ಹಸ್ತಾಂತರಿಸಲಾಗಿದೆ. ಟೋಪಿ, ಮುಖವಾಡ ಮತ್ತು ಕನ್ನಡಕ ಧರಿಸಿದ ವ್ಯಕ್ತಿ ಪ್ರಕರಣದ ಪ್ರಮುಖ ಶಂಕಿತನಾಗಿದ್ದು, ಇನ್ನೂ ಪತ್ತೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಮಂಗಳೂರು ಕುಕ್ಕರ್ ಬ್ಲಾಸ್ಟ್ ಹಾಗೂ ಶಿವಮೊಗ್ಗದ ನದಿ ತೀರದಲ್ಲಿ ನಡೆಸಿದ್ದ ಟ್ರಯಲ್ ಬ್ಲಾಸ್ಟ್ ಪ್ರಕರಣದ ಹೊಣೆಯನ್ನು ಸಿರಿಯಾ ಮೂಲದ ಐಸಿಸ್ ಸಂಘಟನೆ ಒಪ್ಪಿಕೊಂಡಿತ್ತು. ಆದರೆ, ಬೆಂಗಳೂರಿನ ರಾಮೇಶ್ವರಂ ಕೆಫೆ ಪ್ರಕರಣದ ಹೊಣೆಯನ್ನು ಇದುವರೆಗೂ ಯಾವ ಸಂಘಟನೆಗಳು ಒಪ್ಪಿಕೊಂಡಿಲ.
ಆದರೂ ಮೇಲಿನ ಎರಡು ಪ್ರಕರಣಗಳಿಗೂ ರಾಮೇಶ್ವರಂ ಪ್ರಕರಣಕ್ಕೂ ಸಾಮ್ಯತೆ ಇರುವುದನ್ನು ಮನಗಂಡಿದ್ದ ಬೆಂಗಳೂರು ಪೊಲೀಸರು ಆರೋಪಿ ಬಂಧನಕ್ಕೆ ಇನ್ನಿಲ್ಲದ ಕಾರ್ಯಾಚರಣೆ ನಡೆಸುತ್ತಿವೆ.
ಆರೋಪಿ ತಮಿಳುನಾಡು ಇಲ್ಲವೇ ಕೇರಳಕ್ಕೆ ಪರಾರಿಯಾಗಿರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹಲವಾರು ವಿಶೇಷ ಪೊಲೀಸ್ ತಂಡಗಳು ನೆರೆ ರಾಜ್ಯಕ್ಕೆ ದೌಡಾಯಿಸಿ ಆರೋಪಿ ಎಡೆಮುರಿ ಕಟ್ಟಲು ಹರಸಾಹಸ ನಡೆಸುತ್ತಿವೆ.
ರಾಮೇಶ್ವರಂ ಕೆಫೆಗೆ ರಾಷ್ಟ್ರೀಯ ಭದ್ರತಾ ದಳದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರೂ ಆದರೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಪ್ರಕರಣ ಬೇಧಿಸಲು ನಮ ಪೊಲೀಸರೇ ಸಮರ್ಥರಾಗಿದ್ದಾರೆ ಎಂದು ಹೇಳಿಕೊಂಡಿದ್ದರು. ಆದರೆ, ಇದೀಗ ಪ್ರಕರಣದ ಗಂಭೀರತೆ ಅರಿತ ನಂತರ ರಾಮೇಶ್ವರಂ ಕೆಫೆ ಸ್ಪೋಟದ ಪ್ರಕರಣವನ್ನು ಎನ್‍ಐಎಗೆ ಹಸ್ತಾಂತರಿಸಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.