ನವದೆಹಲಿ,ಜ.2-ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿ ಖಂಡಿಸಿ ಪ್ರತಿಭಟನೆ ನಡೆಸಿ ಢಾಕಾ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಹಿಂದೂ ಸನ್ಯಾಸಿ ಚಿನಯ್ ಕೃಷ್ಣ ದಾಸ್ ಬ್ರಹಚಾರಿಯವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಜಾಮೀನು ಕೋರಿ ಚಟ್ಟೋಗ್ರಾಮ್ ನ್ಯಾಯಾಲಯಕ್ಕೆ ಚಿನಯ್ ಕೃಷ್ಣ ದಾಸ್ ಬ್ರಹಚಾರಿ ಅರ್ಜಿ ಸಲ್ಲಿಸಿದ್ದರು. ಢಾಕಾದಿಂದ ಬಂದಿದ್ದ ಸುಪ್ರೀಂಕೋರ್ಟ್ನ 11 ವಕೀಲರ ತಂಡವು ಅರ್ಧಗಂಟೆಗೂ ಹೆಚ್ಚು ಕಾಲ ವಾದ ಮಂಡಿಸಿದ್ದರು. ಎರಡೂ ಕಡೆಯ ವಾದವನ್ನು ಆಲಿಸಿದ ನಂತರ ನ್ಯಾಯಾಧೀಶ ಎಂ.ಡಿ ಸೈಫುಲ್ ಇಸ್ಲಾಂ ಅವರ ಪೀಠ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
ಢಾಕಾದಿಂದ ಚಟ್ಟೋಗ್ರಾಮ್ಗೆ ತೆರಳಿದ್ದ ಸುಪ್ರೀಂ ಕೋರ್ಟ್ನ 11 ವಕೀಲರ ತಂಡವು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ಮೆಟೋಪಾಲಿಟನ್ ಸೆಷನ್‌್ಸ ನ್ಯಾಯಾಧೀಶ ಎಂಡಿ ಸೈಫುಲ್ ಇಸ್ಲಾಂ ಅವರು ಸುಮಾರು 30 ನಿಮಿಷಗಳ ಕಾಲ ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ ಹಿಂದೂ ಸನ್ಯಾಸಿ ಚಿನಯ್ ಕೃಷ್ಣ ದಾಸ್ ಬ್ರಹಚಾರಿ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು ಎಂದು ಢಾಕಾ ಮೂಲದ ದಿ ಡೈಲಿ ಸ್ಟಾರ್ ವರದಿ ಮಾಡಿದೆ.
ಚಟ್ಟೋಗ್ರಾಮ್ನ ನ್ಯಾಯಾಲಯವು ಜಾಮೀನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಹೈಕೋರ್ಟ್ಗೆ ಮೇಲನವಿ ಸಲ್ಲಿಸಲು ನಿರ್ಧಾರ ಮಾಡಲಾಗಿದೆ ಎಂದು ಚಿನಯ್ ಅವರ ವಕೀಲ ಭಟ್ಟಾಚಾರ್ಜಿ ಡೈಲಿ ಸ್ಟಾರ್ಗೆ ತಿಳಿಸಿದ್ದಾರೆ.
ನಾವು ನ್ಯಾಯಾಲಯದ ಮುಂದೆ ನಮ ವಾದವನ್ನು ಮಂಡಿಸಿದ್ದೇವೆ. ಆದರೆ ಪ್ರಾಸಿಕ್ಯೂಷನ್ ಜಾಮೀನನ್ನು ವಿರೋಧಿಸಿತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಜಾಮೀನು ತಿರಸ್ಕರಿಸಿದೆ. ನಾವು ಉನ್ನತ ನ್ಯಾಯಾಲಯಕ್ಕೆ ತೆರಳಿ ಮುಂದಿನ ಕ್ರಮವನ್ನು ತೆಗೆದುಕೊಳ್ಳುತ್ತೇವೆ ಎಂದು ಬಾಂಗ್ಲಾದೇಶದ ಮಾಜಿ ಡೆಪ್ಯುಟಿ ಅಟಾರ್ನಿ ಜನರಲ್ ಅಪೂರ್ಬ ಕುಮಾರ್ ಭಟ್ಟಾಚಾರ್ಯ ತಿಳಿಸಿದ್ದಾರೆ.
ತಾಲಿಬಾನ್ ಮೂಲಭೂತವಾದಿಗಳು ಸಾರ್ವಜನಿಕವಾಗಿ ಥಳಿಸುವ ಬೆದರಿಕೆ ಹಾಕಿದ್ದರಿಂದ ಚಟ್ಟೋಗ್ರಾಮ್ ನ್ಯಾಯಾಲಯದಲ್ಲಿ ಹಿಂದೂ ಸಂತ ಚಿನಯ್ ದಾಸ್ ಅವರನ್ನು ಪ್ರತಿನಿಧಿಸಲು ಯಾವುದೇ ವಕೀಲರು ಮುಂದಾಗದ ಕಾರಣ ಒಂದು ತಿಂಗಳ ನಂತರ ಇಂದು ನಡೆದ ವಿಚಾರಣೆಯನ್ನು ಪೊಲೀಸ್ ಬಿಗಿ ಭದ್ರತೆಯಲ್ಲಿ ನಡೆಸಲಾಯಿತು.
ಚಿನಯ್ ಕೃಷ್ಣ ದಾಸ್ ಅವರ ಹಿಂದಿನ ವಕೀಲ ರವೀಂದ್ರನಾಥ್ ಘೋಷ್ ಅವರು ಡಿಸೆಂಬರ್ನಲ್ಲಿ ಚಿನಯ್ಗೆ ಕಾನೂನು ಸಹಾಯ ಮಾಡಲು ಮುಂದಾಗಿ ಜಾಮೀನು ಅರ್ಜಿ ಸಲ್ಲಿಸಲು ಹೋದಾಗ ನ್ಯಾಯಾಲಯದ ಹೊರಗೆ ಅವರ ಮೇಲೆ ಹಲ್ಲೆ ನಡೆಸಲಾಗಿತ್ತು.
75 ವರ್ಷದ ಹಿರಿಯ ವಕೀಲ ಘೋಷ್ ಅವರು ನಂತರ ಹಠಾತ್ ಎದೆ ನೋವು ಅನುಭವಿಸಿ ಕೋಲ್ಕತ್ತಾದ ಸೇಠ್ ಸುಖಲಾಲ್ ಕರ್ನಾನಿ ಸಾರಕ ಆಸ್ಪತ್ರೆಗೆ ದಾಖಲಾಗಿದ್ದರು. ವಿಚಾರಣೆ ವೇಳೆ ನೂರಾರು ವಕೀಲರು ನ್ಯಾಯಾಲಯದ ಆವರಣದಲ್ಲಿ ಜಮಾಯಿಸಿ ಗೊಂದಲ ಸೃಷ್ಟಿಸಿದ್ದರು.
ಶೇಖ್ ಹಸೀನಾ ಅವರ ಆಡಳಿತದ ಪತನದ ನಂತರ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ವ್ಯಾಪಕ ದಾಳಿಯನ್ನು ಖಂಡಿಸಿ ಚಿನಯ್ ದಾಸ್ ಅಲ್ಪಸಂಖ್ಯಾತರಿಗೆ, ವಿಶೇಷವಾಗಿ ಹಿಂದೂಗಳ ಪರ ಧ್ವನಿಯೆತ್ತಿ ಭಾರೀ ಸುದ್ದಿಯಾಗಿದ್ದರು. ಪ್ರಚೋದನಕಾರಿ ಭಾಷಣದ ಆರೋಪದ ಮೇಲೆ ಚಿನಯ್ ದಾಸ್ ಅವರನ್ನು ಢಾಕಾ ಪೊಲೀಸ್ ಡಿಟೆಕ್ಟಿವ್ ಬ್ರಾಂಚ್ ನವೆಂಬರ್ 25 ರಂದು ದೇಶದೋಹದ ಆರೋಪದಡಿ ಬಂಧಿಸಲಾಗಿತ್ತು.