Monday, November 11, 2024
Homeಅಂತಾರಾಷ್ಟ್ರೀಯ | Internationalಬಾಂಗ್ಲಾ ಹಿಂಸಾಚಾರದಲ್ಲಿ 105 ಮಂದಿ ಬಲಿ

ಬಾಂಗ್ಲಾ ಹಿಂಸಾಚಾರದಲ್ಲಿ 105 ಮಂದಿ ಬಲಿ

ಢಾಕಾ,ಜು.20- ಬಾಂಗ್ಲಾದೇಶದಲ್ಲಿ ಹಲವು ವಾರಗಳಿಂದ ನಡೆಯುತ್ತಿರುವ ಪ್ರತಿಭಟನೆಗಳು ಹಿಂಸಾತ್ಮಕ ಸ್ವರೂಪ ಪಡೆದಿದ್ದು, ಇದೀಗ ಉಲ್ಬಣಿಸಿದ್ದು, ಅಲ್ಲಿರುವ ಸುಮಾರು 300 ಭಾರತೀಯ ವಿದ್ಯಾರ್ಥಿಗಳು ಸ್ವದೇಶಕ್ಕೆ ಮರಳಿದ್ದಾರೆ. ಹಿಂಸಾಚಾರದಲ್ಲಿ 105 ಮಂದಿ ಮೃತಪಟ್ಟಿದ್ದಾರೆ. ದೇಶವಿಡೀ ಕರ್ಫ್ಯೂ ಹಾಕಲಾಗಿದೆ.

ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈಶಾನ್ಯ ಗಡಿ ದಾಟಿ ತವರಿಗೆ ತಲುಪಿದ್ದಾರೆ. ಮಾಹಿತಿ ಪ್ರಕಾರ, ಬಾಂಗ್ಲಾದೇಶದಲ್ಲಿ 15 ಸಾವಿರ ಮಂದಿ ಭಾರತೀಯರು ಇದ್ದಾರೆ ಎಂದು ಹೇಳಲಾಗಿದೆ. ಬಂದವರಲ್ಲಿ ಬಹುತೇಕರು ಎಂಬಿಬಿಎಸ್ ವ್ಯಾಸಂಗಕ್ಕೆ ತೆರಳಿದ್ದರು. ಅಲ್ಲದೇ ಉತ್ತರ ಪ್ರದೇಶ, ಹರಿಯಾಣ, ಮೇಘಾಲಯ ಮತ್ತು ಜಮ್ಮು ಮತ್ತು ಕಾಶ್ಮೀರ ಮೂಲದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು ಎಂದು ವರದಿಯಾಗಿದೆ.

ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ವ್ಯವಸ್ಥೆಯಲ್ಲಿ ಸುಧಾರಣೆಗೆ ಒತ್ತಾಯಿಸಿ ಹಲವಾರು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಹಿಂಸಾಸ್ವರೂಪ ಪಡೆದಿದ್ದು, ಸಾವು-ನೋವಿಗೆ ಕಾರಣವಾಗಿದೆ. ಕನಿಷ್ಠ ಮೂರು ವಾರಗಳಿಂದ ನಡೆಯುತ್ತಿರುವ ಪ್ರತಿಭಟನೆಗಳು ಕಳೆದ ಸೋಮವಾರ ಢಾಕಾ ವಿಶ್ವವಿದ್ಯಾಲಯದಲ್ಲಿ ಹಿಂಸಾಚಾರ ನಡೆದಾಗ ಉಲ್ಬಣಗೊಂಡಿತು. ಮರುದಿನ ಆರು ಜನರು ಸಾವನ್ನಪ್ಪಿದ್ದರು, ನಂತರ ದೇಶಾದ್ಯಂತ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಸರ್ಕಾರವು ಆದೇಶ ನೀಡಿತು.

ಭಾರತಕ್ಕೆ ಹಿಂದಿರುಗಿದ ಅನೇಕ ವಿದ್ಯಾರ್ಥಿಗಳು ಎಂಬಿಬಿಎಸ್ ಪದವಿಯನ್ನು ಪಡೆಯುತ್ತಿದ್ದರು ಮತ್ತು ಹೆಚ್ಚಿನ ವಿದ್ಯಾರ್ಥಿಗಳು ಉತ್ತರ ಪ್ರದೇಶ, ಹರಿಯಾಣ, ಮೇಘಾಲಯ ಮತ್ತು ಜಮ್ಮು ಮತ್ತು ಕಾಶ್ಮೀರದಿಂದ ಬಂದವರಾಗಿದ್ದಾರೆ. ವಿದ್ಯಾರ್ಥಿಗಳು ಮರಳಲು ಎರಡು ಪ್ರಮುಖ ಮಾರ್ಗಗಳಾದ ತ್ರಿಪುರಾದ ಅಗರ್ತಲಾ ಬಳಿಯ ಅಖೌರಾದಲ್ಲಿರುವ ಅಂತರಾಷ್ಟ್ರೀಯ ಭೂ ಬಂದರು ಮತ್ತು ಮೇಘಾಲಯದ ದೌಕಿಯಲ್ಲಿರುವ ಅಂತರರಾಷ್ಟ್ರೀಯ ಭೂ ಬಂದರು ಬಳಸಲಾಗಿದೆ.

ಭಾರತೀಯ ವಿದ್ಯಾರ್ಥಿಗಳು ಪರಿಸ್ಥಿತಿ ಶಮನಗೊಳ್ಳಲು ಎದುರು ನೋಡುತ್ತಿದ್ದರು. ಆದರೆ ಅಂತಿಮವಾಗಿ ಬಾಂಗ್ಲಾದೇಶವನ್ನು ತಾತ್ಕಾಲಿಕವಾಗಿ ತೊರೆಯಲು ನಿರ್ಧರಿಸಿದರು. ಏಕೆಂದರೆ ಇಂಟರ್ನೆಟ್ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ದೂರವಾಣಿ ಸೇವೆಗಳು ಸಹ ತೀವ್ರವಾಗಿ ಪರಿಣಾಮ ಬೀರಿದೆ. ಈ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಭಾರತೀಯ ವಿದ್ಯಾರ್ಥಿಗಳು ತವರಿಗೆ ವಾಪಸ್ ಆಗಿದ್ದಾರೆ.

ಹಿಂಸಾಚಾರಕ್ಕೆ ಕಾರಣವೇನು? :
ಬಾಂಗ್ಲಾದೇಶದಲ್ಲಿ ಪ್ರಸ್ತುತ ಕೋಟಾ ವ್ಯವಸ್ಥೆ ಪ್ರಕಾರ ಸರ್ಕಾರಿ ಉದ್ಯೋಗಗಳಲ್ಲಿ ಶೇ.56 ಕಾಯ್ದಿರಿಸಲಾಗಿದೆ. ಇದರಲ್ಲಿ 1971ರ ವಿಮೋಚನಾ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರಿಗೆ ಶೇ.30, ಹಿಂದುಳಿದ ಜಿಲ್ಲೆಗಳವರಿಗೆ ಶೇ.10, ಮಹಿಳೆಯರಿಗೆ ಶೇ.10, ಜನಾಂಗೀಯ ಅಲ್ಪಸಂಖ್ಯಾತರಿಗೆ ಶೇ.5 ಹಾಗೂ ಅಂಗವಿಕಲರಿಗೆ ಶೇ.1 ಮೀಸಲಾತಿ ಕಲ್ಪಿಸಲಾಗಿದೆ. ವಿಮೋಚನಾ ಹೋರಾಟದ ಕುಟುಂಬಸ್ಥರಿಗೆ ಕಲ್ಪಿಸಿರುವ ಶೇ.30 ಮೀಸಲಾತಿ ರದ್ದು ಪಡಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು. ಈ ಬೇಡಿಕೆಯನ್ನು ಪ್ರಧಾನಿಗಳು ತಿರಸ್ಕರಿಸಿದ್ದರಿಂದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.

ಏತನ್ಮಧ್ಯೆ, ಭಾರತ ಸರ್ಕಾರ ನಿನ್ನೆ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಢಾಕಾದ ಆಂತರಿಕ ವಿಷಯ ಎಂದು ಬಣ್ಣಿಸಿದೆ. ಆದರೆ ಅಲ್ಲಿ ವಾಸಿಸುವ 15,000 ಭಾರತೀಯರ ಸುರಕ್ಷತೆಗಾಗಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಿದೆ.

ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ವ್ಯವಸ್ಥೆಯಲ್ಲಿ ಸುಧಾರಣೆಗೆ ಒತ್ತಾಯಿಸಿ ಹಲವಾರು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಹಿಂಸಾ ಸ್ವರೂಪ ಪಡೆದು ದೇಶದಲ್ಲಿ ಉಂಟಾಗಿರುವ ಗಲಭೆಯ ವಾತಾವರಣದ ದುಷ್ಪರಿಣಾಮ ನೇರವಾಗಿ ಸಾಮಾನ್ಯ ಜನರ ಬದುಕಿನ ಮೇಲೆ ತಟ್ಟಿದೆ. ನಿನ್ನೆಯೂ ಬಾಂಗ್ಲಾದೇಶದಲ್ಲಿ ಘರ್ಷಣೆಗಳು ಮತ್ತು ಹಿಂಸಾತ್ಮಕ ಪ್ರತಿಭಟನೆಗಳು ಮುಂದುವರೆದಿದ್ದು, ಹಲವಾರು ಜನರು ನರಸಿಂಗಡಿ ಕೇಂದ್ರ ಕಾರಾಗೃಹದ ಮೇಲೆ ದಾಳಿ ಮಾಡಿ ನೂರಾರು ಕೈದಿಗಳನ್ನು ಹೊರಹಾಕಿದ್ದು, ನಂತರ ಅವರು ಬೆಂಕಿ ಹಚ್ಚಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

1971 ರಲ್ಲಿ ಪಾಕಿಸ್ತಾನದಿಂದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಯೋಧರ ಸಂಬಂ„ಕರಿಗೆ ಕೆಲವು ಸಾರ್ವಜನಿಕ ವಲಯದ ಉದ್ಯೋಗಗಳನ್ನು ಮೀಸಲಿಡುವ ವ್ಯವಸ್ಥೆಯ ವಿರುದ್ಧ ಢಾಕಾ ಮತ್ತು ಇತರ ನಗರಗಳಲ್ಲಿನ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಕುರಿತು ಹಲವಾರು ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ ಅನ್ನೋದು ಗಮನಾರ್ಹ.

ಈ ವ್ಯವಸ್ಥೆಯು ತಾರತಮ್ಯದಿಂದ ಕೂಡಿದೆ ಮತ್ತು ಅವಾಮಿ ಲೀಗ್ ಪಕ್ಷವು ವಿಮೋಚನಾ ಚಳವಳಿಯ ನೇತೃತ್ವ ವಹಿಸಿದ್ದ ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರ ಬೆಂಬಲಿಗರಿಗೆ ಅನುಕೂಲಕರವಾಗಿದೆ ಎಂದು ಅವರು ವಾದಿಸುತ್ತಾರೆ. ಇದನ್ನು ಮೆರಿಟ್ ಆಧಾರಿತ ವ್ಯವಸ್ಥೆಯಾಗಿ ಪರಿವರ್ತಿಸಬೇಕು ಎಂದು ವಿದ್ಯಾರ್ಥಿಗಳು ಬಯಸುತ್ತಾರೆ. ಅದೇ ಸಮಯದಲ್ಲಿ, ಹಸೀನಾ ಮೀಸಲಾತಿ ವ್ಯವಸ್ಥೆಯನ್ನು ಸಮರ್ಥಿಸಿಕೊಂಡಿದ್ದು, ಯುದ್ಧಕ್ಕೆ ಕೊಡುಗೆ ನೀಡಿದವರನ್ನು ಅವರ ರಾಜಕೀಯ ಸಂಬಂಧವಿಲ್ಲದೆ ಗೌರವಿಸಬೇಕು ಎಂದು ಹೇಳಿದ್ದಾರೆ.

RELATED ARTICLES

Latest News