ಕೋಲ್ಕತ್ತಾ,ಫೆ.17- ವೈದ್ಯಕೀಯ ವೀಸಾದಡಿ ಗಡಿ ದಾಟಿ ಭಾರತಕ್ಕೆ ಬಂದು ಇಲ್ಲಿನ ಯುವಕರನ್ನು ಮದುವೆಯಾಗಿ ಅವರ ವಿರುದ್ಧ ಕೌಟುಂಬಿಕ ಹಿಂಸಾಚಾರದ ಪ್ರಕರಣ ಗಳನ್ನು ಹೂಡಿ ಬ್ಲಾಕ್ಮೇಲ್ ಮಾಡುತ್ತಿದ್ದ ಬಾಂಗ್ಲಾ ದೇಶದ ಮಹಿಳೆಯನ್ನು ಪಶ್ಚಿಮ ಬಂಗಾಳದ ಪೊಲೀಸರು ಬಂಧಿಸಿದ್ದಾರೆ.
ಸಹನ ಸಾಧಿಕ್ (32) ಬಂಧಿತ ಬಾಂಗ್ಲದೇಶದ ಮಹಿಳೆ. ಕಳೆದ ನಾಲ್ಕು ವರ್ಷಗಳಲ್ಲಿ 6 ಬಾರಿ ಭಾರತಕ್ಕೆ ಬಂದಿರುವ ಈಕೆ ನಕಲಿ ಗುರುತಿನಚೀಟಿಗಳನ್ನು ಬಳಸಿ ನಾಲ್ವರನ್ನು ವಿವಾಹವಾಗಿದ್ದಳು. ಮುಖ್ಯವಾಗಿ ಈ ಯಾವ ಮದುವೆಗಳು ಅಧಿಕೃವಾಗಿ ನೋಂದಾಯಿಸಲ್ಪಟ್ಟಿಲ್ಲ.
ವಿವಾಹದ ಬಳಿಕ ತನ್ನನ್ನು ಮದುವೆಯಾದ ಪುರುಷರ ವಿರುದ್ಧ ಹಲವು ಹಿಂಸಾಚಾರದ ಪ್ರಕರಣಗಳನ್ನು ದಾಖಲಿಸಿ ಬ್ಲಾಕ್ಮೇಲ್ ತಂತ್ರ ಅನುಸರಿಸುತ್ತಿದ್ದಳು.
ಈಕೆಯನ್ನು ಮದುವೆಯಾದ ನಾಲ್ವರೂ ಕೋಲ್ಕತ್ತಾದ ರಾಜರ್ಹತ್ ಮತ್ತು ನ್ಯೂ ಟೌನ್ ಪ್ರದೇಶದವರೇ ಆಗಿದ್ದು, ಇವರೆಲ್ಲರ ವಿರುದ್ಧ ಕೌಟುಂಬಿಕ ಹಿಂಸಾಚಾರದ ಪ್ರಕರಣಗಳನ್ನು ದಾಖಲಿಸಿದ್ದಾಳೆ.
ಕಳೆದ ಅಕ್ಬೋಬರ್ನಲ್ಲಿ ಮತ್ತೊಂದು ಮದುವೆಯಾದ ಈಕೆ ಪತಿಯ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನ್ನ ಅಶ್ಲೀಲ ಛಾಯಾಚಿತ್ರಗಳನ್ನು ತೆಗೆದುಕೊಂಡಿದ್ದು, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಳು.
ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರಿಗೆ, ಈಕೆ ಈ ಹಿಂದೆಯೂ ಹಲವಾರು ಠಾಣೆಗಳಲ್ಲಿ ಹಲವರ ವಿರುದ್ದ ಈ ರೀತಿಯ ದೂರುಗಳನ್ನು ನೀಡಿರುವುದು ಗೊತ್ತಾಗಿದೆ.
ಆಕೆಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಈಕೆಯ ಬಾಂಗ್ಲಾದೇಶದಿಂದ ವೈದ್ಯಕೀಯ ವೀಸಾದಡಿ ಭಾರತಕ್ಕೆ ಬಂದು ಇಲ್ಲಿನ ಯುವಕರನ್ನು ವಂಚಿಸಿ ಮದುವೆಯಾಗುತ್ತಿದ್ದಳು. ಬಳಿಕ ಹಣಕಾಸಿಗಾಗಿ ಅವರ ವಿರುದ್ಧ ತಮ ಮೇಲೆ ದೌರ್ಜನ್ಯ, ಹಿಂಸಾಚಾರ ನಡೆದಿದೆ ಎಂದು ದೂರು ದಾಖಲಿಸುತ್ತಿದ್ದಳು ಎಂಬುದು ತಿಳಿದುಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.