ಬೆಂಗಳೂರು,ಮೇ 21- ಎಲ್ಲಾ ಬ್ಯಾಂಕ್ ಸಿಬ್ಬಂದಿಗಳು ಗ್ರಾಹಕರೊಂದಿಗೆ ಗೌರವಯುತವಾಗಿ ನಡೆದುಕೊಳ್ಳಬೇಕು ಮತ್ತು ಸ್ಥಳೀಯ ಭಾಷೆಯನ್ನು ಮಾತನಾಡಲು ಪ್ರಯತ್ನಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಆನೇಕಲ್ ತಾಲ್ಲೂಕು ಸೂರ್ಯನಗರದಲ್ಲಿರುವ ಎಸ್‌ಬಿಐ ಶಾಖಾ ವ್ಯವಸ್ಥಾಪಕರು ಕನ್ನಡ ಮಾತನಾಡುವುದಿಲ್ಲ ಎಂದು ಹೇಳಿರುವುದನ್ನು ಮುಖ್ಯಮಂತ್ರಿ ಬಲವಾಗಿ ಖಂಡಿಸಿದ್ದಾರೆ.
ಕನ್ನಡ ಅಥವಾ ಇಂಗ್ಲೀಷ್‌ನಲ್ಲಿ ಮಾತನಾಡಲು ನಿರಾಕರಿಸಿರುವ ಬ್ಯಾಂಕ್ ವ್ಯವಸ್ಥಾಪಕರ ನಡವಳಿಕೆ ಆಕ್ಷೇಪಾರ್ಹವಾದುದು. ಎಸ್‌ಬಿಐ ತ್ವರಿತ ಕ್ರಮ ಕೈಗೊಂಡು ಸದರಿ ವ್ಯವಸ್ಥಾಪಕರನ್ನು ವರ್ಗಾವಣೆ ಮಾಡಿರುವುದು ಪ್ರಶಂಸನೀಯ. ಈ ವಿಚಾರ ಇಲ್ಲಿಗೆ ಮುಗಿದ ಅಧ್ಯಾಯ ಎಂದು ಪರಿಗಣಿಸಬಹುದು ಎಂದಿದ್ದಾರೆ.
ಆದಾಗ್ಯೂ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕಿದೆ. ಎಲ್ಲಾ ಬ್ಯಾಂಕ್ ಸಿಬ್ಬಂದಿಗಳೂ ಗ್ರಾಹಕರೊಂದಿಗೆ ಗೌರವಯುತವಾಗಿ ನಡೆದುಕೊಳ್ಳಬೇಕು. ಸ್ಥಳೀಯ ಭಾಷೆಯಲ್ಲಿ ಮಾತನಾಡಲು ಪ್ರಯತ್ನಿಸಬೇಕು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎಲ್ಲಾ ಬ್ಯಾಂಕ್ ಸಿಬ್ಬಂದಿಗಳಿಗೆ ಭಾಷಾ ಸೂಕ್ಷ್ಮತೆಯಲ್ಲಿ ತರಬೇತಿ ಕೊಡಿಸಬೇಕಿದೆ. ಸ್ಥಳೀಯ ಭಾಷೆ ಮತ್ತು ಜನರನ್ನು ಗೌರವಿಸುವುದನ್ನು ಹೇಳಿಕೊಡಬೇಕು ಎಂದು ಆಗ್ರಹಿಸಿದ್ದಾರೆ.