ಹುಬ್ಬಳ್ಳಿ, ಮೇ 17- ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲಿಕ್ಕೆ ಆಗಲ್ಲ ಅಂದ್ರೆ ಜಾಗ ಖಾಲಿ ಮಾಡಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿನ ಕೊಲೆಯಾದ ಅಂಜಲಿ ನಿವಾಸಕ್ಕೆ ಭೇಟಿ ನೀಡಿದ ನಂತರ ಅವರು ಸುದ್ದಿಗಾರರ ಜೊತೆಗೆ ಮಾತನಾಡಿದರು.
ಅಂಜಲಿ ಕೊಲೆ ಆಘಾತಕಾರಿ ಬೆಳವಣಿಗೆ ಆಗಿದೆ. ಆರೋಪಿಗಳಿಗೆ ಕಾನೂನಿನ ಭವೂ ಇಲ್ಲ, ಪೊಲೀಸರ ಭಯವೂ ಇಲ್ಲದಂತಾಗಿದ್ದು, ಏನು ಮಾಡಿದರೂ ನಡೆಯುತ್ತೆ ಅನ್ನೋ ಭಾವನೆ ಮೂಡಿದೆ. ನೇಹಾ ಪ್ರಕರಣ ನಡೆದ ನಂತರವೂ ಪೊಲೀಸರು ಎಚ್ಚೆತ್ತುಕೊಂಡಿಲ್ಲ. ಸಿಎಂ ಸೇರಿ ಇತರ ನಾಯಕರು ದೊಡ್ಡ ದೊಡ್ಡ ಮಾತುಗಳನ್ನಾಡಿದರು. ಏನೂ ಮಾಡದೆ ಇರೋ ಪರಿಣಾಮ ಈ ಹತ್ಯೆ ನಡೆದಿದ್ದು ಆರೋಪಿ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಂಡಿದ್ದರೆ ಈ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ ಎಂದರು.
ಪೊಲೀಸರೇ ಪರೋಕ್ಷವಾಗಿ ಇಂತಹ ಪರಿಸ್ಥಿತಿ ನಿರ್ಮಾಣಕ್ಕೆ ಕಾರಣ. ಪೊಲೀಸ್ ಠಾಣೆಗಳು ಇರುವುದಾದರೂ ಯಾಕೆ…? ಪ್ರಶ್ನೆ ಮಾಡಿದ ಅವರು ವಿರೋಧ ಪಕ್ಷದವರು ಹೇಳಿಕೆ ಕೊಟ್ಟರೆ ರಾಜಕೀಯ ಅಂತಾರೆ, ಇಷ್ಟೆಲ್ಲಾ ಕೊಲೆ ನಡೆದರೂ ನಾವು ಬಾಯಿ ಮುಚ್ಕೊಂಡು ಕೂರಬೇಕೇ? ಎಂದು ಪ್ರಶ್ನಿಸಿದ ಅವರು, ನಿಮ ಕೈಯಲ್ಲಿ ಕಾನೂನು ಕಾಪಾಡಲು ಆಗೋಲ್ಲ ಅಂದ್ರೆ ಕೂಡಲೇ ಜಾಗ ಖಾಲಿ ಮಾಡಿ ಎಂದರು.
ಪೊಲೀಸರ ಅಮಾನತಿನಿಂದ ಈ ಪ್ರಕರಣಕ್ಕೆ ನ್ಯಾಯ ಸಿಗುತ್ತೆಯೇ..? ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ರಚನೆ ಮಾಡಬೇಕು. ಆರೋಪಿಗೆ ಗಲ್ಲು ಶಿಕ್ಷೆ ಆಗುವಂತೆ ಕ್ರಮ ಕೈಗೊಳ್ಳಬೇಕು. ಅಂಜಲಿ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ನಮ ಹೋರಾಟವನ್ನು ಇಲ್ಲಿಗೇ ಕೈ ಬಿಡಲ್ಲ. ಇದೇ ರೀತಿ ಕೊಲೆ ಪ್ರಕರಣ ನಡೆದರೆ ಜನವೇ ಸರ್ಕಾರದ ವಿರುದ್ಧ ತಿರುಗಿ ಬೀಳ್ತಾರೆ ಎಂದು ಎಚ್ಚರಿಕೆೆ ನೀಡಿದ್ದಾರೆ.