ಬೆಂಗಳೂರು,ಮಾ.29- ಸತತ 5ನೇ ಬಾರಿಗೆ ಅಧಿಕಾರಿಗಳೇ ಮಂಡನೆ ಮಾಡುತ್ತಿರುವ ಹಾಗೂ ಗ್ರೇಟರ್ ಬೆಂಗಳೂರು ರಚನೆಗೂ ಮುನ್ನ ಮಂಡಿಸುತ್ತಿರುವ ಬಿಬಿಎಂಪಿಯ ಕೊನೆಯ ಬಜೆಟ್‌ನಲ್ಲಿ 19.927 ಕೋಟಿ ರೂ.ಗಳ ಬೃಹತ್ ಯೋಜನೆಗಳನ್ನು ಘೋಷಿಸಲಾಗಿದೆ. ಬಿಬಿಎಂಪಿ ಆಡಳಿತಾಧಿಕಾರಿ ಉಮಾಶಂಕರ್ ಬಜೆಟ್‌ಗೆ ಅನುಮೋದನೆ ನೀಡಿದ್ದು, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸಮಕ್ಷಮದಲ್ಲಿ ಪುರಭವನದಲ್ಲಿಂದು ಹಣಕಾಸು ವಿಭಾಗದ ವಿಶೇಷ ಆಯುಕ್ತ ಹರೀಶ್‌ಕುಮಾರ್ ಬಿಬಿಎಂಪಿ ಬಜೆಟ್ ಮಂಡಿಸಿದರು.
ಕಟ್ಟುವೆವು ನಾವು ಹೊಸ ನಾಡೊಂದನ್ನು ಎಂಬ ಗೋಪಾಲಕೃಷ್ಣ ಅಡಿಗ ಅವರ ಕವಿವಾಣಿಯನ್ನು ಪ್ರಸ್ತಾಪಿಸಿದ ಹರೀಶ್‌ಕುಮಾರ್ ಅವರು, ಬ್ರ್ಯಾಂಡ್ ಬೆಂಗಳೂರು ದೃಷ್ಟಿಕೋನಕ್ಕೆ ಅನುಗುಣವಾಗಿ ನಗರವನ್ನು ಆಧುನಿಕ ನಗರವನ್ನಾಗಿ ಪರಿವರ್ತಿಸುವ ಘೋಷಣೆ ಮಾಡಿದರು. ಸುಗಮ ಸಂಚಾರ ಬೆಂಗಳೂರು, ಸ್ವಚ್ಛ ಬೆಂಗಳೂರು, ಹಸಿರು ಬೆಂಗಳೂರು, ಟೆಕ್ ಬೆಂಗಳೂರು, ಶಿಕ್ಷಣ ಬೆಂಗಳೂರು, ಆರೋಗ್ಯಕರ ಬೆಂಗಳೂರು, ರೋಮಾಂಚಕ ಬೆಂಗಳೂರು ಮತ್ತು ನೀರಿನ ಭದ್ರತೆ ಬೆಂಗಳೂರು ಎಂಬ 8 ವಿಭಾಗಗಳ ಅಭಿವೃದ್ಧಿಗೆ ಮೀಸಲಿಟ್ಟಿದ್ದ 1790 ಕೋಟಿ ರೂ.ಗಳ ಅನುದಾನವನ್ನು ನಗರದ ಅಭಿವೃದ್ದಿಗೆ ಸದ್ಬಳಕೆ ಮಾಡಲಾಗುತ್ತಿದೆ ಎಂದರು.
ಕಳೆದ ಸಾರಿ ದೇಶದಲ್ಲೇ ಅತಿಹೆಚ್ಚು ತೆರಿಗೆ ಸಂಗ್ರಹ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿರುವ ಬಿಬಿಎಂಪಿಯಲ್ಲಿ ಪ್ರಸಕ್ತ ಸಾಲಿನಲ್ಲೂ 5716 ಕೋಟಿ ರೂ.ಗಳ ಆದಾಯ ನಿರೀಕ್ಷಿಸಲಾಗಿದೆ ಎಂದರು. ನಾಗರಿಕರ ತೆರಿಗೆ ಪಾವತಿಗೆ ಅನುಕೂಲವಾಗುವಂತೆ ಒಟಿಎಸ್ ಪದ್ಧತಿಯನ್ನು ಜಾರಿಗೆ ತಂದ ಹಿನ್ನೆಲೆಯಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಆಸ್ತಿಗಳಿಂದ 1277 ಕೋಟಿ ರೂ.ಗಳ ಅತಿಹೆಚ್ಚು ತೆರಿಗೆ ಸಂಗ್ರಹ ಮಾಡಲಾಗಿದೆ.
ಕೃತಕಬುದ್ಧಿಮತ್ತೆ ಬಳಕೆ: ನಗರದಲ್ಲಿ ಡಿಜಿಟಲ್ ಇ-ಖಾತಾ ವ್ಯವಸ್ಥೆ ಜಾರಿಗೆ ತರಲಾಗಿದ್ದು, ನಾಗರಿಕರು ಯಾವುದೇ ಸಮಯದಲ್ಲಾದರೂ ಆನ್‌ಲೈನ್ ಮೂಲಕ ಇ-ಖಾತಾ ಪಡೆಯುವಂತೆ ವ್ಯವಸ್ಥೆ ಮಾಡಲಾಗಿದೆ.
ಇ-ಖಾತಗೆ ಆಧಾರ್ ಸಂಖ್ಯೆ ಜೋಡಣೆ ಮಾಡಿರುವುದರಿಂದ ಸ್ವಯಂಚಾಲಿತ ಖಾತಾ ವರ್ಗಾವಣೆಗೆ ಸಹಕಾರಿಯಾಗುತ್ತದೆ. ಇದೇ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ ಮೂಲಕ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರನ್ನು ಪತ್ತೆಹಚ್ಚುವ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಇದರೊಂದಿಗೆ ಆಸ್ತಿ ತೆರಿಗೆ ಜಾಲದಿಂದ ಹೊರಗುಳಿದಿರುವ ಲಕ್ಷಾಂತರ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತಂದು ವರ್ಷಕ್ಕೆ ಒಂದು ಸಾವಿರ ಕೋಟಿ ರೂ.ಗಳ ಆದಾಯ ಕ್ರೋಡೀಕರಣಕ್ಕೆ ಗಮನಹರಿಸಲಾಗಿದೆ.
ಪ್ರತ್ಯೇಕ ಸರ್ವೇ ವಿಭಾಗ:
ನಗರದಲ್ಲಿರುವ 20 ಲಕ್ಷ ಖಾಸಗಿ ಹಾಗೂ 6819 ಪಾಲಿಕೆ ಸ್ವತ್ತುಗಳ ದಾಖಲೆ ನಿರ್ವಹಣೆಗೆ ಪ್ರತ್ಯೇ ಸರ್ವೇ ವಿಭಾಗ ಸ್ಥಾಪಿಸಿ ಅಗತ್ಯ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ನಗರದ 7000ಕ್ಕೂ ಹೆಚ್ಚು ಸ್ವಂತ ಆಸ್ತಿಗಳ ಸಮೀಕ್ಷೆ ನಡೆಸಿ ಡಿಜಿಟಲೀಕರಣಗೊಳಿಸುವ ಮೂಲಕ ಪಾಲಿಕೆ ಆಸ್ತಿಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಅವಧಿ ಮುಗಿದಿರುವ ಪಾಲಿಕೆ ಆಸ್ತಿಗಳ ಗುತ್ತಿಗೆ ನವೀಕರಣ ಮಾಡಿ ಮಾರ್ಗಸೂಚಿ ಬಾಡಿಗೆ ಆಧಾರದ ಮೇಲೆ ಮರುಗುತ್ತಿಗೆ ನೀಡುವ ಮೂಲಕ 210 ಕೋಟಿ ರೂ.ಗಳ ಆದಾಯ ನಿರೀಕ್ಷಿಸಲಾಗಿದೆ.
ಜಾಹಿರಾತು:
ಪಾಲಿಕೆ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಸಕ್ತ ಸಾಲಿನಿಂದ ಹೊಸ ಜಾಹಿರಾತು ನಿಯಮ ಜಾರಿಗೆ ಬಂದಿದ್ದು, ವಿವಿಧ ಪ್ರದೇಶಗಳಲ್ಲಿ ವಾಣಿಜ್ಯ ಜಾಹಿರಾತುಗಳನ್ನು ಪ್ರದರ್ಶಿಸಲು ಬಹಿರಂಗ ಟೆಂಡರ್ ಕರೆಯಲು ತೀರ್ಮಾನಿಸಲಾಗಿದೆ. ಅನಧಿಕೃತ ಜಾಹಿರಾತು ಪ್ರದರ್ಶಿಸುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದರ ಜೊತೆಗೆ ದುಪ್ಪಟ್ಟು ದಂಡ ವಿಧಿಸುವ ಮೂಲಕ 750 ಕೋಟಿ ರೂ.ಗಳ ಆದಾಯ ನಿರೀಕ್ಷಿಸಲಾಗಿದೆ.
ಇ-ಟಿಡಿಆರ್:
ಅಭಿವೃದ್ಧಿ ಯೋಜನೆ ಜಾರಿಗೆ ತರುವ ಉದ್ದೇಶದಿಂದ ವಶಪಡಿಸಿಕೊಳ್ಳಲಾಗುವ ಭೂ ಸ್ವಾಧೀನಕ್ಕೆ 100 ಕೋಟಿ ರೂ. ಮೀಸಲಿರಿಸಲಾಗಿದ್ದು, ಬಿಡಿಎ ವತಿಯಿಂದ ಇ-ಡಿಆರ್‌ಸಿ/ಇ-ಟಿಡಿಆರ್‌ಗಳನ್ನು ಪಾರದರ್ಶಕವಾಗಿ ವಿತರಿಸಲಾಗುತ್ತಿದೆ. ಇ-ಟಿಡಿಆರ್‌ಗಳ ಬಗ್ಗೆ ಸಾರ್ವಜನಿಕರಿಗೆ ಆನ್‌ಲೈನ್‌ನಲ್ಲಿ ಮಾಹಿತಿ ನೀಡಲಾಗುವುದು. ಈ ಮೂಲಕ ಸಾರ್ವಜನಿಕರ ವಿಶ್ವಾಸ ಗಳಿಸಿಕೊಳ್ಳಲು ಪ್ರಯತ್ನ ಮಾಡಲಾಗಿದೆ ಎಂದರು.
ಟೌನ್ ಪ್ಲಾನಿಂಗ್:
ನಗರ ಯೋಜನೆ ಸುಧಾರಣೆಗಾಗಿ ಆನ್‌ಲೈನ್ ಕಟ್ಟಡ ಯೋಜನಾ ವ್ಯವಸ್ಥೆ ತಂತ್ರಾಂಶವನ್ನು ನಗರದಲ್ಲಿ ಅಳವಡಿಸಲಾಗಿದೆ. ನಂಬಿಕೆ ನಕ್ಷೆ ಮೂಲಕ 375 ಚ.ದ.ಮೀವರೆಗಿನ ನಿವೇಶನದಲ್ಲಿ 4 ವಸತಿ ಘಟಕಗಳನ್ನು ನಿರ್ಮಿಸಲು ಸ್ವಯಂಚಾಲಿತ ಅನುಮೋದನೆ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದೆ. ಜನರು ತಮ ವಾಹನಗಳನ್ನು ರಸ್ತೆಗಳಲ್ಲಿ ನಿಲ್ಲಿಸುವುದನ್ನು ತಪ್ಪಿಸಿ ತಮ ನಿವಾಸದೊಳಗೆ ವಾಹನಗಳನ್ನು ಪಾರ್ಕಿಂಗ್ ಮಾಡಿಕೊಳ್ಳುವ ಉದ್ದೇಶದಿಂದ ಸ್ಟಿಲ್ಟ್ ಮಹಡಿಗಳ ಎತ್ತರವನ್ನು 4.5 ಮೀಟರ್‌ಗಳಿಗೆ ಎತ್ತರಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಪ್ರೀಮಿಯಮ್ ಎಫ್‌ಎಆರ್ ನೀತಿ ಮೂಲಕ 2000 ಕೋಟಿ ರೂ. ಸಂಗ್ರಹಿಸುವ ಗುರಿಯೊಂದಿಗೆ ನಗರ ಯೋಜನಾ ವಿಭಾಗದಿಂದ 805 ಕೋಟಿ ರೂ. ಸಂಗ್ರಹಿಸಲಾಗುತ್ತಿದೆ.
ಆಡಳಿತ:
ಪಾಲಿಕೆ ಆಡಳಿತದ ಉತ್ತಮ ಸೇವೆಗಾಗಿ ಸಿಬ್ಬಂದಿಗಳ ಸೇವೆಯನ್ನು ಹೆಚ್ಚಿಸಿಕೊಳ್ಳಲು ಕ್ರಮ ಜರುಗಿಸಲಾಗಿದೆ. ಅಗತ್ಯ ಸಿಬ್ಬಂದಿಗಳಿಗೆ ಪ್ರತಿಷ್ಠಿತ ತರಬೇತಿ ಸಂಸ್ಥೆಗಳಿಂದ ವ್ಯಕ್ತಿತ್ವ ವಿಕಾಸನ ತರಬೇತಿ ನೀಡಲಾಗುವುದು. ಸಿಬ್ಬಂದಿಗಳ ವರ್ಗಾವಣೆಯನ್ನು ಕೌನ್ಸಿಲಿಂಗ್ ಮೂಲಕ ಪಾರದರ್ಶಕವಾಗಿ ನಡೆಸಲು ತೀರ್ಮಾನಿಸಲಾಗಿದೆ. ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುವುದನ್ನು ಖಚಿತಪಡಿಸಿಕೊಳ್ಳಲು ಜಿಯೋಫೆನ್ಸಿಂಗ್ ಮತ್ತು ಮುಖ ಗುರುತಿಸುವಿಕೆ ಆ್ಯಪ್ ಬಳಕೆ ಮಾಡಲು ನಿರ್ಧರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 12,692 ಪೌರಕಾರ್ಮಿಕರನ್ನು ನೇರ ವೇತನದ ಮೂಲಕ ಖಾಯಂಗೊಳಿಸಲು ತೀರ್ಮಾನಿಸಲಾಗಿದ್ದು, ಅವರ ವೇತನ ಭತ್ಯೆಗಾಗಿ 500 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ.
ಕಲ್ಯಾಣ:
ಒಂದೆದೆಯ ಹಾಲು ಕುಡಿದವರ ನಡುವೆ ಎಷ್ಟೊಂದು ಬೇಧ ತಾಯಿ ಎಂಬ ನಿಸಾರ್ ಅಹಮದ್ ಅವರ ಕವಿವಾಣಿಯಂತೆ ನಗರದ ಬಡವರು ಮತ್ತು ಶ್ರೀಮಂತರ ನಡುವಿನ ಬೇಧ-ಭಾವ ಹೋಗಲಾಡಿಸಲು ವಿಶೇಷ ಕಲ್ಯಾಣ ಕಾರ್ಯಕ್ರಮಗಳನ್ನು ಹಮಿಕೊಳ್ಳಲಾಗುತ್ತಿದೆ.ಮಹಿಳೆಯರು, ಎಸ್ಸಿ-ಎಸ್ಟಿ ಪಂಗಡದವರು, ಹಿಂದುಳಿದವರು, ಅಲ್ಪಸಂಖ್ಯಾತರು, ತೃತೀಯ ಲಿಂಗಿ ಸಮುದಾಯಕ್ಕೆ 500 ಎಲೆಕ್ಟ್ರಿಕ್ ಆಟೋ ಖರೀದಿಸಲು ಅನುಕೂಲವಾಗುವಂತೆ ಇ-ಸಾರಥಿ ಯೋಜನೆಯನ್ನು ಜಾರಿಗೆ ತರಲು 10 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ.
ಬ್ರ್ಯಾಂಡ್ ಬೆಂಗಳೂರು ಕಲ್ಪನೆಯಡಿ ನಗರದ ಒಂದು ಸಾವಿರ ಅರ್ಹ ಉದ್ಯೋಗಸ್ಥ ಮಹಿಳೆಯರು ಮತ್ತು ಪೌರಕಾರ್ಮಿಕರಿಗೆ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ಹಾಗೂ ವಿಶೇಷ ಚೇತನರಿಗೆ ಮೂರು ಚಕ್ರ ವಾಹನ ನೀಡಲು 15 ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ.
ತೃತೀಯ ಲಿಂಗಿಗಳು ಮತ್ತು ಇತರ ಹಿಂದುಳಿದವರ ಸಣ್ಣ ಉದ್ಯಮ ಸ್ಥಾಪನೆಗಾಗಿ ಯೋಜನಾ ವೆಚ್ಚದ ಶೇ.50ರಷ್ಟು ಇಲ್ಲವೇ 2 ಲಕ್ಷ ರೂ.ಗಳ ಸಹಾಯಧನ ನೀಡಲು 10 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ. ಎಸ್ಸಿ-ಎಸ್ಟಿ, ಓಬಿಸಿ, ವಿಶೇಷಚೇತನರಿಗಾಗಿ ಗೃಹಭಾಗ್ಯ ಯೋಜನೆಯಡಿ ವಸತಿ ಸೌಲಭ್ಯ ಒದಗಿಸಲು 130 ಕೋಟಿ ರೂ.ಗಳ ಅನುದಾನ ಮೀಸಲಿರಿಸಲಾಗಿದೆ.
ಈ ಅನುದಾನದಲ್ಲಿ ಶೇ.50ರಷ್ಟು ಹಣವನ್ನು ಒಂಟಿಮನೆ ಯೋಜನೆ ನಿರ್ಮಾಣಕ್ಕಾಗಿ ಹಾಗೂ ವಸತಿ ರಹಿತ ಅರ್ಹ ಫಲಾನುಭವಿಗಳಿಗೆ ರಾಜೀವ್‌ಗಾಂಧಿ ವಸತಿ ನಿಗಮದ ಮನೆ ಖರೀದಿಸಲು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಒಂಟಿಮನೆ ನಿರ್ಮಾಣಕ್ಕೆ ನೀಡುತ್ತಿರುವ 5 ಲಕ್ಷ ರೂ.ಗಳ ಸಹಾಯಧನವನ್ನು 6 ಲಕ್ಷಕ್ಕೆ ಹೆಚ್ಚಿಸಲಾಗಿದೆ. 1 ಸಾವಿರ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸುವುದು, ಸ್ಪರ್ಧಾತಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪುಸ್ತಕ ಒದಗಿಸಲು 1 ಕೋಟಿ ಅನುದಾನ, ಹಿರಿಯ ನಾಗರಿಕರು ಜೀವನೋಪಾಯ ವಸ್ತು ಖರೀದಿಗೆ 2 ಕೋಟಿ ರೂ, ಯುವಜನರ ಕೌಶಲ್ಯಾಭಿವೃದ್ಧಿಗೆ 5 ಕೋಟಿ, ಬೀದಿಬದಿ ವ್ಯಾಪಾರಿಗಳ ಕಲ್ಯಾಣಕ್ಕಾಗಿ 10 ಕೋಟಿ, ನಿರಾಶ್ರಿತರ ತಂಗುದಾಣ ನಿರ್ವಹಣೆಗೆ 5 ಕೋಟಿ ಹಾಗೂ ಸಾರ್ವಜನಿಕರ ವೈದ್ಯಕೀಯ ವೆಚ್ಚ ಮರುಪಾವತಿಗಾಗಿ 2 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ.
ಸಂಘಸಂಸ್ಥೆಗಳ ಸಹಾಯಧನಕ್ಕಾಗಿ 5 ಕೋಟಿ ನಿಗದಿ ಮಾಡಲಾಗಿದ್ದು, ಪಾಲಿಕೆ ವ್ಯಾಪ್ತಿಯ ಕೊಳಚೆಪ್ರದೇಶಗಳ ಅಭಿವೃದ್ಧಿಗಾಗಿ ಯಾವುದೇ ಶುಲ್ಕ ಪಾವತಿಸಿಕೊಳ್ಳದೆ ಸ್ಲಂಗಳಿಗೆ ನಿರಪೇಕ್ಷಣ ಪತ್ರ ನೀಡುವ ಮೂಲಕ ಕೆರೆ ಒತ್ತುವರಿ ಮಾಡಿಕೊಂಡಿರುವ ಸ್ಲಂಗಳನ್ನು ಸ್ಥಳಾಂತರಿಸಲು ಸ್ಲಂ ಸೆಸ್ ಮತ್ತು ಎಸ್‌ಸಿಪಿ,ಟಿಎಸ್‌ಪಿ ಅನುದಾನ ಬಳಕೆ ಮಾಡಿಕೊಳ್ಳಲಾಗುತ್ತಿದೆ.
ನಿರೀಕ್ಷೆ:
ರಾಜ್ಯ ಸರ್ಕಾರ ಪ್ರಸಕ್ತ ಸಾಲಿನಲ್ಲಿ 3 ಸಾವಿರ ಕೋಟಿ ರೂ.ಗಳ ಅನುದಾನದ ಬದಲಿಗೆ 7 ಸಾವಿರ ಕೋಟಿ ರೂ.ಗಳನ್ನು ನೀಡಿದೆ. ಇದೇ ರೀತಿ 15ನೇ ಹಣಕಾಸು ಆಯೋಗದಡಿಯಲ್ಲಿ 498, ರಾಜ್ಯ ಸರ್ಕಾರದ ಎಸ್‌ಎಫ್‌ಸಿ ಅನುದಾನದಲ್ಲಿ 562.43, ರಾಷ್ಟ್ರೀಯ ವಿಪ್ಪತ್ತು ನಿರ್ವಹಣಾ ನಿಧಿಯಿಂದ 238 ಹಾಗೂ ಕೆರೆಗಳ ಅಭಿವೃದ್ಧಿಗಾಗಿ ವಿಶ್ವಬ್ಯಾಂಕ್‌ನ ಯೋಜನೆಯಡಿ 500 ಕೋಟಿ ರೂ.ಗಳ ಅನುದಾನ ನಿರೀಕ್ಷೆ ಮಾಡಲಾಗಿದೆ ಎಂದು ವಿಶೇಷ ಆಯುಕ್ತ ಹರೀಶ್‌ಕುಮಾರ್ ತಮ ಬಜೆಟ್ ಭಾಷಣದಲ್ಲಿ ಹೇಳಿದರು.
ಬ್ರ್ಯಾಂಡ್ ಬೆಂಗಳೂರು:
ನಗರದ ವಾಹನ ದಟ್ಟಣೆ ನಿವಾರಿಸುವ ಉದ್ದೇಶದಿಂದ ಹಾಗೂ ನಗರವನ್ನು ವಾಸ ಯೋಗ್ಯ ನಗರವನ್ನಾಗಿಸುವ ಬಗ್ಗೆ ಅಧ್ಯಯನ ನಡೆಸಲು ಸಮಗ್ರ ಸಂಚಾರ ನಿರ್ವಹಣಾ ಯೋಜನೆ ಸಿದ್ಧಪಡಿಸಲು ತೀರ್ಮಾನಿಸಲಾಗಿದೆ.
ಈ ವರದಿಯನ್ನು ಆಧರಿಸಿ ಸಂಚಾರ ದಟ್ಟಣೆಯ ಅರಿವನ್ನು ನಗರದ ಕೇಂದ್ರ ಭಾಗದಿಂದ ಹೊರವಲಯಕ್ಕೆ ವರ್ಗಾಯಿಸಲು ಎಂಡ್-ಟು-ಎಂಡ್ ಸಲ್ಯೂಷನ್ ಯೋಜನೆಯನ್ನು ಜಾರಿಗೆ ತರುವುದರ ಮೂಲಕ ಹೊಸ ಹೊಸ ಬೃಹತ್ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಪ್ರಸ್ತಾಪಿಸಲಾಗಿದೆ.
ನಗರದಲ್ಲಿ ಅಂದಾಜು 42 ಸಾವಿರ ಕೋಟಿ ರೂ. ವೆಚ್ಚದಲ್ಲಿ ಸುರಂಗ ಮಾರ್ಗ ನಿರ್ಮಾಣ, 13200 ಕೋಟಿ ರೂ.ಗಳಲ್ಲಿ ಎಲಿವೇಟೆಡ್ ಕಾರಿಡಾರ್ ಹಾಗೂ ಗ್ರೇಟ್ ಸೆಪರೇಟರ್‌ಗಳ ನಿರ್ಮಾಣ, 9 ಸಾವಿರ ಕೋಟಿ ರೂ. ವೆಚ್ಚದಲ್ಲಿ ಸಂಯುಕ್ತ ಮೆಟ್ರೋ-ಮೇಲ್ಸೇತುವೆ ಯೋಜನೆ(ಡಬಲ್ ಡಕ್ಕರ್ ರಸ್ತೆ) , 3 ಸಾವಿರ ಕೋಟಿ ರೂ. ವೆಚ್ಚದಲ್ಲಿ ರಾಜಕಾಲುವೆಗಳ ಪಕ್ಕದಲ್ಲಿ ಸಂಪರ್ಕ ರಸ್ತೆ ನಿರ್ಮಾಣ, 6 ಸಾವಿರ ಕೋಟಿ ರೂ. ವೆಚ್ಚದಲ್ಲಿ ವೈಟ್‌ಟಾಪಿಂಗ್, 400 ಕೋಟಿ ರೂ. ವೆಚ್ಚದಲ್ಲಿ ಸ್ಕೈ-ಡೆಕ್ ನಿರ್ಮಾಣ ಮಾಡಲಾಗುತ್ತಿದೆ.
ಪಾದಚಾರಿ ಮೊದಲು ಎಂಬ ತತ್ವದಡಿ ಈ ಬಾರಿ 1 ಸಾವಿರ ಕಿ.ಮೀ ಉದ್ದದ ಪಾದಚಾರಿ ಮಾರ್ಗ ನಿರ್ಮಿಸಲಾಗುವುದು. ಸೆಂಟ್ರಲ್ ಸಿಲ್‌್ಕ ಬೋರ್ಡ್‌ನಿಂದ ಕೆಆರ್‌ಪುರಂ ಲೌರಿ ಜಂಕ್ಷನ್ ಮುಖಾಂತರ ಬಯ್ಯಪ್ಪನಹಳ್ಳಿ ಮೆಟ್ರೊ ನಿಲ್ದಾಣದವರೆಗೆ ಹೊರವರ್ತುಲ ರಸ್ತೆಯಲ್ಲಿ ಹಲವಾರು ಐಟಿಬಿಟಿ ಕಂಪನಿಗಳಿದ್ದು, ಈ ಪ್ರದೇಶದ ಉನ್ನತಿಗಾಗಿ ರಾಜ್ಯ ಸರ್ಕಾರ ಮೆಟ್ರೋ ಹಾಗೂ ಪಾಲಿಕೆ ಸಹಯೋಗದೊಂದಿಗೆ 400 ಕೋಟಿ ರೂ. ವೆಚ್ಚದಲ್ಲಿ 22.7 ಕಿ.ಮೀ ರಸ್ತೆಯನ್ನು ಜಾಗತಿಕ ಮಟ್ಟದೊಂದಿಗೆ ಉನ್ನತೀಕರಿಸಲಾಗಿದೆ.
ಕೇಂದ್ರ ರೈಲ್ವೆ ಇಲಾಖೆಯ ಸಹಯೋಗದೊಂದಿಗೆ ಕೆಂಗೇರಿ ಉಪನಗರದ ಒಂದನೇ ಮುಖ್ಯರಸ್ತೆ, ರೈಲ್ವೆ ಓವರ್ ಬ್ರಿಡ್‌್ಜ ಮತ್ತು ರಾಮೋಹಳ್ಳಿ ಗೇಟ್ ಬಳಿ ಅಂಡರ್‌ಪಾಸ್ ನಿರ್ಮಾಣ ಕಾಮಗಾರಿಗೆ ಯೋಜನೆ ರೂಪಿಸಲಾಗುವುದು. 225 ವಾರ್ಡ್‌ಗಳ ಅಭಿವೃದ್ಧಿಗಾಗಿ ಪ್ರತಿ ವಾರ್ಡ್‌ಗೆ 22.50 ಕೋಟಿಗಳಂತೆ ಹಾಗೂ ನಿರ್ವಹಣೆ ಕಾಮಗಾರಿಗಳಿಗಾಗಿ 50 ಲಕ್ಷಗಳಂತೆ ಒಟ್ಟಾರೆ 675 ಕೋಟಿ ಅನುದಾನ ಮೀಸಲಿರಿಸಿದೆ.
ಟಿಡಿಆರ್ ಬಳಸಿ ಆರ್‌ಟಿನಗರ ಪೊಲೀಸ್ ಠಾಣೆಯಿಂದ ಅಂಬೇಡ್ಕರ್ ಕಾಲೇಜುವರೆಗಿನ ರಸ್ತೆ, ಲಿಂಗರಾಜಪುರಂ, ಫ್ಲೈಓವರ್‌ರಸ್ತೆ, ಪುಲಿಕೇಶಿನಗರ ಶ್ಯಾಂಪುರ ಮುಖ್ಯರಸ್ತೆ, ಯಶವಂತಪುರದ ಕೆಂಚನಹಳ್ಳಿ ಮುಖ್ಯರಸ್ತೆ ಮತ್ತು ಮಹದೇವಪುರದ ರಸ್ತೆಗಳನ್ನು ಅಗಲೀಕರಣ ಮಾಡಲಾಗುವುದು.
ತುರ್ತು ಆರೈಕೆಗಾಗಿ 26 ಬಿಎಲ್‌ಎಸ್ ಆ್ಯಂಬುಲೆನ್ಸ್ ಸೇವೆ:
ಬ್ರಾಂಡ್ ಬೆಂಗಳೂರು, ಆರೋಗ್ಯಕರ ಬೆಂಗಳೂರು ಎಲ್ಲರಿಗೂ ಆರೋಗ್ಯ ಅಭಿಯಾನದಡಿ ಬಿಬಿಎಂಪಿ ಆರೋಗ್ಯ ಸೇವೆಗೆ ವಿಶೇಷ ಒತ್ತು ನೀಡಿದ್ದು, ಹೆಚ್ಚುತ್ತಿರುವ ಹೃದಯಸ್ತಂಭನ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ತುರ್ತು ಆರೈಕೆಗಾಗಿ 26 ಬಿಎಲ್‌ಎಸ್ ಆ್ಯಂಬುಲೆನ್ಸ್ ಸೇವೆಯನ್ನು ಒದಗಿಸಲಿದೆ.
ಗರ್ಭಿಣಿಯರ ಮತ್ತು ನವಜಾತ ಶಿಶುಗಳ ಸಮಗ್ರ ಸಮರ್ಪಕ ನಿರಂತರ ಆರೈಕೆಗಾಗಿ ನೂತನವಾದ ಎಐ ತಂತ್ರಜ್ಞಾನದೊಂದಿಗೆ ಸೇವ್ ಮಾಮ್ ಎಂಬ ತಾಯಿ-ಮಕ್ಕಳ ಆರೈಕೆ ವೇದಿಕೆಯನ್ನು ಪ್ರಾರಂಭಿಸಲಿದೆ.
ವೈಯಕ್ತಿಕ ಹಾಗೂ ನಿರಂತರ ಆರೈಕೆಯನ್ನು ಖಚಿತಪಡಿಸಿಕೊಳ್ಳಲು ನಗರಾದ್ಯಂತ ಪ್ರಾಯೋಗಿಕವಾಗಿ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಾಯಿ ಮತ್ತು ಮಕ್ಕಳ ಆರೈಕೆ ವೇದಿಕೆಯನ್ನು ಸ್ಥಾಪಿಸಲಾಗಿದೆ.
ಪಾಲಿಕೆಯ 300 ಹಾಸಿಗೆಯುಳ್ಳ ಎಂ.ಸಿ.ಲೇಔಟ್‌ನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉತ್ತಮ ಸೇವೆ ನೀಡಲಾಗುತ್ತಿದ್ದು, ಇಲ್ಲಿ ಹೊಸದಾಗಿ ವೈದ್ಯಕೀಯ ಮಹಾವಿದ್ಯಾಲಯದ ಸ್ಥಾಪನೆಗೆ ಅಂದಾಜು 633 ಕೋಟಿ ರೂ. ಅಗತ್ಯವಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಕೈಗೊಳ್ಳಲು ಎ,ಬಿ,ಸಿ ಕಾರ್ಯಕ್ರಮದಡಿ ಪಾಲಿಕೆ ವ್ಯಾಪ್ತಿಯಲ್ಲಿ 1,80,000 ಕ್ಕೂ ಹೆಚ್ಚು ಲಸಿಕೆಗಳನ್ನು ನೀಡಲಾಗುವುದು. ಪಾಲಿಕೆಯ 6 ವಲಯಗಳಲ್ಲಿ ಪಶು ವೈದ್ಯಕೀಯ ಚಿಕಿತ್ಸಾಲಯಗಳನ್ನು ಪ್ರಾರಂಭಿಸಲಾಗುವುದು.ಬೊಮನಹಳ್ಳಿ ಮತ್ತು ಮಹದೇವಪುರ ವಲಯಗಳಲ್ಲಿ ಅಂದಾಜು 7.5 ಕೋಟಿ ರೂ. ವೆಚ್ಚದಲ್ಲಿ ಹೊಸ ಎಬಿಸಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು.
ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲಾ ಬೀದಿ ನಾಯಿಗಳಿಗೆ ಮೈಕ್ರೊ ಚಿಪ್ ಅಳವಡಿಸಿಕೊಳ್ಳುವ ಮೂಲಕ ಬೀದಿನಾಯಿಗಳಿಗೆ ಆಹಾರ ನೀಡಲು ಕ್ರಮ ವಹಿಸಲಾಗುವುದು. ಇವುಗಳ ನಿರ್ವಹಣೆಗಾಗಿ 660 ಕೋಟಿ ರೂ. ಮೀಸಲಿರಿಸಲಾಗಿದೆ. ನವೀಕೃತ ತಂತ್ರಜ್ಞಾನ ಬಳಸಿ ಕಸಾಯಿಖಾನೆಗಳನ್ನು 5 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಿಸಲು ಕ್ರಮ ವಹಿಸಲಾಗುವುದು.ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಕಸಾಯಿಖಾನೆ ನಿರ್ಮಾಣಕ್ಕೆ 10 ಕೋಟಿ ರೂ. ಅನುದಾನ ಮತ್ತು ನಿರ್ವಹಣೆಗೆ 2 ಕೋಟಿ ರೂ. ಅನುದಾನ ಮೀಸಲಿರಿಸಿದೆ.
ರಾಯಪುರಂ ಹೆರಿಗೆ ಆಸ್ಪತ್ರೆ, ಸಗಯಪುರ ಮತ್ತು ಕುಶಾಲನಗರ ಆಸ್ಪತ್ರೆ ಮತ್ತು ಸಿಂಗಾಪುರ ಗ್ರಾಮದ 50 ಹಾಸಿಗೆ ಆಸ್ಪತ್ರೆಗಳ ಹೆಚ್ಚುವರಿ ಕಾಮಗಾರಿಗಳನ್ನು ಈ ಸಾಲಿನಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಕುಂಬಳಗೋಡು ಮತ್ತು ತಾವರಕೆರೆಯಲ್ಲಿ ಚಿತಾಗಾರಗಳನ್ನು ನಿರ್ಮಿಸಲಾಗುವುದು.ಮುಂದಿನ 2 ವರ್ಷಗಳಲ್ಲಿ 413 ಕೋಟಿ ರೂ. ವೆಚ್ಚದಲ್ಲಿ ಆರೋಗ್ಯ ಬೆಂಗಳೂರು ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರ ಅನುಮೋದನೆ ನೀಡಿದ್ದು, ವಿಸ್ತ್ರತ ಯೋಜನಾ ತಯಾರಿಕೆಗೆ ಟೆಂಡರ್ ಆಹ್ವಾನಿಸಲಾಗಿದ್ದು, ಈ ಯೋಜನೆಯಡಿ 19 ಆಸ್ಪತ್ರೆಗಳ ಒಟ್ಟಾರೆ 852 ಹಾಸಿಗೆಗಳನ್ನು 1122 ಹಾಸಿಗೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗುವುದು. ರೋಗ ಪತ್ತೆ ಹಚ್ಚುವ ಸೌಲಭ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ 60 ಕ್ಕೂ ಹೆಚ್ಚು ಪರೀಕ್ಷೆಗಳನ್ನು ಉಚಿತವಾಗಿ ನಡೆಸಲು 26 ಹೊಸ ಕೇಂದ್ರಗಳಲ್ಲಿ ದಂತ ಚಿಕಿತ್ಸಾ ಸೇವೆಗಳನ್ನು ಒದಗಿಸಲಾಗುವುದು.
ಸ್ವಚ್ಛ ಬೆಂಗಳೂರು:
ನಗರದ ಕಸವನ್ನು ಮುಂದಿನ 30 ವರ್ಷಗಳವರೆಗೆ ಸಮರ್ಪಕವಾಗಿ ನಿರ್ವಹಣೆ ಮಾಡುವ ಉದ್ದೇಶದಿಂದ ನಗರದ 4 ದಿಕ್ಕುಗಳ 100 ಎಕರೆ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಮಾಡಲು ಪ್ಯಾಕೇಜ್ ಯೋಜನೆ ರೂಪಿಸಲಾಗಿದೆ. ಬ್ಲಾಕ್‌ಸ್ಪಾಟ್‌ಗಳನ್ನು ತಡೆಗಟ್ಟಲು ವೈಜ್ಞಾನಿಕವಾಗಿ ನಿರ್ವಹಿಸುವ ಉದ್ದೇಶದಿಂದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಂದೊಂದು ಟ್ರಾನ್ಸಫರ್ ಸ್ಟೇಷನ್‌ಗಳನ್ನು ನಿರ್ಮಿಸಲಾಗುತ್ತಿದೆ.
ಗೇಲ್ ಸಂಸ್ಥೆ ಸಹಯೋಗದಲ್ಲಿ 50 ಟನ್ ಸಾಮರ್ಥ್ಯ ಬಯೋ ಸಿಎನ್‌ಜಿ ಘಟಕ, 5 ಮೆಟ್ರಿಕ್ ಸಾಮರ್ಥ್ಯದ 4 ಬಯೋಮಿಥನೈಸೇಶನ್ ಘಟಕ, 8 ಟನ್ ಸಾಮರ್ಥ್ಯದ ಪ್ರಾಣಿ ತ್ಯಾಜ್ಯ ಸಂಸ್ಕರಣಾ ಘಟಕ ಹಾಗೂ ಹಾನಿಕಾರಕ ನೈರ್ಮಲ್ಯ ತಾಜ್ಯ ನಿರ್ವಹಣೆಗೆ 25 ವಿಕೇಂದ್ರಿಕೃತ ಘಟಕಗಳನ್ನು ಪ್ರಾರಂಭಿಸಲಾಗುತ್ತಿದೆ.104 ಕೋಟಿ ರೂ. ವೆಚ್ಚದಲ್ಲಿ ಪ್ರತಿನಿತ್ಯ 1226 ಮೆಟ್ರಿಕ್ ಟನ್ ಸಾಮರ್ಥ್ಯದ ಒಣತ್ಯಾಜ್ಯ ಸಂಸ್ಕರಿಸುವ ಘಟಕ ಸ್ಥಾಪಿಸಲಾಗುತ್ತಿದೆ. 5 ಟನ್ ಸಾಮರ್ಥ್ಯದ ಪ್ಲಾಸ್ಟಿಕ್ ಹಾಗೂ ಇ-ತ್ಯಾಜ್ಯ ಸಂಸ್ಕರಣೆಗೆ ಕೆಸಿಡಿಸಿ ಆವರಣದಲ್ಲಿ ಘಟಕ ಆರಂಭಿಸಲಾಗುತ್ತಿದೆ.
ರಾಜ್ಯ ಸರ್ಕಾರದ 474 ಕೋಟಿ ರೂ. ಅನುದಾನದಲ್ಲಿ ತ್ಯಾಜ್ಯದಿಂದ ಉತ್ಪತ್ತಿಯಾಗುತ್ತಿರುವ 2878 ದಶಲಕ್ಷ ಲೀಟರ್ ಲಿಚೆಟ್ ಸಂಸ್ಕರಣಾ ಘಟಕ ಸ್ಥಾಪನೆಯಾಗುತ್ತಿದೆ. ತ್ಯಾಜ್ಯ ನಿರ್ವಹಣೆ ಮೇಲೆ ನಿಗಾ ಇಡಲು ಪ್ರತ್ಯೇಕ ಕಮಾಂಡ್ ಕಂಟ್ರೋಲ್‌ರೂಮ್ ಸ್ಥಾಪಿಸಲಾಗುವುದು.
ಹಸಿರು ಬೆಂಗಳೂರು:
ನಗರವನ್ನು ಹಸರೀಕರಣಗೊಳಿಸಲು ಪ್ರಸಕ್ತ ಸಾಲಿನಲ್ಲಿ 5 ಲಕ್ಷ ಸಸಿಗಳನ್ನು ನೆಡಲು ಅನುಕೂಲವಾಗುವಂತೆ 51.69 ಕೋಟಿ ನಿಗದಿಪಡಿಸಲಾಗಿದೆ. ಪ್ರಾಣಿಗಳ ರಕ್ಷಣೆಗೆ ವನ್ಯಜೀವಿ ಸಂರಕ್ಷಣಾ ತಂಡ ರಚಿಸಲಾಗಿದೆ. ಹಸಿರು ಬೆಂಗಳೂರು ಪರಿಕಲ್ಪನೆಯಡಿ 14 ಹೊಸ ಉದ್ಯಾನವನ ನಿರ್ಮಾಣ ಮಾಡಲಾಗುತ್ತಿದ್ದು, ಸಿಂಗಾಪುರಕೆರೆ ಸಮೀಪದ 20 ಎಕರೆ ಸರ್ಕಾರಿ ಜಮೀನಿನಲ್ಲಿ ವಿಶಾಲವಾದ ಸುಜ್ಜಜಿತ ಉದ್ಯಾನವನ ನಿರ್ಮಾಣ ಮಾಡಲಾಗುತ್ತಿದೆ.
ಸಂಸ್ಕರಿಸಿದ ನೀರನ್ನು ಉದ್ಯಾನವನಗಳಿಗೆ ಬಳಸುವ ಉದ್ದೇಶದಿಂದ 125 ನೀರು ಸಂಗ್ರಹ ಟ್ಯಾಂಕ್‌ಗಳು ಮತ್ತು ಎಲೆಗೊಬ್ಬರ ಕಾಂಪೋಸ್ಟಿಂಗ್ ಘಟಕ ನಿರ್ಮಿಸಲಾಗುತ್ತಿದೆ. ನಗರದ ಹಸಿರು ಕಾಪಾಡುವ ಉದ್ದೇಶದಿಂದ ಬೆಂಗಳೂರು ಕ್ಲೈಮೇಟ್ ಆ್ಯಕ್ಷನ್ ಪ್ಲಾನ್ ಜಾಗೃತಿಗೆ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರಿನ ಪರಿಸರ ಚಟುವಟಿಕೆ ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರಸಕ್ತ ಸಾಲಿನಿಂದ ಪಾಲಿಕೆಯಲ್ಲಿ 10 ಪದವೀಧರರಿಗೆ 2ರಿಂದ 6 ತಿಂಗಳ ಇಂಟರ್ನ್‌ಶಿಪ್ ಕಾರ್ಯಕ್ರಮ ಪರಿಚಯಿಸಲಾಗುತ್ತಿದೆ. ವಿವಿಧ ಹವಾಮಾನ ಅಭಿವೃದ್ಧಿ ಕ್ರಮಗಳನ್ನು ಗುರುತಿಸಲು ಬ್ಲೂ-ಗ್ರೀನ್ ಪ್ರಶಸ್ತಿ ಪರಿಚಯಿಸಲಾಗುತ್ತಿದೆ.
ಜಲಸುರಕ್ಷತೆ ಬೆಂಗಳೂರು:
ನಗರದ ಕೆರೆಗಳ ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ 210 ಕೋಟಿ ರೂ.ಗಳನ್ನು ಅಭಿವೃದ್ಧಿಪಡಿಸಲಾಗಿದೆ. ನಗರದ ನೀರಿನ ಕೊರತೆ ಪರಿಹರಿಸಲು ಪಾಲಿಕೆ ಕಟ್ಟಡಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. 2000 ಕೋಟಿ ರೂ.ಗಳ ಅನುದಾನದಲ್ಲಿ ನಗರದ 860 ಕಿ.ಮೀ ಉದ್ದದ ರಾಜಕಾಲುವೆಗಳಿಗೆ 174 ಕಿ.ಮೀ ಉದ್ದದ ತಡೆಗೋಡೆ ನಿರ್ಮಿಸಲಾಗುತ್ತಿದೆ. ಪ್ರವಾಹಪೀಡಿತ ಪ್ರದೇಶಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು 247.25 ಕೋಟಿ ರೂ. ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ಟೆಕ್ ಬೆಂಗಳೂರು:
ಸಾರ್ವಜನಿಕರ ವಿವಿಧ ಯೋಜನೆಗಳಿಗೆ ಅನುಕೂಲವಾಗುವಂತೆ ಕೃತಕಬುದ್ಧಿಮತ್ತೆ ಆಧರಿತ ಕುಂದುಕೊರತೆ ಪರಿಹಾರ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಪಾಲಿಕೆಯಲ್ಲಿರುವ ಐಟಿ ಕೋಶದ ವತಿಯಿಂದ ಮೊಬೈಲ್ ಮತ್ತು ವೆಬ್ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಅದೇ ರೀತಿ ಇ-ಆಸ್ತಿ, ಇ-ಖಾತಾ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಮೊಬೈಲ್ ಫಸ್ಟ್ ಪರಿಕಲ್ಪನೆಯಡಿ ಸ್ವಯಂಚಾಲಿತ ನಾಗರಿಕರ ಸೇವೆಗಳಿಗಾಗಿ ವಿವಿಧ ಡಾಟಾಬೇಸ್‌ಗಳನ್ನು ಒಳಗೊಂಡ ಆ್ಯಪ್ ಅಭಿವೃದ್ಧಿಪಡಿಸುವುದರ ಜೊತೆಗೆ ಟೆಕ್ ಬೆಂಗಳೂರು ಯೋಜನೆಗೆ 40 ಕೋಟಿ ರೂ. ಮೀಸಲಿರಿಸಲಾಗಿದೆ.
ರೋಮಾಂಚಕ ಬೆಂಗಳೂರು:
ನಗರವನ್ನು ಆಕರ್ಷಣೀಯಗೊಳಿಸುವ ಉದ್ದೇಶದಿಂದ 50 ಕೋಟಿ ರೂ. ವೆಚ್ಚದಲ್ಲಿ ಅಲಂಕಾರಿಕ ದ್ವೀಪಗಳು, 25 ಕೋಟಿ ರೂ. ವೆಚ್ಚದಲ್ಲಿ ಜಂಕ್ಷನ್ ಸುಧಾರಣೆ, 50 ಕೋಟಿ ರೂ. ವೆಚ್ಚದಲ್ಲಿ ಸ್ಕೈ-ಟೆಕ್ ನಿರ್ಮಾಣ ಹಾಗೂ 25 ಕೋಟಿ ರೂ. ವೆಚ್ಚದಲ್ಲಿ ಸಾರ್ವಜನಿಕ ಸ್ಥಳಗಳ ಸುಂದರೀಕರಣಗೊಳಿಸುವ ಯೋಜನೆಯನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.
ಪ್ರತಿ ವರ್ಷ ಪಾಲಿಕೆ ಪಾವತಿಸುತ್ತಿರುವ 300 ಕೋಟಿ ರೂ. ಶುಲ್ಕ ತಗ್ಗಿಸುವ ಉದ್ದೇಶದಿಂದ ಎಲ್‌ಇಡಿ ತಂತ್ರಜ್ಞಾನ ಮೊರೆಹೋಗಲಾಗಿದೆ. ಮಾಗಡಿ ಕೋಟೆ ಅಭಿವೃದ್ಧಿಗಾಗಿ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಈ ಬಾರಿ 50 ಕೋಟಿ ರೂ. ಬದಲಿಗೆ 100 ಕೋಟಿ ನೀಡಲಾಗಿದೆ. ಶಿವರಾಂ ಕಾರಂತ ಬಡಾವಣೆಯಲ್ಲಿ ಬಿಡಿಎ ನಿರ್ಮಿಸಿರುವ 50 ಎಕರೆ ಪ್ರದೇಶದ ಕ್ರೀಡಾಂಗಣವನ್ನು ಬಿಬಿಎಂಪಿ ವ್ಯಾಪ್ತಿಯ ನಾಗರಿಕರು ಬಳಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು.
ನಗರದ ಉದ್ಯಾನವನಗಳಲ್ಲಿ ವರ್ಷವಿಡೀ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು, ಬೆಂಗಳೂರು ಹಬ್ಬ ಕಾರ್ಯಕ್ರಮ ಆಯೋಜಿಸುವುದರ ಜೊತೆಗೆ ವಿವಿಧ ಮಾರುಕಟ್ಟೆ, ಕೆರೆ, ಈಜುಕೊಳ, ಕ್ರೀಡಾಂಗಣಕ್ಕೂ ಅನುದಾನ ಒದಗಿಸಲಾಗಿದೆ.