ಬೆಂಗಳೂರು, ಫೆ.29- ಬ್ರಾಂಡ್ ಬೆಂಗಳೂರು ಪರಿಕಲ್ಪನೆಯಡಿ 2024-25ನೇ ಸಾಲಿನ ಆಯವ್ಯಯದಲ್ಲಿ ಸಿಲಿಕಾನ್ ಸಿಟಿಯ ಸಮಗ್ರ ಅಭಿವೃದ್ಧಿಗೆ ಭರಪೂರ ಕೊಡುಗೆಗಳನ್ನು ಘೋಷಿಸುವುದರ ಜೊತೆಗೆ ಏಪ್ರಿಲ್ 1ರಿಂದ ಮೌಲ್ಯಾಧಾರಿತ ಆಸ್ತಿ ತೆರಿಗೆ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ.ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಶಿವಾನಂದ್ ಕಲಕೇರಿ ಅವರು ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿದ್ದು, 2024-25ನೇ ವರ್ಷದಲ್ಲಿ ಪಾಲಿಕೆ ಆದಾಯವೂ ಪ್ರಾರಂಭಿಕ ಶಿಲ್ಕು ಸೇರಿ ಒಟ್ಟು ಸ್ವೀಕೃತಿ 12,371.63 ಕೋಟಿ ಇದ್ದು, ಒಟ್ಟು ಖರ್ಚು 12,369.46 ಕೋಟಿ ಇರಲಿದೆ. 2.17 ಕೋಟಿ ರೂ. ಉಳಿತಾಯವಾಗಲಿದೆ ಎಂದು ತಿಳಿಸಿದರು.
ಕಂದಾಯ: ಸಂಪನ್ಮೂಲ ಕ್ರೂಢೀಕರಣಕ್ಕಾಗಿ ಕಂದಾಯ ವಲಯವನ್ನು ಮೇಲ್ದರ್ಜೆಗೇರಿಸಿದ್ದು, ಪಾಲಿಕೆ ವ್ಯಾಪ್ತಿಯಲ್ಲಿರುವ 20 ಲಕ್ಷ ಆಸ್ತಿಗಳನ್ನು ಗಣಕೀಕರಣಗೊಳಿಸಿ ಇ-ಖಾತಾ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಕಾವೇರಿ-2 ತಂತ್ರಾಂಶದೊಂದಿಗೆ ಪಾಲಿಕೆಯ ನಮ್ಮ ಸ್ವತ್ತು ವ್ಯವಸ್ಥೆಯನ್ನು ಸಂಯೋಜನೆ ಮಾಡಲಾಗುವುದು. ಆಸ್ತಿ ತೆರಿಗೆ ಮೇಲಿನ ಬಡ್ಡಿ ಮತ್ತು ತಂಡಕ್ಕೆ ಸಂಬಂಧಿಸಿದಂತೆ ಆಸ್ತಿ ತೆರಿಗೆದಾರರಿಗೆ ಒನ್ಟೈಮ್ ಸೆಟ್ಲಮೆಂಟ್(ಒಟಿಸಿ) ಜಾರಿಗೆ ತಂದಿದ್ದು, ಇದರಿಂದ 15 ಲಕ್ಷ ತೆರಿಗೆದಾರರಿಗೆ ಸಹಕಾರಿಯಾಗಲಿದೆ. ಏ.1ರಿಂದ ಮಾರ್ಗದರ್ಶನ ಮೌಲ್ಯ ಆಧಾರಿತ ಆಸ್ತಿ ತೆರಿಗೆ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ.
ಹೊಸ ಜಾಹೀರಾತು ನೀತಿ ಜಾರಿಗೆ ತಂದು 500 ಕೋಟಿಗಳ ಜಾಹೀರಾತು ಆದಾಯವನ್ನು ನಿರೀಕ್ಷಿಸುವ ಜೊತೆಗೆ ಒಟ್ಟು 6 ಸಾವಿರ ಕೋಟಿ ಆಸ್ತಿ ತೆರಿಗೆ ಸಂಗ್ರಹ ಮಾಡಲು ತೀರ್ಮಾನಿಸಲಾಗಿದೆ.
ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಗಳು: ಪಾಲಿಕೆಯ ಬಹುತೇಕ ಯೋಜನೆಗಳನ್ನು ಬ್ರ್ಯಾಂಡ್ ಬೆಂಗಳೂರು ಕಲ್ಪನೆಯಡಿ ರೂಪಿಸಲಾಗಿದೆ. ಈ ಉದ್ದೇಶಕ್ಕಾಗಿ ಎಸ್ಕ್ರೋ ಖಾತೆಯನ್ನು ತೆರೆದು ಆದ್ಯತೆ ಮೇರೆಗೆ ಹಣ ಪಾವತಿ ಮಾಡುವುದರ ಜೊತೆಗೆ ಈ ಉದ್ದೇಶಕ್ಕಾಗಿ 1580 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ.
ಸುಗಮ ಸಂಚಾರ: ನಗರದ ಸಂಚಾರಿ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಸುರಂಗ ಮಾರ್ಗ ನಿರ್ಮಾಣಕ್ಕಾಗಿ ಈ ಸಾಲಿನಲ್ಲಿ 200 ಕೋಟಿ ರೂ.ಗಳ ಸೀಡ್ ಮನಿ ಒದಗಿಸಲಾಗಿದೆ. ಮುಖ್ಯ ರಸ್ತೆಗಳ ಅಗಲೀಕರಣ ಮತ್ತು ಅಭಿವೃದ್ಧಿಗಾಗಿ 130 ಕೋಟಿ ರೂ. ಮೀಸಲಿರಿಸಲಾಗಿದೆ.ಸಂಚಾರಯುಕ್ತ ರಸ್ತೆಗಳು ಯೋಜನೆಯಡಿಯಲ್ಲಿ ರಾಜಕಾಲುವೆ ಪಕ್ಕದ ರಸ್ತೆ ಅಭಿವೃದ್ಧಿ 100 ಕೋಟಿ, ಗುಂಡಿರಹಿತ ವೈಟ್ಟಾಪಿಂಗ್ ರಸ್ತೆಗಾಗಿ 300 ಕೋಟಿ, ಸಂಯುಕ್ತ ಮೆಟ್ರೋ- ರಸ್ತೆ, ಮೇಲ್ಸುತುವೆ ಮಾರ್ಗ ನಿರ್ಮಾಣಕ್ಕಾಗಿ 100 ಕೋಟಿ ಒದಗಿಸಲಾಗಿದೆ. ನಗರದಲ್ಲಿ ವಾಹನ ನಿಲುಗಡೆ ನೀತಿಯನ್ನು ಜಾರಿಗೆ ತರಲಾಗುತ್ತಿವೆ.
225 ವಾರ್ಡ್ಗಳ ನಿರ್ವಹಣೆ ಉದ್ದೇಶಕ್ಕಾಗಿ ಪ್ರತಿ
ವಾರ್ಡ್ಗೆ 75 ಲಕ್ಷ ರೂ. ಹಾಗೂ ಅಭಿವೃದ್ಧಿ ಕಾಮಗಾರಿಗಳಿಗಾಗಿ 125 ಕೋಟಿ ರೂ.ಗಳಂತೆ ಒಟ್ಟಾರೆ 450 ಕೋಟಿ ನೀಡಲಾಗಿದೆ.
ಸ್ವಚ್ಛ ಬೆಂಗಳೂರು: ಕಸ ಸಂಸ್ಕರಿಸಲು ನಗರದ ನಾಲ್ಕು ದಿಕ್ಕುಗಳಲ್ಲಿ 50ರಿಂದ ನೂರು ಎಕರೆ ಜಾಗ ಗುರುತಿಸಲಾಗಿದ್ದು, ಜಾಗದ ಖರೀದಿಗಾಗಿ 100 ಕೋಟಿ ಮೀಸಲಿರಿಸಲಾಗಿದೆ. ಮಹಿಳೆಯರ ಪ್ರಾಮುಖ್ಯತೆ ದೃಷ್ಟಿಯಿಂದ 100 ಶೀ ಟಾಯ್ಲೆಂಟ್ ಗಳನ್ನು ನಿರ್ಮಿಸಲಾಗುವುದು.ಬಿಎಸ್ಡಬ್ಲ್ಯೂ ಎಂಎಲ್ಗೆ 1000 ಕೋಟಿ ರೂ.ಗಳ ಅನುದಾನ ನೀಡಲಾಗುವುದು. ಇನ್ನು ಮುಂದೆ ಆಯಾ ವಲಯದ ಪೌರಕಾರ್ಮಿಕರಿಗೆ 50 ಸಾವಿರ ರೂ.ಗಳ 8 ಶರಣೆ ಸತ್ಯಕ್ಕ ಪ್ರಶಸ್ತಿ ನೀಡಲು ಉದ್ದೇಶಿಸಲಾಗಿದೆ.
ಹಸಿರು ಬೆಂಗಳೂರು: ಪರಿಸರದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಹಸಿರು ರಕ್ಷಕ ಮೊಬೈಲ್ ಅಪ್ಲಿಕೇಷನ್ ಅಭಿವೃದ್ಧಿ ಪಡಿಸಲಾಗಿದೆ.ಪ್ರಸಕ್ತ ಸಾಲಿನಲ್ಲಿ 2 ಲಕ್ಷ ಸಸಿಗಳನ್ನು ನೆಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ಎರಡು ಹೈಟೆಕ್ ಸಸ್ಯ ಕ್ಷೇತ್ರಗಳನ್ನು ಸ್ಥಾಪಿಸಲಾಗುತ್ತಿದೆ.ಹೊಸ ಲೇಔಟ್ಗಳಲ್ಲಿ ಉದ್ಯಾನವನಗಳ ಅಭಿವೃದ್ಧಿ 35 ಕೋಟಿ ರೂ. ಒದಗಿಸಲಾಗಿದೆ. ಕೆರೆ ಅಭಿವೃದ್ಧಿ ಹಾಗೂ ತಂತಿ ಬೇಲಿ ಅಳವಡಿಸಲು 35 ಕೋಟಿ ರೂ. ನೀಡಲಾಗಿದ್ದು, ಕೊಳವೆ ಬಾವಿಗಳ ಅಂತರ್ಜಲ ಹೆಚ್ಚಿಸುವ ಉದ್ದೇಶದಿಂದ ತೆರೆದ ಬಾವಿ ಹಾಗೂ ಕಲ್ಯಾಣಿಗಳನ್ನು ಪುನರ್ ಜೀವನಗೊಳಿಸುವುದು ಹಾಗೂ ವಿಶ್ವಬ್ಯಾಂಕ್ ಮತ್ತು ಕೇಂದ್ರ ಸರ್ಕಾರದ ನೆರವಿನಿಂದ ರಾಜಕಾಲುವೆಗಳನ್ನು ಅಭಿವೃದ್ಧಿ ಪಡಿಸಲಾಗುವುದು.
ಶಿಕ್ಷಣ ಬೆಂಗಳೂರು: ಬಿಬಿಎಂಪಿ ಶಾಲಾ- ಕಾಲೇಜುಗಳಲ್ಲಿ ಕಂಪ್ಯೂಟರ್ ಲ್ಯಾಬ್, ಡಿಜಿಟಲ್ ಲ್ಯಾಬ್, ಐಟಿ ಲ್ಯಾಬ್, ಸೈನ್ಸ್ ಲ್ಯಾಬ್, ಈ ಗ್ರಂಥಾಲಯ ಸ್ಥಾಪಿಸಲು 10 ಕೋಟಿ ರೂ. ಒದಗಿಸಲಾಗಿದೆ. ಹೊಸ ಶಾಲಾ ಕಟ್ಟಡಗಳಿಗಾಗಿ 35 ಕೋಟಿ ರೂ. ಮೀಸಲಿರಿಸಲಾಗಿದೆ.
ಟೆಕ್ ಬೆಂಗಳೂರು: ಹಾಲಿ ಬಳಕೆಯಲ್ಲಿರುವ ಸಾಫ್ಟ್ವೇರ್ ಮತ್ತು ಐಟಿ ಆ್ಯಪ್ಗಳನ್ನು ಸಮನ್ವಯಗೊಳಿಸಲು 50 ಕೋಟಿ ಇರಿಸಲಾಗಿದೆ.
350 ಕೋಟಿ ರೂ. ಅಂದಾಜಿನಲ್ಲಿ 255 ಮೀಟರ್ ಎತ್ತರದ ಸ್ಕೈಡೆಕ್ ನಿರ್ಮಿಸಲಾಗುತ್ತಿದ್ದು, ಈ ಸಾಲಿನಲ್ಲಿ ಯೋಜನೆ ಅನುಷ್ಠಾನಕ್ಕಾಗಿ 50 ಕೋಟಿ ಅನುದಾನ ನೀಡಲಾಗುತ್ತಿದೆ. ನಗರದಲ್ಲಿರುವ ಮೇಲ್ಸೇತುವೆ, ಕೆಳಸೇತುವೆ, ಕೂಡು ಜಾಗಗಳು, ಉದ್ಯಾನವನಗಳಲ್ಲಿ ಬಣ್ಣಬಣ್ಣದ ವಿದ್ಯುತ್ ದ್ವೀಪಗಳನ್ನು ಅಳವಡಿಸಲು 100 ಕೋಟಿ ಅನುದಾನ ಹಾಗೂ ಸಾರ್ವಜನಿಕ ಸ್ಥಳಗಳ ಸುಂದರೀಕರಣಕ್ಕಾಗಿ 25 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ.
ಕಲ್ಯಾಣ ವಿಭಾಗ: ನಿವೃತ್ತರಾಗುವ ಪೌರಕಾರ್ಮಿಕರಿಗೆ ಪಿಂಚಣಿ ಯೋಜನೆ ಆರಂಭಿಸಲು 137.50 ಕೋಟಿ ರೂ. ಮೀಸಲಿರಿಸಲಾಗಿದೆ. ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಲ್ಲಿ ಮಹಿಳೆಯರು ಎಸ್ಸಿಎಸ್ಟಿ, ಹಿಂದೂಳಿದ ಅಲ್ಪಸಂಖ್ಯಾತ ಹಾಗೂ ಮಂಗಳಮುಖಿಯರ ಕಲ್ಯಾಣಕ್ಕಾಗಿ ಇ-ಸಾರಥಿ ಯೋಜನೆ ಆರಂಭಿಸಲು 5 ಕೋಟಿ ರೂ. ನಿಗದಿಪಡಿಸಲಾಗಿದೆ.
ಪೌರಕಾರ್ಮಿಕರು, ಕಾರ್ಮಿಕ ಮಹಿಳೆಯರು ಹಾಗೂ ವಿಶೇಷ ಚೇತನರಿಗೆ ವಿದ್ಯುತ್ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ವಿತರಿಸಲು 12 ಕೋಟಿ ಅನುದಾನ, ಮಂಗಳಮುಖಿಯರು ಸಣ್ಣ ಉದ್ಯಮಿ ಆರಂಭಿಸಲು ಹಾಗೂ ಒಬಿಸಿ ವರ್ಗದವರಿಗೆ ಸಹಾಯಧನ ನೀಡಲು ಈ ಸಾಲಿನಲ್ಲಿ 10 ಕೋಟಿ ಅನುದಾನ, ವಸತಿರಹಿತ ಬಡವರಿಗೆ ಮನೆ ನಿರ್ಮಿಸಿಕೊಡುವ ಒಂಟಿ ಮನೆ ಯೋಜನೆಗೆ 211 ಕೋಟಿ ರೂ.ಗಳ ಅನುದಾನ ಹಾಗೂ ನಿರಾಶ್ರಿತ ತಂಗುದಾಣ ನಿರ್ಮಾಣ ಮಾಡಲು 4 ಕೋಟಿ ಹಾಗೂ ಬೀದಿಬದಿ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸುಮಾರು 5 ಸಾವಿರ ಜನರಿಗೆ ಸಬ್ಸಿಡಿ ಆಧಾರಿತ ಇ-ವೆಂಡಿಂಗ್ ರಿಕ್ಷಾ ಒದಗಿಸುವ ಯೋಜನೆಗಾಗಿ 50 ಕೋಟಿ ರೂ.ಗಳ ಅನುದಾನ ನೀಡಲಾಗುತ್ತಿದೆ ಎಂದು ಕಲಕೇರಿ ಅವರು ವಿವರಿಸಿದರು.
ಆರೋಗ್ಯಕರ ಬೆಂಗಳೂರು
ಆರೋಗ್ಯ ಸೇವೆ ಉನ್ನತೀಕರಣಕ್ಕಾಗಿ ಎರಡು ವರ್ಷಗಳಲ್ಲಿ 200 ಕೋಟಿ ರೂ. ಭರಿಸಲು ತೀರ್ಮಾನಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ 100 ಕೋಟಿ ಒದಗಿಸಲಾಗಿದೆ. ಆರೋಗ್ಯ ಮತ್ತು ಪಾಲಿಕೆ ನಡುವಿನ ಸಮನ್ವಯತೆಗಾಗಿ ಬೆಂಗಳೂರು ಆರೋಗ್ಯ ಆಯುಕ್ತರು ಎಂಬ ಹೊಸ ಹುದ್ದೆ ಸೃಷ್ಟಿಸಿ ಇದರ ನಿರ್ವಹಣೆಗಾಗಿ 20 ಕೋಟಿ ರೂ. ಒದಗಿಸಲಾಗುವುದು.
ಸಮಗ್ರ ಸದೃಢ ಆರೋಗ್ಯ ಹೆಸರಿನ ಯೋಜನೆಯನ್ನು ಆರಂಭಿಸಲಾಗುತ್ತಿದ್ದು, ಇದರ ಭಾಗವಾಗಿ ಈ ಸಾಲಿನಲ್ಲಿ 25 ಕೋಟಿ ನೀಡಲಾಗಿದೆ.
ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ನಗರದಾದ್ಯಂತ ಹೊಸದಾಗಿ 50 ಇಂದಿರಾ ಕ್ಯಾಂಟೀನ್ಗಳನ್ನು ಸ್ಥಾಪಿಸಲಾಗುತ್ತಿದೆ. ರುದ್ರಭೂಮಿ ಅಭಿವೃದ್ಧಿಗಾಗಿ 15 ಕೋಟಿ, ಆಧುನೀಕ ಕಸಾಯಿಖಾನೆ, ಪ್ರಾಣಿ ತ್ಯಾಜ್ಯ ವಿಲೇವಾರಿಗಾಗಿ ನಾಲ್ಕು ಘಟಕಗಳನ್ನು ಸ್ಥಾಪಿಸಲು 10 ಕೋಟಿ ರೂ.ಗಳನ್ನು ನೀಡಲಾಗಿದೆ.