Sunday, March 30, 2025
Homeಬೆಂಗಳೂರು19,000 ಕೋಟಿ ದಾಟಲಿದೆ ಬಿಬಿಎಂಪಿ ಬಜೆಟ್‌, ಶನಿವಾರ ಮಂಡನೆ

19,000 ಕೋಟಿ ದಾಟಲಿದೆ ಬಿಬಿಎಂಪಿ ಬಜೆಟ್‌, ಶನಿವಾರ ಮಂಡನೆ

BBMP budget to cross Rs 19,000 crore

ಬೆಂಗಳೂರು, ಮಾ.27- ಪ್ರಸಕ್ತ ಸಾಲಿನ ಬಿಬಿಎಂಪಿ ಬಜೆಟ್‌ ಶನಿವಾರ ಮಂಡನೆಯಾಗಲಿದೆ. ಸರ್ಕಾರ ಇದೇ ಮೊದಲ ಬಾರಿಗೆ ಬಿಬಿಎಂಪಿಗೆ 7 ಸಾವಿರ ಕೋಟಿ ರೂ.ಗಳ ಅನುದಾನ ಘೋಷಣೆ ಮಾಡಿರುವುದರಿಂದ ಈ ಬಾರಿಯ ಬಜೆಟ್‌ 19 ಸಾವಿರ ಕೋಟಿ ರೂ.ಗಳ ಗಡಿ ದಾಟುವ ಸಾಧ್ಯತೆಗಳಿವೆ.

ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್‌ ಅಧ್ಯಕ್ಷತೆಯಲ್ಲಿ ನಗರದ ಶಾಸಕರ ಸಭೆ ನಡೆಸಿದ ಬಳಿಕ ಬಜೆಟ್‌ನಲ್ಲಿ ಸಾಕಷ್ಟು ಬದಲಾವಣೆ ತರಲು ತೀರ್ಮಾನಿಸಲಾಗಿದೆ.ಶನಿವಾರ ಬೆಳಗ್ಗೆ 11 ಗಂಟೆಗೆ ಪುರಭವನದಲ್ಲಿ ಬಿಬಿಎಂಪಿ ಆಡಳಿತಾಧಿಕಾರಿ ಉಮಾಶಂಕರ್‌ ಹಾಗೂ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅಧ್ಯಕ್ಷತೆಯಲ್ಲಿ ಹಣಕಾಸು ವಿಭಾಗದ ವಿಶೇಷ ಆಯಯಕ್ತ ಹರೀಶ್‌ ಮಂಡನೆ ಮಾಡಲಿದ್ದಾರೆ.

ದಾಖಲೆಯ 19 ಸಾವಿರ ಕೋಟಿ ಬಜೆಟ್‌?: ರಾಜಧಾನಿ ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ ಮಹತ್ವದ ಯೋಜನೆಗಳನ್ನು ಕೈಗೊಳ್ಳುವ ಉದ್ದೇಶದಿಂದ ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ಬರೋಬ್ಬರಿ 7 ಸಾವಿರ ಕೋಟಿ ರೂ. ಅನುದಾನ ಒದಗಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಆಸ್ತಿ ತೆರಿಗೆ ಹಾಗೂ ಸರ್ಕಾರದ ಅನುದಾನ ನೆಚ್ಚಿಕೊಂಡು ಬಜೆಟ್‌ ಮಂಡಿಸುವ ಬಿಬಿಎಂಪಿಗೆ ಈ ಬಾರಿಯ ಸರ್ಕಾರದ ದೊಡ್ಡ ಮೊತ್ತದ ಅನುದಾನ ಘೋಷಣೆಯಿಂದ ಬಹುದೊಡ್ಡ ಬಲ ಸಿಕ್ಕಂತ್ತಾಗಿದೆ.

ಇದರೊಂದಿಗೆ ಸಾರ್ವಜನಿಕರಿಗೆ ಹೊರೆಯಾಗದಂತೆ ಜಾಹೀರಾತು, ಪ್ರೀಮಿಯಂ ಎಫ್‌ಎಆರ್‌ ಸೇರಿದಂತೆ ಹೊಸ ಆದಾಯ ಮೂಲಗಳನ್ನು ಹುಡುಕಾಟದಲ್ಲಿದ್ದು, ಆ ಎಲ್ಲವನ್ನೂ ಒಟ್ಟುಗೂಡಿಸಿಕೊಂಡು ಸುಮಾರು 19 ಸಾವಿರ ಕೋಟಿ ರೂ.ಗಳ ಬಜೆಟ್‌ ಮಂಡಿಸುವುದಕ್ಕೆ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪ್ರಮುಖವಾಗಿ 40 ಸಾವಿರ ಕೋಟಿ ರೂ. ವೆಚ್ಚದ ಪೂರ್ವ-ಪಶ್ಚಿಮ ಹಾಗೂ ಉತ್ತರ- ದಕ್ಷಿಣ ಸುರಂಗ ಕಾರಿಡಾರ್‌ ಯೋಜನೆಗೆ ಬಿಬಿಎಂಪಿಯ ಬಜೆಟ್‌ನಲ್ಲಿ ಬುನಾದಿ ಹಾಕುವ ಸಾಧ್ಯತೆ ಇದೆ. ಜತೆಗೆ, ಬ್ರ್ಯಾಂಡ್‌ ಬೆಂಗಳೂರು ಪರಿಕಲ್ಪನೆಯಡಿ, ಕೆರೆ, ಪ್ರವಾಹ ನಿಯಂತ್ರಣ ಕಾಮಗಾರಿಗಳು, ವಿಶ್ವ ಬ್ಯಾಂಕ್‌ ನೆರವಿನ ಯೋಜನೆಗಳು ಬಿಬಿಎಂಪಿಯ ಬಜೆಟ್‌ನಲ್ಲಿ ಅಡಕವಾಗಿರುವ ಸಾಧ್ಯತೆ ಇದೆ.

ಉಳಿದಂತೆ ಕಲ್ಯಾಣ ಯೋಜನೆಗಳು, ನಿರ್ವಹಣೆ ಕಾಮಗಾರಿ ಸೇರಿದಂತೆ ಮೊದಲಾದವುಗಳಿಗೆ ಅನುದಾನ ಮೀಸಲಿಡಲಾಗಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.ಕಳೆದ 2024-25ನೇ ಸಾಲಿನಲ್ಲಿ ಬಿಬಿಎಂಪಿಯು 12,369 ಕೋಟಿ ರೂ. ಗಾತ್ರದ ಬಜೆಟ್‌ ಮಂಡನೆ ಮಾಡಲಾಗಿತ್ತು. ಸರ್ಕಾರ ಅನುಮೋದನೆ ವೇಳೆ ಹೆಚ್ಚುವರಿ 745 ಕೋಟಿ ರೂ ನೀಡುವ ಭರವಸೆಯೊಂದಿಗೆ 13,114 ಕೋಟಿ ರೂ. ಗಾತ್ರಕ್ಕೆ ಹೆಚ್ಚಿಸಿ ಅನುಮೋದನೆ ನೀಡಲಾಗಿತ್ತು.

ಸಾಮಾನ್ಯವಾಗಿ ಶೇ.5 ರಿಂದ 8 ರಷ್ಟು ಬಜೆಟ್‌ ಗಾತ್ರ ವಾರ್ಷಿಕವಾಗಿ ಹೆಚ್ಚಿಸಲಾಗುತ್ತದೆ. ರಾಜ್ಯ ಸರ್ಕಾರವು ಈ ಬಾರಿ ಹೆಚ್ಚುವಾರಿಯಾಗಿ 4 ಸಾವಿರ ಕೋಟಿ ರು. ಅನುದಾನ ನೀಡಿರುವುದರಿಂದ 2025-26ನೇ ಸಾಲಿನ ಬಿಬಿಎಂಪಿಯ ಆಯವ್ಯಯವು 19 ಸಾವಿರ ಕೋಟಿ ರೂ. ದಾಟುವ ಸಾಧ್ಯತೆಗಳಿವೆ.

ನಾಳಿನ ಬಜೆಟ್‌ನಲ್ಲಿ ಬಿಬಿಎಂಪಿ ವ್ಯಾಪ್ತಿಯ ಶಾಸಕರು ಹಾಗೂ ವಿಧಾನಪರಿಷತ್‌ ಸದಸ್ಯರುಗಳು ಭಾಗವಹಿಸಲಿದ್ದಾರೆ. ಆನ್‌ಲೈನ್‌ ಮೂಲಕ ಆಯವ್ಯಯ ಮಂಡನೆಯ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ಬಾರಿಯಂತೆ ಈ ಬಾರಿಯೂ ಬ್ರ್ಯಾಂಡ್‌ ಬೆಂಗಳೂರಿನ ಪರಿಕಲ್ಪನೆಗಳಾದ ಸುಗಮ ಸಂಚಾರಿ ಬೆಂಗಳೂರು, ಸ್ವಚ್ಛ ಬೆಂಗಳೂರು, ಹಸಿರು ಬೆಂಗಳೂರು, ಆರೋಗ್ಯಕರ ಬೆಂಗಳೂರು, ಶಿಕ್ಷಣ ಬೆಂಗಳೂರು ಹೀಗೆ ಎಂಟು ಪರಿಕಲ್ಪನೆಯಲ್ಲಿ ಬಜೆಟ್‌ ಸಿದ್ಧಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಡಿಕೆಶಿ ಕರೆದಿದ್ದ ಬಜೆಟ್‌ಪೂರ್ವ ಸಭೆಗೆ ಗೈರಾಗಿದ್ದ ಬಿಜೆಪಿ ಶಾಸಕರು ತಮ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಮೀಸಲಿಡಬೇಕು ಎಂದು ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಕಾಮಗಾರಿ ವಿಭಾಗ:
ಬ್ರಾಂಡ್‌ ಬೆಂಗಳೂರು ಹೆಸರಲ್ಲಿ ಕೆಲ ರಸ್ತೆಗಳಿಗೆ ವೈಟ್‌ ಟ್ಯಾಪಿಂಗ್‌..ಪಾರ್ಕ್‌, ಪುಟ್‌ ಪಾತ್‌ ಉನ್ನತಿಕರಣ, ಹಾಗೂ ಹೈಟೆಕ್‌ ಸ್ವರ್ಶ.ಟ್ರಾಫಿಕ್‌ ಕಂಟ್ರೋಲ್‌ ಗೆ ಅಂಡರ್‌ ಪಾಸ್‌‍ ನಿರ್ಮಾಣ. ಕೆರೆ. ರಾಜಕಾಲುವೆ ಹುಳು ಎತ್ತುವುದಕ್ಕೆ ಹೆಚ್ಚಿನ ಒತ್ತು. ಪಾಲಿಕೆ ವ್ಯಾಪ್ತಿಯ ಅಸ್ತಿಗಳ ರಕ್ಷಣೆಗೆ ತಂತಿಬೇಲಿ ನಿರ್ಮಾಣ. ನಗರದ ವಿವಿಧ ಕಡೆ ಪಾರ್ಕಿಂಗ್‌ ಸ್ಥಳಗಳ ನಿರ್ಮಾಣ.

ಅದಾಯ ಹೆಚ್ಚಿಸಲು ಹೊಸ ಪಾರ್ಕಿಂಗ್‌ ನೀತಿ ಜಾರಿಗೆ ತರುವ ಸಾಧ್ಯತೆಗಳಿವೆ.

ಶಿಕ್ಷಣ: ಬಿಬಿಎಂಪಿಯಿಂದ ಮೆಡಿಕಲ್‌ ಕಾಲೇಜ್‌ ನಿರ್ಮಾಣ ಸಾಧ್ಯತೆ ಇದೆ. ಬಡ ವಿದ್ಯಾರ್ಥಿಗಳಿಗೆ ಪಬ್ಲಿಕ್‌ ಶಾಲೆ ಓಪನ್‌ .ಬಿಬಿಎಂಪಿ ಶಾಲೆ ಮಕ್ಕಳಿಗೆ ಉಚಿತ ಕಂಪ್ಯೂಟರ್‌ ವಿತರಣೆ. ಪಾಳುಬಿದ್ದ ಶಾಲೆಗಳನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ.ಬಿಬಿಎಂಪಿ ಶಾಲೆಗಳಿಗೆ ಸರ್ಕಾರದಿಂದ ಶಿಕ್ಷಕರ ನೇಮಕ ಮಾಡಲಾಗುವುದು.

ಅರೋಗ್ಯ ಇಲಾಖೆ:
ಇಂದಿರಾ ಕ್ಯಾಂಟೀನ್‌ ಗೆ ಹೆಚ್ಚಿನ ಅನುದಾನ. ಪ್ರತಿ ವಾರ್ಡನಲ್ಲಿ ಇಂದಿರಾ ಕ್ಯಾಂಟೀನ್‌ ಸೌಲಭ್ಯ..ಈಗೀರೋ 185 ಇಂದಿರಾ ಕ್ಯಾಂಟೀನ್‌ ಜೊತೆ ಹೊಸದಾಗಿ 52 ಕ್ಯಾಂಟೀನ್‌ ನಿರ್ಮಾಣ ಮಾಡಲಾಗುತ್ತಿದೆ.ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಎರಡು ಅಂಬ್ಯೂಲೆನ್‌್ಸ ವ್ಯವಸ್ಥೆ. ನಮ್ಮ ಕ್ಲಿನಿಕ್‌ ಮತ್ತಷ್ಟು ಅಭಿವೃದ್ಧಿ.. ಹಾಗೂ ವೈದ್ಯರ ನೇಮಕ. ಪ್ರತಿ ವಲಯದಲ್ಲಿ ಹೈಟೆಕ್‌ ಅಸ್ಪತ್ರೆ ನಿರ್ಮಾಣ. ದೃಷ್ಟಿ ದೋಷ ಇರೋ ವಿದ್ಯಾರ್ಥಿಗಳಿಗೆ ಉಚಿತ ಕನ್ನಡಕ ವಿತರಣೆ ಮಾಡುವ ತೀರ್ಮಾನ ಕೈಗೊಳ್ಳಲಾಗುತ್ತಿದೆ ಎನ್ನಲಾಗಿದೆ.

RELATED ARTICLES

Latest News