ಬೆಂಗಳೂರು,ಜೂ.24- ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಡೆಂಘೀ ಜ್ವರ ಕಾಣಿಸಿಕೊಂಡಿದೆ. ನಗರದ ಒಂದೂವರೆ ಕೋಟಿ ಜನರ ಆರೋಗ್ಯ ಮೇಲ್ವಿಚಾರಣೆ ಹೊಣೆ ಹೊತ್ತಿರುವ ಮುಖ್ಯ ಆಯುಕ್ತರಿಗೆ ಡೆಂಘೀ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ಅನಾರೋಗ್ಯದ ಹೊರತಾಗಿಯೂ, ನಾಥ್ ಅವರು ತಮ ಕರ್ತವ್ಯಗಳನ್ನು ಪೂರೈಸುವುದನ್ನು ಮುಂದುವರೆಸಿದ್ದಾರೆ, ಪ್ರಮುಖ ಸಭೆಗಳಿಗೆ ಹಾಜರಾಗುತ್ತಾರೆ ಮತ್ತು ಅವರ ನಿಯಮಿತ ವೇಳಾಪಟ್ಟಿಯನ್ನು ನಿರ್ವಹಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಜೂನ್ 19 ರ ಬುಧವಾರದಿಂದ ನಾಥ್ ಅವರಿಗೆ ಸೌಮ್ಯ ಜ್ವರ ಕಾಣಿಸಿಕೊಂಡಿತ್ತು ಬಿಬಿಎಂಪಿಯ ಮುಖ್ಯ ಆರೋಗ್ಯಾಧಿಕಾರಿಗಳ ಶಿಫಾರಸಿನ ಮೇರೆಗೆ ಡೆಂಘೀ ಪರೀಕ್ಷೆ ನಡೆಸಿಕೊಂಡಾಗ ಅದು ಪಾಸಿಟಿವ್ ಆಗಿರುವುದು ಗೊತ್ತಾಗಿದೆ.
ನಗರದಲ್ಲಿ ಡೆಂಘಿ ಪ್ರಕರಣಗಳು ಮತ್ತು ಇತರ ಜ್ವರ ವೈರಲ್ ಕಾಯಿಲೆಗಳು ಆತಂಕಕಾರಿ ಹೆಚ್ಚಳವನ್ನು ಕಂಡಿದೆ, ಕೇವಲ 10 ದಿನಗಳಲ್ಲಿ ನಗರದಲ್ಲಿ ಒಟ್ಟು 550 ಡೆಂಘೀ ಪ್ರಕರಣಗಳು ದಾಖಲಾಗಿವೆ.
ಇದು ತೀವ್ರತರವಾದ ಕಾಯಿಲೆಯಾಗಿದ್ದು, ಇದನ್ನು ಮೊದಲೇ ಪತ್ತೆ ಮಾಡದಿದ್ದರೆ, ಜೀವಕ್ಕೆ ಅಪಾಯಕಾರಿ. ಇತ್ತೀಚಿನ ಮಾಹಿತಿಯ ಪ್ರಕಾರ ಬೆಂಗಳೂರಿನಲ್ಲಿ ಹಲವಾರು ಮಂದಿ ಡೆಂಘೀ ಜ್ವರದಿಂದ ಬಳಲುತ್ತಿರುವುದು ಕಂಡು ಬಂದಿದೆ.