ಬೆಂಗಳೂರು, ಅ.28- ಈ ಹಿಂದೆ ಬಿಬಿಎಂಪಿಯಲ್ಲಿ ಕೋಟಿ ಕೋಟಿ ಹಣ ಲೂಟಿ ಹೊಡೆದಿದ್ದ ಕಡು ಭ್ರಷ್ಟ ಅಧಿಕಾರಿಗಳನ್ನು ಯಾವುದೇ ಕಾರಣಕ್ಕೂ ಜಿಬಿಎಯ ಪ್ರಮುಖ ಹುದ್ದೆಗಳಿಗೆ ನೇಮಿಸದಂತೆ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಅವರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಬಿಬಿಎಂಪಿ, ಬಿಡಿಎ, ಬೆಸ್ಕಾಂ ಮತ್ತು ಜಲಮಂಡಳಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತಿತ್ತು. ಇಂತಹ ಸ್ಥಿತಿಯಲ್ಲಿ ಬಿಬಿಎಂಪಿಗೆ ಚುನಾವಣೆ ನಡೆದರೆ ಮುಖಭಂಗವಾಗುವ ಭಯದಿಂದ ನಾಡಪ್ರಭು ಕೆಂಪೇಗೌಡ ನಿರ್ಮಿತ ಬೆಂಗಳೂರನ್ನು ಜಿಬಿಎ ಯನ್ನಾಗಿ ವಿಭಜಿಸಲು ಹೊರಟಿದ್ದೀರಾ ಇಂತಹ ಸಂದರ್ಭದಲ್ಲಿ ಮತ್ತದೆ ಭ್ರಷ್ಟ ಅಧಿಕಾರಿಗಳಿಗೆ ಮಣೆ ಹಾಕುವುದನ್ನು ನಿಲ್ಲಿಸಿ ಎಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಬಹಿರಂಗ ಪತ್ರ ಬರೆದು ಪ್ರಶ್ನಿಸಿದ್ದಾರೆ.
ಬಿಬಿಎಂಪಿಯ ಕಂದಾಯ ಇಲಾಖೆಗಳಲ್ಲಿ ಹೊಸ ಖಾತಾ ಮಾಡುವುದು, ಖಾತಾ ವಿಭಜನೆ, ಖಾತಾ ಒಂದುಗೂಡಿಸುವಿಕೆ ಕಾರ್ಯಗಳಿಂದ ಮೊದಲ್ಗೊಂಡು ಸುಧಾರಣಾ, ಅಭಿವೃದ್ಧಿ ಶುಲ್ಕ ಪಾವತಿಸಿಕೊಳ್ಳದೆಯೇ ಕಾನೂನು ಬಾಹಿರವಾಗಿ ಬಿ ವಹಿ ಸ್ವತ್ತುಗಳಿಗೆ ಅಕ್ರಮ ಎ ಖಾತಾ ನೀಡಿರುವುದರ ಜೊತೆಗೆ ನಗರ ಯೋಜನೆ ಇಲಾಖೆಗಳಲ್ಲಿ:ನಕ್ಷೆ ಮಂಜೂರಾತಿ, ಪ್ರಾರಂಭಿಕ ಪ್ರಮಾಣ ಪತ್ರ ನೀಡಿ ಭಾರಿ ಭ್ರಷ್ಟಾಚಾರ ನಡೆಸಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಯಥಾಸ್ಥಿತಿಯಲ್ಲಿಯೇ ಚುನಾವಣೆ ನಡೆದರೆ ಕಾಂಗ್ರೆಸ್ ಪಕ್ಷಕ್ಕೆ ಬಹುಮತವೆಂಬುದು ಮರೀಚಿಕೆ ಎಂಬ ಸತ್ಯವನ್ನು ಅರಿತು, ಶತಾಯ ಗತಾಯ ಅಧಿಕಾರವನ್ನು ಹಿಡಿಯಲೇಬೇಕೆಂಬ ಏಕೈಕ ದುರುದ್ದೇಶದಿಂದ ಅವರ ಪಕ್ಷದ ಸ್ವಹಿತಾಸಕ್ತಿಗಾಗಿ ನಾಡಪ್ರಭು ಕೆಂಪೇಗೌಡರು ನಿರ್ಮಿಸಿರುವ ಬೆಂಗಳೂರು ಮಹಾನಗರವನ್ನು ಒಡೆದು ಚೂರು ಚೂರುಗಳನ್ನಾಗಿ ಮಾಡಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವನ್ನು ರಚಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಜಿಬಿಎ ವ್ಯಾಪ್ತಿಯಲ್ಲಿ ರಚನೆಯಾಗಿರುವ ಐದು ಪಾಲಿಕೆಗಳಲ್ಲೂ ಪಾರದರ್ಶಕ ಮತ್ತು ಭ್ರಷ್ಟಾಚಾರ ರಹಿತ ಆಡಳಿತ ನಡೆಸಬೇಕು ಎಂಬ ಉದ್ದೇಶ ಸರ್ಕಾರಕ್ಕೆ ಇದ್ದರೆ, ಆಡಳಿತದ ಕೆಳ ಹಂತದಿಂದ ಅಂತಿಮ ಹಂತದವರೆಗೆ ಸಂಪೂರ್ಣವಾಗಿ ಶೇ. 100% ರಷ್ಟು ಕಾಗದ ರಹಿತ ಆಡಳಿತ ನೀಡುವುದು. ವಿದ್ಯುನ್ಮಾನ ಪ್ರತಿಗಳ ಕಡತಗಳಿಗೆ ಒತ್ತುಕೊಟ್ಟು, ಸಾರ್ವಜನಿಕರಾಗಲೀ ಅಥವಾ ಗುತ್ತಿಗೆದಾರರಾಗಲೀ ಕಛೇರಿಯಿಂದ ಕಛೇರಿಗೆ ಅಲೆಯುವುದನ್ನು ತಪ್ಪಿಸಿ, ಆಯಾ ಕಡತಗಳ ಅನುಮೋದನೆಗೆ ಪ್ರತಿಯೊಬ್ಬ ಅಧಿಕಾರಿಗೆ ಗರಿಷ್ಠ 24 ಗಂಟೆಗಳ ಕಾರ್ಯಾವಧಿಯನ್ನು ನಿಗದಿ ಪಡಿಸುವುದು ಹಾಗೂ ಮೂರು ದಿನಗಳ ಒಳಗಾಗಿ ಆಯಾ ಕಡತಗಳಿಗೆ ಅನುಮೋದನೆ ನೀಡಿ ಮೇಲಾಧಿಕಾರಿಗೆ ಕಡತವನ್ನು ರವಾನಿಸದ ಅಧಿಕಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಸೂಕ್ತ ಎಂದು ಅವರು ಸಲಹೆ ನೀಡಿದ್ದಾರೆ.
ಪ್ರತಿಯೊಂದು ಇಲಾಖೆಯ ಕೆಳ ಹಂತದ ಕಛೇರಿಯಿಂದ ಮೊದಲ್ಗೊಂಡು ಎಲ್ಲಾ ಆಯುಕ್ತರ ಕಛೇರಿಗಳಲ್ಲಿ ಸಿ.ಸಿ. ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸುವುದು, ಕರ್ತವ್ಯದದಲ್ಲಿದ್ದಾಗ ಖಾಸಗಿ ಸ್ಥಳಗಳಲ್ಲಿ ಸಾರ್ವಜನಿಕರನ್ನು ಭೇಟಿ ಮಾಡುವುದನ್ನುನಿಷೇಧಿಸುವುದು, ಪ್ರತಿಯೊಬ್ಬ ಅಧಿಕಾರಿ ಬಳಸುವ ಸರ್ಕಾರಿ ವಾಹನ ಮತ್ತು ಸ್ವಂತ ವಾಹನಗಳಿಗೆ ಆರ್‌ಎಫ್‌ಐಡಿ ಅಳವಡಿಕೆಯನ್ನು ಕಡ್ಡಾಯಗೊಳಿಸಿ, ಪ್ರತಿಯೊಂದು ಇಲಾಖೆಯ ಪ್ರತಿಯೊಬ್ಬ ನೌಕರರು ನಿರ್ವಹಿಸಿರುವ ಕಾರ್ಯವು ಕ್ರಮಬದ್ಧವಾಗಿದೆಯೇ ? ಅಥವಾ ಕಾನೂನು ಬಾಹಿರವಾಗಿದೆಯೇ ? ಎಂಬ ಬಗ್ಗೆ ಕಛೇರಿವಾರು ಮಾಹಿತಿಯನ್ನು ಪ್ರತೀ ತಿಂಗಳಿಗೊಮ್ಮೆ ವಿಶೇಷ ತಂಡದಿಂದ ಪಡೆದುಕೊಳ್ಳುವುದು.
ಇವೆಲ್ಲವುಗಳಿಗಿಂತಲೂ ಮುಖ್ಯವಾಗಿ ದ್ವಿತೀಯ ದರ್ಜೆ ನೌಕರರಿಂದ ಮೊದಲ್ಗೊಂಡು ಆಯುಕ್ತರವರೆಗೆ ಪ್ರತಿಯೊಬ್ಬರೂ ಪ್ರತೀ ವರ್ಷ ನಿಗದಿತ ಸಮಯದೊಳಗೆ ತಮ್ಮ ತಮ್ಮ ಆಸ್ತಿಯನ್ನು ಲೋಕಾಯುಕ್ತ ಕಛೇರಿಯಲ್ಲಿ ಸಲ್ಲಿಸಬೇಕೆಂಬ ಕಡ್ಡಾಯ ನಿಯಮವನ್ನು ಜಾರಿಗೆ ತರಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಬಿಬಿಎಂಪಿಯಲ್ಲಿ ನೂರಾರು ಕೋಟಿ ಅವ್ಯವಹಾರ ನಡೆಸಿದ್ದವರು ಹಾಗೂ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದಂತಹ ಅಧಿಕಾರಿಗಳನ್ನು ಜಿಬಿಎಯ ಯಾವುದೆ ಪ್ರಮುಖ ಹುದ್ದೆಗೆ ನೇಮಿಸುವುದು ಸೂಕ್ತವಲ ಅವರು ಮನವಿ ಮಾಡಿಕೊಂಡಿದ್ದಾರೆ.
