ಬೆಂಗಳೂರು, ಜ.22– ತೆರಿಗೆ ಕಟ್ಟದ ಕಟ್ಟಡಗಳ ಮಾಲೀಕರುಗಳಿಗೆ ಬಿಬಿಎಂಪಿ ಶಾಕ್ ನೀಡಿದೆ. ತೆರಿಗೆ ಪಾವತಿಸಲು ಸತಾಯಿಸುತ್ತಿರುವ ಕೆಲ ಕಟ್ಟಡಗಳ ಹರಾಜಿಗೆ ಪಾಲಿಕೆ ಸಿದ್ದತೆ ಮಾಡಿಕೊಂಡಿದೆ. ಈಗಾಗಲೇ ಬಾಕಿ ತೆರಿಗೆ ಉಳಿಸಿಕೊಂಡ ಕಟ್ಟಡ ಮಾಲೀಕರಿಗೆ ನೋಟೀಸ್ ಜಾರಿ ಮಾಡಿರುವ ಬಿಬಿಎಂಪಿ ಅಧಿಕಾರಿಗಳು ಮೊದಲ ಹಂತದಲ್ಲಿ ನಾಲ್ಕು ಕಟ್ಟಡಗಳ ಹರಾಜಿಗೆ ಸಿದ್ದತೆ ಮಾಡಿಕೊಂಡಿದ್ದಾರೆ.
ದಾಸರಹಳ್ಳಿ ವಲಯದಲ್ಲಿ ಎರಡು, ಪೂರ್ವ ಹಾಗೂ ಬೊಮನಹಳ್ಳಿ ವಲಯಗಳಲ್ಲಿ ತಲಾ ಒಂದೊಂದು ಕಟ್ಟಡ ಹರಾಜು ಹಾಕಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ.
ದಾಸರಹಳ್ಳಿ ವಲಯದಲ್ಲಿ ಎಂ.ರಂಗಪ್ಪ ಎಂಬುವರು 1.85 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿದ್ದು ಅವರ ಕಟ್ಟಡವನ್ನು 12 ಕೋಟಿ ರೂ.ಗಳಿಗೆ ಮೇಲ್ಪಟ್ಟು ಹರಾಜು ಹಾಕಲಾಗುತ್ತಿದೆ. ಅದೇ ರೀತಿ ಶಂಕರೇಗೌಡ ಎಂಬುವರು 31 ಲಕ್ಷ ತೆರಿಗೆ ಬಾಕಿ ಉಳಿಸಿಕೊಂಡಿರುವುದರಿಂದ ಅವರ ಕಟ್ಟಡವನ್ನು 15 ಕೋಟಿ ರೂ.ಗಳಿಗೆ ಹರಾಜು ಹಾಕಲಾಗುತ್ತಿದೆ.
ಇನ್ನು ಬೊಮನಹಳ್ಳಿ ವಲಯದ ಎಂ.ಕುಮಾರ್ ಎಂಬುವರು 31.94 ಲಕ್ಷ ರೂ. ತೆರಿಗೆ ಬಾಕಿ ಉಳಿಸಿಕೊಂಡಿದ್ದು ಅವರ ಕಟ್ಟಡವನ್ನು 6.62 ಕೋಟಿ ರೂ.ಗಳಿಗೆ ಹಾಗೂ ಪೂರ್ವ ವಲಯದ ಮೊಹಮದ್ ಇಶಾಕ್ ಎಂಬುವರಿಗೆ ಸೇರಿದ ಕಟ್ಟಡ 11.22 ಲಕ್ಷ ತೆರಿಗೆ ಪಾವತಿಸಬೇಕಿದ್ದು ಅವರ ಕಟ್ಟಡವನ್ನು 10.49 ಕೋಟಿಗೆ ಹರಾಜು ಹಾಕಲು ನಿರ್ಧರಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ನಾಲ್ಕು ಕಟ್ಟಡಗಳ ಮಾಲೀಕರುಗಳಿಗೆ ಈಗಾಗಲೇ ನೋಟೀಸ್ ನೀಡಿ ಹರಾಜಿಗೆ ಸಿದ್ದತೆ ನಡೆಸಿದ್ದು, ಫೆಬ್ರವರಿ 5 ಇಲ್ಲವೇ 6 ರಂದು ಹರಾಜು ಹಾಕಲಾಗುತ್ತಿದೆ. ಹರಾಜಿನಲ್ಲಿ ಬಾಕಿ ಉಳಿದ ಹಣವನ್ನು ಕಟ್ಟಡ ಮಾಲೀಕರ ಅಕೌಂಟ್ ಗೆ ಜಮಾ ಮಾಡಲು ತೀರ್ಮಾನಿಸಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಮಾಹಿತಿ ನೀಡಿದ್ದಾರೆ.