Saturday, March 1, 2025
Homeಬೆಂಗಳೂರುಮೇ ತಿಂಗಳಿನಲ್ಲಿ ಬಿಬಿಎಂಪಿ ಚುನಾವಣೆ ಫಿಕ್ಸ್

ಮೇ ತಿಂಗಳಿನಲ್ಲಿ ಬಿಬಿಎಂಪಿ ಚುನಾವಣೆ ಫಿಕ್ಸ್

BBMP elections in May

ಬೆಂಗಳೂರು, ಮಾ.1 – ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಅನುದಾನ ಹಂಚಿಕೆಯಲ್ಲಿ ಭಾರೀ ತಾರತಮ್ಯ ಮಾಡಲಾಗಿತ್ತು. ಅದನ್ನು ಮರೆಮಾಚಿ ಈಗ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.

ನಿನ್ನೆ ಬಿಜೆಪಿ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಅನುದಾನ ಹಂಚಿಕೆಯಲ್ಲಿನ ತಾರತಮ್ಯ ಸರಿಪಡಿಸುವಂತೆ ಮನವಿ ಮಾಡಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, 2018 ರಲ್ಲಿ ಸಿದ್ದರಾಮಯ್ಯ ಅವರ ನಿರ್ಗಮಿತ ಸರ್ಕಾರ ಬಜೆಟ್‌ ನಲ್ಲಿ ಬಿಬಿಎಂಪಿಗೆ 7 ಸಾವಿರ ಕೋಟಿ ನಿಗದಿ ಮಾಡಿತ್ತು. ಅನಂತರ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸರ್ಕಾರದಲ್ಲಿ ಇನ್ನೂ 1 ಸಾವಿರ ಕೋಟಿ ರೂ. ಒದಗಿಸಲಾಯಿತು.

ಒಟ್ಟು 7 ಸಾವಿರ ಕೋಟಿ ರೂ.ಗಳನ್ನು ಆಪರೇಷನ್ ಕಮಲದ ಮೂಲಕ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಯಡಿಯೂರಪ್ಪ ಹಂಚಿಕೆ ಮಾಡಿದ್ದಾರೆ. ಆಗ ಕಾಂಗ್ರೆಸ್ ಶಾಸಕರಿಗೆ ನೀಡಿದ್ದ ಅನುದಾನದಲ್ಲಿ ಶೇ.50ರಷ್ಟು ಕಡಿತ ಮಾಡಲಾಗಿತ್ತು. ತಮ್ಮ ಕ್ಷೇತ್ರಕ್ಕೆ 387 ಕೋಟಿ ರೂ. ಬದಲಾಗಿ 152 ಕೋಟಿ ರೂ. ಮಾತ್ರ ನೀಡಲಾಗಿತ್ತು ಎಂದು ವಿವರಿಸಿದರು.

ಯಡಿಯೂರಪ್ಪನವರ ಸರ್ಕಾರ ಬಿಬಿಎಂಪಿ ಅಭಿವೃದ್ಧಿಗೆ 8 ಸಾವಿರ ಕೋಟಿ ರೂ. ನೀಡಿದೆ ಎಂದು ಪದೇಪದೇ ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ಇದು ಆಧಾರರಹಿತ. ನಮ್ಮ ಸರ್ಕಾರದಲ್ಲಿ ಯಾರಿಗೂ ಅನ್ಯಾಯ ಮಾಡಿಲ್ಲ. ಈಗಲೂ ತಾವು ಬಿಜೆಪಿ ಶಾಸಕರಿಗೆ ಸಾಕಷ್ಟು ಅನುದಾನ ನೀಡುವಂತೆಯೇ ಮುಖ್ಯಮಂತ್ರಿಯವರಿಗೆ ಮನವಿ ಮಾಡುತ್ತೇವೆ ಎಂದರು.

ಬಿಜೆಪಿ ಮತ್ತು ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಬಿಬಿಎಂಪಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ಕುರಿತು ವಿಶ್ಲೇಷಣೆ ನಡೆಸಿದ ಅವರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದ ಅಭಿವೃದ್ಧಿ ಯೋಜನೆಗಳ ಪಟ್ಟಿ ಮಾಡಿದರು. ಬಿಜೆಪಿ ಕಾಲದಲ್ಲಿ ಆಸ್ತಿಗಳನ್ನು ಅಡಮಾನ ಮಾಡಲಾಗಿತ್ತು. ಕಸದ ನಗರ ಎಂಬ ಅಪಕೀರ್ತಿ ಬಂದಿತ್ತು. ನಮ್ಮ ಸರ್ಕಾರ ಹೊರವರ್ತುಲ ರಸ್ತೆ, ವೈಟ್ ಟಾಪಿಂಗ್, ಮೇಲೇತುವೆ, ಕೆಳ ಸೇತುವೆ ಸೇರಿದಂತೆ ಹಲವಾರು ಕಾಮಗಾರಿಗಳನ್ನು ಕೈಗೊಂಡಿದೆ ಎಂದು ಹೇಳಿದರು.

ವಿಜಯೇಂದ್ರ ಅವರು ನಿನ್ನೆ ಹೇಳಿಕೆ ನೀಡುವಾಗ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಪ್ರತಿವರ್ಷ ಬಿಬಿಎಂಪಿಗೆ 8 ಸಾವಿರ ಕೋಟಿ ರೂ. ನೀಡುತ್ತಿದ್ದರು ಎಂದು ಹೇಳಿದ್ದಾರೆ. ಹಾಗಿದ್ದರೆ 32 ಸಾವಿರ ಕೋಟಿ ರೂ. ಆಗಬೇಕಿತ್ತು. ಅಷ್ಟು ಹಣ ಎಲ್ಲಿ ಹೋಯಿತು? ಎಂದು ರಾಮಲಿಂಗಾರೆಡ್ಡಿ ಪ್ರಶ್ನಿಸಿದರು.

ಅವರ ಕಾಲದಲ್ಲಿ 1 ಕಿ.ಮೀ. ನಷ್ಟೂ ಮಳೆಗಾಲುವೆ ಪುನರುಜ್ಜಿವನ ಮಾಡಿಲ್ಲ, ಟೆಂಡರ್ ಶೂರ್ ಕಾಮಗಾರಿ ಮೂಲೆಗುಂಪಾಗಿದ್ದವು. ರಸ್ತೆ ಗುಂಡಿಗಳನ್ನು ಮುಚ್ಚಲು ಹೈಕೋರ್ಟ್ ನಿಗಾ ವಹಿಸಬೇಕಾಯಿತು. ಅಷ್ಟು ದುರಾಡಳಿತ ಬೆಂಗಳೂರಿನಲ್ಲಿತ್ತು. ಪ್ರತಿ ತಿಂಗಳು ಬಿಬಿಎಂಪಿ ಆಯುಕ್ತರು ಕೋರ್ಟ್ನಲ್ಲಿ ನಿಲ್ಲಬೇಕಿತ್ತು. ಅಷ್ಟು ಖರ್ಚು ಮಾಡಿದ್ದರೆ ಸಮಸ್ಯೆಗಳೇ ಇರುವಂತಿರಲಿಲ್ಲವಲ್ಲ ಎಂದರು.

ಪಶ್ಚಿಮ ಬೆಂಗಳೂರು ಮಳೆಯಿಂದ ಮುಚ್ಚಿ ಹೋಗಿತ್ತು. ಆಗ ಸರ್ಕಾರ ಕ್ರಮವನ್ನೇ ತೆಗೆದುಕೊಳ್ಳಲಿಲ್ಲ. ಈಗ ಅನುದಾನದ ತಾರತಮ್ಯ ಎಂದು ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದಾರೆ. ಇದೆಲ್ಲಾ ಆಧಾರರಹಿತ ಎಂದರು.

ಬಿಬಿಎಂಪಿಗೆ ಮೇ ತಿಂಗಳಿನಲ್ಲಿ ಚುನಾವಣೆ ನಡೆಯಲಿದೆ. ಗ್ರೇಟರ್ ಬೆಂಗಳೂರಿಗೆ ಶಾಸಕ ರಿಜ್ವಾನ್ ಅರ್ಷದ್ ಅವರ ಅಧ್ಯಕ್ಷತೆಯ ಸಂಸದೀಯ ಸಮಿತಿ ವರದಿ ನೀಡಿದೆ. ಅದರ ಆಧಾರವಾಗಿ ವಿಧಾನಮಂಡಲದಲ್ಲಿ ಮಸೂದೆ ಮಂಡಿಸಲಾಗುವುದು. ಅಂಗೀಕಾರಗೊಂಡ ಬಳಿಕ ರಾಜ್ಯಪಾಲರ ಅನುಮೋದನೆ ನೀಡಬೇಕಿದೆ. ನಂತರ ಅದರ ಆಧಾರದ ಮೇಲೆ ಚುನಾವಣೆ ನಡೆಯಲಿದೆ ಎಂದರು.

ಗ್ರೇಟರ್ ಬೆಂಗಳೂರಿನಲ್ಲಿ ಸಾಕಷ್ಟು ಬದಲಾವಣೆಗಳಾಗಲಿವೆ. 2 ಅಥವಾ 3 ಪಾಲಿಕೆಗಳು ವಿಂಗಡಣೆಗಳಾಗಲಿವೆ. ಪ್ರತೀ ಪಾಲಿಕೆಯ ವಾರ್ಡ್‌ಗಳ ಸಂಖ್ಯೆ ಕೂಡ ವ್ಯತ್ಯಾಸವಾಗಲಿದೆ. ಈಗಿರುವ ಬೆಂಗಳೂರನ್ನು ಒಬ್ಬ ಆಯುಕ್ತ ಅಥವಾ ಒಬ್ಬ ಮೇಯರ್ ನಿಭಾಯಿಸಲು ಸಾಧ್ಯವಿಲ್ಲ. ಹೀಗಾಗಿ ಗ್ರೇಟರ್ ಬೆಂಗಳೂರು ಅನಿವಾರ್ಯ ಎಂದರು.

ಮಹಾರಾಷ್ಟ್ರಕ್ಕೆ 509 ಮಾರ್ಗಸಂಚಾರಗಳಿರುತ್ತವೆ. ಭಾಷಾ ವಿವಾದಕ್ಕೆ ಸಂಬಂಧಪಟ್ಟಂತೆ ಗೊಂದಲಗಳಿಂದಾಗಿ ಕೆಲವೊಂದಿಷ್ಟು ಸಮಸ್ಯೆಯಾಗಿತ್ತು. ಆದರೆ ಸಂಚಾರ ಸ್ಥಗಿತಗೊಂಡಿಲ್ಲ. ಪೊಲೀಸರು ಮತ್ತು ಹಿರಿಯ ಅಧಿಕಾರಿಗಳು ಚರ್ಚೆ ಮಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಕರ್ನಾಟಕದ ನಿರ್ವಾಹಕನ ವಿರುದ್ಧ ನೀಡಿದ್ದ ಪ್ರಕರಣವನ್ನು ಹಿಂಪಡೆದಿದ್ದರಿಂದ ವಾತಾವರಣ ತಿಳಿಯಾಗಿದೆ ಎಂದು ಹೇಳಿದರು.

RELATED ARTICLES

Latest News