ಬೆಂಗಳೂರು, ಫೆ.23- ಯಾರಿಗೆ ಇಷ್ಟ ಇರಲಿ, ಬಿಡಲಿ ಮುಂದಿನ ಮೇನಲ್ಲಿ ಬಿಬಿಎಂಪಿ ಚುನಾವಣೆ ನಡೆಯಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಬನಶಂಕರಿ ದೇವಸ್ಥಾನದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಭಾಗಿಯಾಗಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 2020ರ ಸೆಪ್ಟೆಂಬರ್‌ನಿಂದ ಬಿಬಿಎಂಪಿ ಚುನಾವಣೆ ನಡೆದಿಲ್ಲ.
ಹಿಂದೆ ಇದ್ದ ಬಿಜೆಪಿ ಸರ್ಕಾರ ಹಾಗೂ 2015ರ ನಂತರ ನಮ ಸರ್ಕಾರದಿಂದಲೂ ಚುನಾವಣೆ ನಡೆಯದೆ ವಿಳಂಬವಾಗಿದೆ. ಆದರೆ, ಬಹುಬೇಗನೆ ಚುನಾವಣೆ ನಡೆಸಬೇಕೆಂಬುದು ನನ್ನ ಬಯಕೆ ಎಂದು ಹೇಳಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಮಾಡಿದ್ದರಿಂದ ಚುನಾವಣೆ ವಿಳಂಬವಾಗಿದೆ. ನಾವು ಇಷ್ಟ ಪಡುತ್ತೇವೊ, ಇಲ್ಲವೋ ಮೇನಲ್ಲಿ ಚುನಾವಣೆ ನಡೆಸಬೇಕು. ಇಲ್ಲದಿದ್ದರೆ ಸುಪ್ರೀಂಕೋರ್ಟ್‌ನಿಂದಲೇ ನಮಗೆ ಆದೇಶ ಹೊರಡಿಸಬಹುದು ಎಂದು ಹೇಳಿ ಕುತೂಹಲ ಕೆರಳಿಸಿದರು.