ಬೆಂಗಳೂರು,ಮೇ.16- ಕಳೆದ ನಾಲ್ಕು ವರ್ಷಗಳಿಂದ ತಡೆಹಿಡಿಯಲಾಗಿರುವ ಬಿಬಿಎಂಪಿ ಚುನಾವಣೆಯನ್ನು ಜನಗಣತಿ ಮುಗಿದ ನಂತರವೇ ಕೈಗೆತ್ತಿಕೊಳ್ಳಬೇಕು ಎಂದು ಮಾಹಿತಿ ಹಕ್ಕು ಅಧ್ಯಯನ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ.
ಲೋಕಸಭಾ ಚುನಾವಣೆ ಬೆನ್ನಲ್ಲೆ ಬಿಬಿಎಂಪಿ ಚುನಾವಣೆ ನಡೆಸುತ್ತಾರೆಂಬ ಸುದ್ದಿ ಕೇಳಿಬರುತ್ತಿದೆ. ಆದರೆ ಹಲವಾರು ಕಾರಣಗಳಿಂದ ಬಿಬಿಎಂಪಿ ಚುನಾವಣೆ ಮುಂದೂಡಲ್ಪಟ್ಟಿದೆ. ಈಗ ಈ ಸಂದಂರ್ಭದಲ್ಲಿ ಜನಗಣತಿ ಕೂಡ ಆಗಿಲ್ಲ. 2021 ರಲ್ಲಿ ಜನಗಣತಿ ಮುಗಿಯಬೇಕಿತ್ತು.
ಆದರೆ ಕೋವಿಡ್ ಹಾಗೂ ಇನ್ನಿತರ ಕಾರಣಗಳಿಂದ ಜನಗಣತಿ ಕಾರ್ಯ ಆರಂಭವಾಗಿಲ್ಲ. ಆದ್ದರಿಂದ ತಾವು ತಕ್ಷಣವೇ ಜನಗಣತಿಗೆ ಆದೇಶಿಸಬೇಕೆಂದು ಕೋರುತ್ತೇನೆ ಎಂದು ಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ಅಮರೇಶ್ ಕೇಳಿಕೊಂಡಿದ್ದಾರೆ.
ಜನಗಣತಿ ಮುಗಿದ ನಂತರ ಮೀಸಲಾತಿ ಮಾಡುವುದು ವೈಜ್ಞಾನಿಕವಾಗಿರುತ್ತದೆ. 14 ವರ್ಷಗಳ ಹಿಂದಿನ ಜನಗಣತಿ ಆಧಾರದ ಮೇಲೆ ವಾರ್ಡ್ ಮೀಸಲಾತಿ ಮಾಡುವುದು ಅವೈಜ್ಞಾನಿಕವಾಗಿರುತ್ತದೆ. ಇದರಿಂದಾಗಿ ಮೀಸಲಾತಿ ವಿರುದ್ಧ ಆಕಾಂಕ್ಷಿಗಳಿಗೆ ಅನ್ಯಾಯವಾದರೆ ಕೋರ್ಟ್ ಮೆಟ್ಟಿಲು ಹತ್ತುವುದು ಖಚಿತ.
ಹಾಗೂ ಮತ್ತೊಂದು ಪ್ರಮುಖ ಅಂಶವೆಂದರೆ ಈಗ ವಾರ್ಡ್ ಮರುವಿಂಗಡನೆ ಮಾಡಿದಾಗ ಗೆಜೆಟ್‌ನಲ್ಲಿ ಬೆಂಗಳೂರಿನ ಸುತ್ತಲೂ 1.ಕೀ. ಮೀ ವ್ಯಾಪ್ತಿ ಭೂ ಪ್ರದೇಶವನ್ನು ಬಿಬಿಎಂಪಿ ವ್ಯಾಪ್ತಿಯೊಳಗೆ ಸೇರಿಸಿಕೊಳ್ಳಲಾಗಿದೆ. ಆದರೆ ವಾರ್ಡ್ ಮರುವಿಂಗಡನೆ ಮಾಡಿದಾಗ ವಾರ್ಡ್ ಮರುವಿಂಗಡನೆ ವ್ಯಾಪ್ತಿಯೊಳಗೆ 1.ಕೀ.ಮೀ ಪ್ರದೇಶ ಸೇರಿಸಿಕೊಂಡಿಲ್ಲ. ಇದು ಕೂಡ ಅವೈಜ್ಞಾನಿಕವಾಗಿದ್ದು ಟಿಕೇಟ್ ಆಕಾಂಕ್ಷಿಗಳಿಗೆ ಕೋರ್ಟ್ ಮೆಟ್ಟಿಲೇರಲು ಅತ್ಯಂತ ಅನುಕೂಲಕರವಾಗಿದೆ.
ಆದ್ದರಿಂದ ಈ ಎರಡೂ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಬಿಬಿಎಂಪಿ ಚುನಾವಣೆ ನಡೆಸುವುದರ ಬಗ್ಗೆ ಪರಿಶೀಲನೆ ಮಾಡಿ ತೀರ್ಮಾನ ಕೈಗೊಳ್ಳಬೇಕು ಎಂದು ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.